Advertisement

BJP: ದಲಿತ ಬಲಗೈ ಮತಗಳ ಮೇಲೆ ಕಣ್ಣಿಟ್ಟ ಬಿಜೆಪಿ!

02:43 PM Jan 17, 2024 | Team Udayavani |

ಕೋಲಾರ: ದಲಿತ ಉಪಜಾತಿ ಮತಗಳ ಕ್ರೂಢೀಕರಿಸುವ ಓಲೈಕೆ ರಾಜಕಾರಣಕ್ಕೆ ಬಿಜೆಪಿ ಮುಂದಾಗಿದ್ದು, ಮಂಗಳವಾರ ಕೋಲಾರದಲ್ಲಿ ದಲಿತ ಬಲಗೈ ಮುಖಂಡರು, ದಲಿತ ಸಂಘಟನೆಯ ಕಾರ್ಯಕರ್ತರ ಭೀಮ ಸಮಾವೇಶ ನಡೆಸುವ ಮೂಲಕ ಚಾಲನೆ ನೀಡಿತು.

Advertisement

ರಾಜಕೀಯ ಪಕ್ಷಗಳು ವಿವಿಧ ಧರ್ಮ, ಹಲವು ಜಾತಿ, ಹಣಬಲ ವ್ಯಕ್ತಿಗಳ ಮೂಲಕ ರಾಜಕಾರಣ ನಡೆಸುತ್ತವೆ ಎಂಬ ಆರೋಪ ಇತ್ತೀಚಿನ ವರ್ಷಗಳಲ್ಲಿ ದೊಡ್ಡಮಟ್ಟದಲ್ಲೇ ಕೇಳಿ ಬರುತ್ತಿತ್ತು. ಆದರೆ, ಇದುವರೆಗೂ ಯಾವುದೇ ರಾಜಕೀಯ ಪಕ್ಷ ಉಪಜಾತಿಗಳ ಸಮಾವೇಶಗಳನ್ನು ಬಹಿರಂಗವಾಗಿ ಬೃಹತ್‌ ಮಟ್ಟದಲ್ಲಿ ಆಯೋಜಿಸಿರಲಿಲ್ಲ. ಟಿಕೆಟ್‌ ಹಂಚಿಕೆ ಸಂದರ್ಭದಲ್ಲಿ ಆಯಾ ಕ್ಷೇತ್ರದ ಉಪಜಾತಿ ಮತದಾರರನ್ನು ಗಮನದಲ್ಲಿಟ್ಟುಕೊಂಡೇ ಟಿಕೆಟ್‌ ಹಂಚಿಕೆ ಮಾಡುತ್ತಿದ್ದವಾ ದರೂ, ಈ ವಿಚಾರವನ್ನು ಬಹಿರಂಗವಾಗಿ ಹೇಳಿಕೊಳ್ಳದೆ ಸಮಸ್ತ ದಲಿತ ಅಭ್ಯರ್ಥಿ ಎಂದೇ ಬಿಂಬಿಸುತ್ತಿತ್ತು. ಆದರೆ, ಇದೀಗ ಬಿಜೆಪಿ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಲೋಕಸಭಾ ಚುನಾವಣಾ ಸಿದ್ಧತೆಯ ಭಾಗವಾಗಿ ದಲಿತ ಬಲಗೈ ಉಪಜಾತಿ ಸಮಾವೇಶವೊಂದನ್ನು ಇದೇ ಮೊದಲ ಬಾರಿಗೆ ಬಹಿರಂಗವಾಗಿ ಕೋಲಾರದಲ್ಲಿ ಆಯೋಜಿಸಿ ಗಮನ ಸೆಳೆಯಿತು.

