ಲಕ್ನೋ : ‘ಬಿಜೆಪಿ ಮತ್ತು ಅದರ ಸದಸ್ಯರತ್ತ ತೋರಲಾಗುವ ಬೆರಳನ್ನು ನಾವು ಕತ್ತರಿಸಿ ಹಾಕುತ್ತೇವೆ’ ಎಂದು ರಾಷ್ಟ್ರೀಯ ಎಸ್‌ಸಿ ಆಯೋಗದ ಅಧ್ಯಕ್ಷ ಹಾಗೂ ಉತ್ತರ ಪ್ರದೇಶದ ಇಟಾವಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ರಾಮ್ ಶಂಕರ್ ಕಠೇರಿಯಾ ಹೇಳಿರುವ ಮಾತುಗಳು ಈಗ ವ್ಯಾಪಕ ಟೀಕೆ, ವಿವಾದ ಹಾಗೂ ಖಂಡನೆಗೆ ಗುರಿಯಾಗಿದೆ.
“ಇವತ್ತು ನಮ್ಮ ಸರಕಾರ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿದೆ; ಆದುದರಿಂದ ನಮ್ಮನ್ನು ದೂರಿ ತೋರುವ ಬೆರಳನ್ನು ನಾವು ಕತ್ತರಿಸಿ ಹಾಕುತ್ತೇವೆ” ಎಂದು ಕಠೇರಿಯಾ ಅವರು ಇಟಾವಾದಲ್ಲಿನ ಚುನಾವಣಾ ರಾಲಿಯಲ್ಲಿ ಹೇಳಿದರು.
ಮಾಯಾವತಿ ಸರಕಾರದಡಿ ತನ್ನ ಹಾಗೂ ಬಿಜೆಪಿಯ ಇತರ ನಾಯಕರ ವಿರುದ್ಧ ದಾಖಲಿಸಲಾದ ಕೇಸುಗಳನ್ನು ಉಲ್ಲೇಖೀಸಿದ ಕಠೇರಿಯಾ, “ಮಾಯಾವತಿ ಅವರು ನನ್ನ ವಿರುದ್ಧ ಅನೇಕ ಕೇಸುಗಳನ್ನು ಹಾಕಿಸಿದ್ದಾರೆ.ಆದರೆ ನಾನು ಅವುಗಳ ವಿರುದ್ಧ ಕಾನೂನು ಹೋರಾಟ ಮಾಡುತ್ತಲೇ ಬಂದಿದ್ದೇನೆ. ಅಂತೆಯೇ ಆಕೆಗೆ ನನ್ನನ್ನು ಜೈಲಿಗೆ ಹಾಕಲು ಈ ವರೆಗೂ ಸಾಧ್ಯವಾಗಿಲ್ಲ” ಎಂದು ಹೇಳಿದರು.
“ಮಾಯಾವತಿ ನನ್ನನ್ನು ಜೈಲಿಗೆ ಹಾಕಲು ಅನೇಕ ಬಾರಿ ಯತ್ನಿಸಿದರು. ನನ್ನ ವಿರುದ್ಧ ಆಕೆ 29 ಕೇಸುಗಳನ್ನು ಹಾಕಿದರು. ಆದರೆ ನಾನು ಅದಕ್ಕೆ ಹೆದರಲಿಲ್ಲ; ನನ್ನ ಪೂರ್ಣ ಶಕ್ತಿ ಮತ್ತು ವಿಶ್ವಾಸದಿಂದ ನಾನು ಹೋರಾಡಿದೆ. ಈಗ ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರಕಾರವಿದೆ. ಹಾಗಿರುವಾಗ ಯಾರಾದರೂ ನಮ್ಮ ವಿರುದ್ಧ ಹುಬ್ಬೇರಿಸುವ, ಬೆರಳು ತೋರಿಸುವ ದುಸ್ಸಾಹಸ ಮಾಡಿದರೆ ನಾವು ಅದೇ ರೀತಿಯಲ್ಲಿ ಅವರಿಗೆ ಉತ್ತರ ಕೊಡುತ್ತೇವೆ ಎಂಬ ಆಶ್ವಾಸನೆಯನ್ನು ನಾನು ನಿಮಗೆ ನೀಡುತ್ತೇನೆ; ಪ್ರತಿಯೊಂದು ಸನ್ನಿವೇಶದಲ್ಲೂ ನಾನು ನಿಮ್ಮ ಜತೆಗೆ ಇರುತ್ತೇನೆ ಎಂಬ ಭರವಸೆಯನ್ನು ಕೊಡುತ್ತೇನೆ’ ಎಂದು ಕಠಾರಿಯಾ ಗುಡುಗಿದರು.