ಬೆಂಗಳೂರು: ಮೈತ್ರಿ ಸರ್ಕಾರದ ಸಂಖ್ಯಾಬಲ ಕುಸಿತಕ್ಕೆ ನಡೆಸಿದ ಪ್ರಯತ್ನದಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಬಿಜೆಪಿಯು ಶುಕ್ರವಾರ ನಿಗದಿಯಾಗಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯತ್ತ ಗಮನ ಹರಿಸಿದ್ದು, ಅಲ್ಲಿನ ಬೆಳವಣಿಗೆ ಆಧರಿಸಿ ಮುಂದಿನ ಕಾರ್ಯತಂತ್ರ ರೂಪಿಸಲು ನಿರ್ಧರಿಸಿದೆ.
ಈ ನಡುವೆ ಹರಿಯಾಣದ ಗುರು ಗ್ರಾಮದ ರೆಸಾರ್ಟ್‌ನಲ್ಲಿನ ಬಿಜೆಪಿ ಶಾಸಕರ ವಾಸ್ತವ್ಯ ಇನ್ನೊಂದು ದಿನ ಮುಂದುವರಿ ಯಲಿದ್ದು, ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್ .ಯಡಿಯೂರಪ್ಪ ಅವರ ಸೂಚನೆಯ
ನಿರೀಕ್ಷೆಯಲ್ಲೇ ಕಾಲ ಕಳೆದಿದ್ದಾರೆ.
ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರು ಅನಾರೋಗ್ಯದ ಹಿನ್ನೆಲೆಯಲ್ಲಿ ಬುಧವಾರ ಸಂಜೆಯೇ ಗುರುಗ್ರಾಮದಿಂದ ಹೊರಟ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ರಾತ್ರಿ ಬೆಂಗಳೂರಿಗೆ ಆಗಮಿಸಿದರು. ಗುರುವಾರ ಬೆಳಗ್ಗೆ ತುಮಕೂರಿಗೆ ತೆರಳಿ ಸಂಜೆವರೆಗೆ ಮಠದಲ್ಲೇ ಇದ್ದರು.
ತುಮಕೂರು ಜಿಲ್ಲೆಯ ಹಲವು ಬಿಜೆಪಿ ಶಾಸಕರು ಸೇರಿದಂತೆ ಹಲವು ಬಿಜೆಪಿ ಶಾಸಕರು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.
ಕಾಂಗ್ರೆಸ್ ಸಭೆ ಮೇಲೆ ಕಣ್ಣು: ಕಾಂಗ್ರೆಸ್‌ನ ಅತೃಪ್ತ ಶಾಸಕರು ಬಿಜೆಪಿಯ ಸಂಪರ್ಕದಲ್ಲಿದ್ದಾರೆ ಎಂಬ ಮಾತುಗಳ ಬೆನ್ನಲ್ಲೇ ಶುಕ್ರವಾರ ಕಾಂಗ್ರೆಸ್ ಶಾಸಕಾಂಗ ಸಭೆ ಕರೆದಿದೆ. ಹಾಗಾಗಿ ಸಭೆಗೆ ಹಾಜರಾಗುವ ಶಾಸಕರ ಸಂಖ್ಯೆಯ ಮೇಲೆ ಬಿಜೆಪಿ ದೃಷ್ಟಿ ನೆಟ್ಟಿದೆ. ಸಭೆಗೆ ಗೈರಾಗುವ ಶಾಸಕರ ಸಂಖ್ಯೆ ಆಧರಿಸಿ ಮುಂದಿನ ಕಾರ್ಯತಂತ್ರ ಹೆಣೆಯಲು ನಿರ್ಧರಿಸಿದೆ.
ಬೆಳವಣಿಗೆ ತಣ್ಣಗಾದ ಬಳಿಕ ವಾಪಸ್
ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆಗಳಾಗುತ್ತಿರುವ ಹಿನ್ನೆಲೆಯಲ್ಲಿ ಗುರುಗ್ರಾಮದಲ್ಲಿನ ಬಿಜೆಪಿ ಶಾಸಕರ ವಾಸ್ತವ್ಯದ ಮುಂದುವರಿಕೆ ಬಗ್ಗೆ ಬಿಜೆಪಿ ನಾಯಕರಲ್ಲೇ ಸ್ಪಷ್ಟತೆ ಇದ್ದಂತಿಲ್ಲ. ರಾಜಕೀಯ ವಾತಾವರಣ ತಿಳಿಗೊಂಡ ಬಳಿಕ ಗುರು ಗ್ರಾಮದಿಂದ ರಾಜ್ಯಕ್ಕೆ ವಾಪಸ್ಸಾಗಲಿದ್ದಾರೆ ಎನ್ನಲಾಗಿದೆ.