ಪೂರ್ವ ಸಿದ್ಧತಾ ಸಭೆ: ವಾರದ ಹಿಂದಷ್ಟೇ ಕೋಲಾರ ಬಿಜೆಪಿ ಕಚೇರಿಯಲ್ಲಿ ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ ಬಲಗೈ ಸಮುದಾಯ ಮುಖಂಡರ ಪೂರ್ವಸಿದ್ಧತಾ ಸಭೆ ನಡೆಸಲಾಯಿತು. ಇದೇ ಸಭೆಯಲ್ಲಿ ಕೋಲಾರದಲ್ಲಿ ನಡೆಯಲಿರುವ ಮೊದಲ ಭೀಮಸಮಾವೇಶ ಕುರಿತಂತೆ ಸಂಸದ ಮುನಿಸ್ವಾಮಿ ದಲಿತ ಮುಖಂಡರಿಗೆ ವಿವರಿಸಿದ್ದರು. ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಕೋರಿದ್ದರು. ಸಭೆಯ ಉಸ್ತುವಾರಿಯನ್ನು ಸಂಸದ ಮುನಿಸ್ವಾಮಿಯೇ ಹೊತ್ತುಕೊಂಡಿದ್ದರು. ಕೋಲಾರದ ನಾರಾಯಣಿ ಮದುವೆ ಛತ್ರದಲ್ಲಿ ಭೀಮ ಸಮಾವೇಶಕ್ಕೆ ಜಾಗ ನಿಗದಿಪಡಿಸಲಾಗಿತ್ತು.

ಬಲಗೈ ನಾಯಕರ ದಂಡು: ಕೋಲಾರದ ಮೊದಲ ಭೀಮ ಸಮಾವೇಶಕ್ಕೆ ದಲಿತ ಬಲಗೈ ಮುಖಂಡರಾದ ಎಸ್‌.ಮಹೇಶ್‌, ಛಲವಾದಿ ನಾರಾಯಣಸ್ವಾಮಿ, ಎಸ್‌ಸಿ ಮೋರ್ಚಾ ರಾಜ್ಯಾಧ್ಯಕ್ಷ ಮಂಜುನಾಥ್‌, ಸಂಸದ ಎಸ್‌.ಮುನಿಸ್ವಾಮಿ, ಕೋಲಾರ ಜಿಲ್ಲಾ ಮುಖಂಡರಾದ ಚಿ.ನಾ.ರಾಮು, ಮಾಜಿ ಶಾಸಕ ಮುನಿವೆಂಕಟಪ್ಪ, ವೈ. ಸಂಪಂಗಿ, ಎಸ್‌.ಬಿ.ಮುನಿವೆಂಕಟಪ್ಪ, ಡಿಪಿಎಸ್‌ ಮುನಿ ರಾಜು, ಮುನಿಆಂಜಿ ಇತರರು ಆಗಮಿಸಿದ್ದರು.

ಕಾಂಗ್ರೆಸ್‌ ಜತೆ ಬಲಗೈ ಇಲ್ಲ: ಕೋಲಾರದಲ್ಲಿ ಮಂಗಳವಾರ ಆಯೋಜಿಸಿದ್ದ ಭೀಮ ಸಮಾವೇಶದ ಮುಖ್ಯ ಉದ್ದೇಶ ದಲಿತ ಬಲಗೈ ಸಮುದಾಯ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಮತ್ತು ಪರಮೇಶ್ವರ್‌ ಜೊತೆಗಿಲ್ಲ ಎಂದು ತೋರಿಸುವುದೇ ಆಗಿತ್ತು. ದಲಿತ ಬಲಗೈ ಸಮಾಜಕ್ಕೆ ಖರ್ಗೆ ಮತ್ತು ಪರಮೇಶ್ವರ್‌ ಮಾತ್ರವೇ ನಾಯಕರಲ್ಲ, ಬಿಜೆಪಿಯಲ್ಲಿಯೂ ಬಲಗೈ ನಾಯಕರಿದ್ದಾರೆಂದು ಪ್ರದರ್ಶನ ಮಾಡುವುದು ಮುಖ್ಯವಾಗಿತ್ತು.

Advertisement

ಸಮಾರಂಭದಲ್ಲಿ ಮಾತನಾಡಿದ ಬಿಜೆಪಿ ಬಲಗೈ ಸಮುದಾ ಯದ ಎಲ್ಲಾ ಮುಖಂಡರು ಇದೇ ವಿಷಯವನ್ನಿಟ್ಟುಕೊಂಡು ಮಾತನಾಡಿದ್ದರು. ದಲಿತ ಬಲಗೈ ಸಮುದಾಯದ ಮುಖಂಡರು ಹಾಗೂ ದಲಿತ ಮತದಾರರು ಬಿಜೆಪಿ ಹತ್ತಿರವಾಗಿದ್ದಾರೆ ಎಂದು ಸಾಬೀತು ಪಡಿಸುವುದು, ಮತದಾರರನ್ನು ಮತ್ತಷ್ಟು ಬಿಜೆಪಿಯೊಂದಿಗೆ ಜೋಡಿಸುವುದು ಸಮಾವೇಶದ ಉದ್ದೇಶವಾಗಿತ್ತು.

ಅಂಬೇಡ್ಕರ್‌ ಮತ್ತು ಕಾಂಗ್ರೆಸ್‌, ಬಿಜೆಪಿ: ಭೀಮ ಸಮಾವೇಶದ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಬಿಜೆಪಿಯ ವಾದಿರಾಜ್‌ ಅಂಬೇಡ್ಕರ್‌ ಮತ್ತು ಕಾಂಗ್ರೆಸ್‌ ಹಾಗೂ ಅಂಬೇಡ್ಕರ್‌ ಮತ್ತು ಬಿಜೆಪಿ ಎನ್ನುವ ವಿಚಾರವಾಗಿ ಮಾತನಾಡಿ, ಅಂಬೇಡ್ಕರ್‌ಗೆ ಕಾಂಗ್ರೆಸ್‌ ಹೇಗೆಲ್ಲಾ ಮೋಸ, ವಂಚನೆ, ಅಪಮಾನ ಮಾಡಿತ್ತು. ಅಂಬೇಡ್ಕರ್‌ ವಿಚಾರಧಾರೆಗಳು ಬಿಜೆಪಿಗೆ ಹೇಗೆ ಹತ್ತಿ ರವಾಗಿವೆ ಎಂಬುದನ್ನು ನೆರೆದಿದ್ದ ದಲಿತ ಬಲಗೈ ಮುಖಂಡರಿಗೆ ಮನದಟ್ಟು ಮಾಡಿಸುವಲ್ಲಿ ಸಫಲರಾದರು. ಸಂವಿಧಾನ ಬದಲಾಯಿಸುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದರಿಂದಲೇ ಅನಂತಕುಮಾರ್‌ ಹೆಗಡೆಯನ್ನು ಬಿಜೆಪಿ ಅಮಾನತು ಮಾಡಿತ್ತು. ಈಗಲೂ ಸಿದ್ದರಾಮಯ್ಯ ವಿರುದ್ಧ ನೀಡಿರುವ ಏಕವಚನದ ಹೇಳಿಕೆಯಿಂದ ದೂರವಿದೆ ಎಂದು ವಿವರಿಸಿದರು.

ಉಪಜಾತಿ ರಾಜಕಾರಣಕ್ಕೆ ನಾಂದಿ: ಈವರೆಗೂ ಉಪಜಾತಿ ಕಾರ್ಡ್‌ಗಳನ್ನು ರಾಜಕಾರಣದ ತೆರೆ ಮರೆಯಲ್ಲಿ ಮಾತ್ರವೇ ಬಳಸಲಾಗುತ್ತಿತ್ತು. ಇದೀಗ ಬಿಜೆಪಿ ಮೊ ದಲ ಬಾರಿಗೆ ದಲಿತ ಬಲಗೈ ಸಮುದಾಯದ ಭೀಮ ಸಮಾವೇಶ ಮಾಡುವ ಮೂಲಕ ಉಪಜಾತಿ ರಾಜಕಾರಣಕ್ಕೆ ನಾಂದಿ ಹಾಡಿದೆ ಎಂಬು ವ್ಯಾಖ್ಯಾನಿಸಲಾಗುತ್ತಿದೆ. ದಲಿತ ಚಳವಳಿಯ ತವರೂರಾಗಿದ್ದ ಕೋಲಾರ ಜಿಲ್ಲೆಯಲ್ಲಿ ದಲಿತ ಚಳವಳಿಯು ಹೀಗೆ ಉಪಜಾತಿ ವ್ಯಾಮೋಹದಿಂದ ನೂರಾರು ಸಂಘಟನೆಗಳಾಗಿ ವಿಭಜನೆಯಾಗಿದ್ದವು. ಈಗ ರಾಜಕೀಯ ಪಕ್ಷಗಳೇ ನೇರವಾಗಿ ಉಪಜಾತಿ ರಾಜಕಾರಣಕ್ಕೆ ಇಳಿದಿರುವುದರಿಂದ ದಲಿತ ಸಮುದಾಯ ಎಂದಿಗೂ ಒಂದಾಗದಂತೆ ದೂರಾಗಲಿದ್ದಾರೆ ಎಂಬ ಅಭಿಪ್ರಾಯವು ಕೇಳಿಬರುವಂತಾಗಿತ್ತು. ಇದುವರೆಗೂ ದಲಿತ, ಅಲಸಂಖ್ಯಾತ, ಹಿಂದುಳಿದ ವರ್ಗಗಳ ಸಮಾವೇಶ ನಡೆಸುತ್ತಿದ್ದ ರಾಜಕೀಯ ಪಕ್ಷಗಳು ಇನ್ನು ಮುಂದೆ ದಲಿತ ಬಲಗೈ, ಎಡಗೈ, ಬೋವಿ, ಕೊರಚ ಕೊರಮ ಸಮಾವೇಶಗಳ, ಜೊತೆಗೆ ಪ್ರತಿ ಸಮುದಾಯದ ಉಪಜಾತಿಗಳ ಸಮಾವೇಶ ನಡೆಸಲು ವೇದಿಕೆ ಸಿದ್ಧಗೊಂಡಂತಾಗಿದೆ.

ಬಿಜೆಪಿ ಭೀಮ ಸಮಾವೇಶಕ್ಕೆ ಕೋಲಾರ ಆಯ್ಕೆ ಏಕೆ? : ಬಿಜೆಪಿ ದಲಿತ ಬಲಗೈ ಸಮುದಾಯದ ಭೀಮ ಸಮಾವೇಶವನ್ನು ಕೋಲಾರದಿಂದಲೇ ಆರಂಭಿಸಲು ಕಾರಣಗಳು ಇದ್ದವು. ಕೋಲಾರ ಲೋಕಸಭಾ ಕ್ಷೇತ್ರವು ಮೀಸಲು ಕ್ಷೇತ್ರವಾಗಿದ್ದು, ಅತಿ ಹೆಚ್ಚು ದಲಿತ ಮತಗಳನ್ನು ಹೊಂದಿರುವ ಕ್ಷೇತ್ರವಾಗಿದೆ. ದಲಿತರಲ್ಲೂ ಬಲಗೈ ಮತದಾರರು ಹೆಚ್ಚಾಗಿದ್ದು, ಈ ಮತಗಳನ್ನು ಬಿಜೆಪಿಗೆ ಕ್ರೂಢೀಕರಿಸುವುದು ಸಮಾವೇಶದ ಮುಖ್ಯ ಉದ್ದೇಶವಾಗಿತ್ತು. ಖರ್ಗೆ, ಪರಮೇಶ್ವರ್‌ ಮೇಲೆ ಒಲವು ಹೊಂದಿರುವ ದಲಿತ ಬಲಗೈ ಮತದಾರರನ್ನು ಬಿಜೆಪಿಯತ್ತ ಸೆಳೆಯುವ ಉದ್ದೇಶವಿತ್ತು. ಕೋಲಾರ ಲೋಕಸಭಾ ಕ್ಷೇತ್ರವನ್ನು ದಲಿತ ಎಡಗೈ ಸಮುದಾಯದ ಕೆ.ಎಚ್‌.ಮುನಿಯಪ್ಪ 28 ವರ್ಷಗಳಿಂದಲೂ ಪಾರ್ಲಿಮೆಂಟ್‌ನಲ್ಲಿ ಪ್ರತಿನಿಧಿಸುತ್ತಿದ್ದರು. ಬಿಜೆಪಿ ಎಸ್‌. ಮುನಿಸ್ವಾಮಿಗೆ ಟಿಕೆಟ್‌ ನೀಡಿ ಬಲಗೈ ಸಮುದಾಯಕ್ಕೆ ಒಳಿತು ಮಾಡಿದೆ ಎಂದು ಬಿಂಬಿಸಿಕೊಳ್ಳುವುದು ಬಿಜೆಪಿಯ ಮುಖ್ಯ ಉದ್ದೇಶವಾಗಿತ್ತು. ಆದ್ದರಿಂದ ಬಿಜೆಪಿ ಭೀಮ ಸಮಾವೇಶಕ್ಕೆ ಕೋಲಾರವೇ ಸೂಕ್ತ ಆಯ್ಕೆಯಾಗಿತ್ತು.

ಕೇಸರಿ ಬದಲು ನೀಲಿ: ಕಾರ್ಯಕ್ರಮವನ್ನು ಭೀಮ ಸಮಾವೇಶ ಹೆಸರಿನಲ್ಲಿ ನಡೆಸಿದರೂ, ಬಿಜೆಪಿ ಬಲವರ್ಧನೆಗಾಗಿ ಎಂಬ ಅಡಿ ಬರಹವನ್ನು ಇಡಲಾಗಿತ್ತು. ಕಾರ್ಯಕ್ರಮದಲ್ಲಿ ಎಲ್ಲಿಯೂ ಬಿಜೆಪಿಯ ಕೇಸರಿ ಬಾವುಟಗಳ ಪ್ರದರ್ಶನವಾಗಲೇ ಇಲ್ಲ. ದಲಿತರಿಗೆ ಅಪ್ಯಾಯಮಾನವಾಗಿರುವ ನೀಲಿ ಶಾಲುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲರ ಕೊರಳಲ್ಲಿ ರಾರಾಜಿಸುತ್ತಿದ್ದವು. ಕಾರ್ಯಕ್ರಮದ ಬ್ಯಾನರ್‌ನಲ್ಲೂ ಅಂಬೇಡ್ಕರ್‌ ದೊಡ್ಡದಾಗಿ ಕಾಣಿಸುತ್ತಿದ್ದರು. ಒಟ್ಟಾರೆ, ದಲಿತರನ್ನು ಅದರಲ್ಲೂ ಬಲಗೈ ಸಮುದಾಯವನ್ನು ಸೆಳೆಯುವ ರೀತಿಯಲ್ಲಿ ಸಮಾವೇಶ ಆಯೋಜಿಸಲಾಗಿತ್ತು. ಇದುವರೆಗೂ ಧರ್ಮಾಧಾರಿತ ರಾಜಕಾರಣ ನಡೆಸುತ್ತಿದ್ದ ಬಿಜೆಪಿ ಈಗ ಜಾತಿ, ಉಪ ಜಾತಿಗಳಲ್ಲೂ ಒಡಕು ಉಂಟು ಮಾಡಲು ಮುಂದಾಗಿದೆ.

ಬಿಜೆಪಿ ಮತಗಳಿಗಾಗಿ ಕುಟುಂಬವನ್ನು ಒಡೆಯುತ್ತದೆ. ಗಂಡ-ಹೆಂಡತಿ ಬೇರ್ಪಡಿಸುವ ಕೀಳು ರಾಜಕೀಯ ಮಾಡುತ್ತದೆ. ದಲಿತ ಚಳವಳಿಯ ತವರಾದ ಕೋಲಾರದಲ್ಲೇ ದಲಿತ ಸಮುದಾಯವನ್ನು ಒಡೆಯಲು ಭೀಮ ಸಮಾವೇಶ ಮಾಡಿದೆ. ಈ ಬೆಳೆವಣಿಗೆಯನ್ನು ಎಲ್ಲರೂ ತೀವ್ರವಾಗಿ ಖಂಡಿಸಬೇಕಿದೆ. -ವಿ.ಗೀತಾ, ಸಮುದಾಯ ಕರ್ನಾಟಕ, ಕೋಲಾರ ಮುಖಂಡರು.

ದಲಿತ ಬಲಗೈ ಸಮುದಾಯ ಖರ್ಗೆ, ಪರಮೇಶ್ವರ್‌ ಹೇಳಿದಂತೆ ಕೇಳುವ ಸಮುದಾಯ. ಬಿಜೆಪಿಗೆ ಓಟು ಹಾಕುವುದಿಲ್ಲ ಎಂದು ಎಲ್ಲರೂ ತಿಳಿದುಕೊಂಡಿದ್ದರು. ಆದರೆ, ದಲಿತ ಬಲಗೈ ಸಮುದಾಯ ನನ್ನ ಕುಟುಂಬ. ರಕ್ತ ಸಂಬಂಧ ಹೊಂದಿದೆ. ದೇಶದ ಒಳಿತಿಗಾಗಿ ದಲಿತ ಬಲಗೈ ಸಮುದಾಯ ಕೋಲಾರ ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಿಸಲು ಹಗಲಿರುಳು ಪ್ರತಿ ಫಲಾಪೇಕ್ಷೆ ಬಯಸದೆ ಕೆಲಸ ಮಾಡುತ್ತಿದೆ. -ಎಸ್‌.ಮುನಿಸ್ವಾಮಿ, ಸಂಸದ, ಕೋಲಾರ

ಕೆ.ಎಸ್‌.ಗಣೇಶ್‌

 

Advertisement

Udayavani is now on Telegram. Click here to join our channel and stay updated with the latest news.

Next