Advertisement

ಬೆಂಗಳೂರಿಗೆ ಬಿಜೆಪಿ ಕೊಡುಗೆ ಶೂನ್ಯ: ಬಿ.ಕೆ.ಹರಿಪ್ರಸಾದ್‌

12:50 AM Apr 15, 2019 | Lakshmi GovindaRaju |

ಬೆಂಗಳೂರು: ಬಿಜೆಪಿಯವರ ಹಿಂದುತ್ವಕ್ಕೂ ನಿಜವಾದ ಹಿಂದೂ ಧರ್ಮಕ್ಕೂ ಸಂಬಂಧವಿಲ್ಲ. ನಾವು ಗಾಂಧೀಜಿ, ವಿವೇಕಾನಂದರ ಹಿಂದೂ ಧರ್ಮವನ್ನು ಪಾಲಿಸುತ್ತೇವೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್‌ ಹೇಳಿದರು.

Advertisement

ಬೆಂಗಳೂರು ಪ್ರಸ್‌ ಕ್ಲಬ್‌ ಭಾನುವಾರ ಏರ್ಪಡಿಸಿದ್ದ ಮಾತು-ಮಂಥನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿಯವರು ಸ್ವಾಂತಂತ್ರ ಹೋರಾಟದಲ್ಲಿ ಬ್ರಿಟೀಷರ ಏಜೆಂಟರಾಗಿದ್ದರು.

ಅದಕ್ಕೆ ಅವರು ಈಗ ದೇಶ ಭಕ್ತಿಯ ಬಗ್ಗೆ ಮಾತನಾಡಿ ಸಮರ್ಥಿಸಿಕೊಳ್ಳುವಂತಾಗಿದೆ. ದೇಶ ಭಕ್ತಿಯ ಬಗ್ಗೆ ಬಿಜೆಪಿಯಿಂದ ಕಲಿಯಬೇಕಿಲ್ಲ. ಬಿಜೆಪಿಯವರಲ್ಲಿ ಯಾರೂ ಸ್ವಾತಂತ್ರ್ಯ ಹೋರಾಟಗಾರರು ಸಿಗದ ಕಾರಣ ಸರ್ದಾರ್‌ ವಲ್ಲಭಭಾಯಿ ಪಟೇಲರನ್ನು ಗುತ್ತಿಗೆ ಪಡೆದವರಂತೆ ಆಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ತಮ್ಮಷ್ಟಕ್ಕೆ ತಾವೇ ಚೌಕಿದಾರ್‌ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಹಾಗೆ ಹೇಳಿಕೊಳ್ಳುವುದು ಪಂಚಾಯಿತಿ ಮಟ್ಟದಲ್ಲಿ. ಪ್ರಧಾನಿ ಹುದ್ದೆಯಲ್ಲಿರುವವರಿಗೆ ಅದು ಶೋಭೆ ತರುವುದಿಲ್ಲ. ಮೋದಿ ಹಿಂದುಳಿದ ವರ್ಗಗಳ ನಾಯಕರಲ್ಲ.

ಅವರು ಕಳೆದ ಐದು ವರ್ಷದಲ್ಲಿ ಏನು ಮಾಡಿದ್ದಾರೆ ಎಂದು ಪತ್ರಿಕಾಗೋಷ್ಠಿ ಕರೆದು ಹೇಳಿದರೆ, ಮುಂದಿನ ಐದು ವರ್ಷ ಅವರೇ ಪ್ರಧಾನಿಯಾಗಲಿ ಎಂದು ಆಶಿಸುತ್ತೇನೆ. ಮೋದಿ, ನವಾಜ್‌ ಷರೀಫ್ ಅವರನ್ನು ಪ್ರಮಾಣ ವಚನ ಕಾರ್ಯಮಕ್ರಮಕ್ಕೆ ಆಹ್ವಾನಿಸುತ್ತಾರೆ. ಅಲ್ಲದೆ, ಇವರು ಕದ್ದು ಮುಚ್ಚಿ ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದು ಬರುತ್ತಾರೆ. ಇದನ್ನೇ ಬೇರೆಯವರು ಮಾಡಿದರೆ ದೇಶದ್ರೋಹವೇ ಎಂದು ಪ್ರಶ್ನಿಸಿದರು.

Advertisement

ಬಿಜೆಪಿ ಶೂನ್ಯ ಸಾಧನೆ: ಕಳೆದ ಇಪ್ಪತೈದು ವರ್ಷಗಳಿಂದ ಬಿಜೆಪಿಯವರು ಬೆಂಗಳೂರಿನ ಸಂಸದರಾಗಿದ್ದಾರೆ. ಆದರೆ, ನಗರದ ಅಭಿವೃದ್ಧಿಯಲ್ಲಿ ಅವರ ಸಾಧನೆ ಶೂನ್ಯ. ನಾನು ಗೆದ್ದರೂ ಸೋತರೂ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ. ಜೀವನದುದ್ದಕ್ಕೂ ಬಿಜೆಪಿ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಮುಂದೆಯೂ ಹೋರಾಡುತ್ತೇನೆ.

ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಾವು ಮುಂದಿದ್ದೇವೆ. ಬೆಂಗಳೂರಿನಲ್ಲಿ ಕಬ್ಬನ್‌ ಪಾರ್ಕ್‌, ಲಾಲ್‌ಬಾಗ್‌ ಹೊರತುಪಡೆಸಿ ನಗರದ ನಾಲ್ಕು ದಿಕ್ಕಿನಲ್ಲಿ ಉದ್ಯಾನವನ ಸ್ಥಾಪನೆ, ಕಸ ವಿಲೇವಾರಿ, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ನೋಟ್‌ ಬ್ಯಾನ್‌ ಮಾಡಿರುವುದರಿಂದ ಉದ್ಯೋಗ ನಷ್ಟವಾಗಿರುವುದರಿಂದ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಕ್ಷೇತ್ರದಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ನಾಯಕರು ಜಂಟಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಜೆಡಿಎಸ್‌ ವರಿಷ್ಠ ದೇವೇಗೌಡರ ಜತೆ ಉತ್ತಮ ಸಂಬಂಧ ಇದೆ. ಅವರ ಆಶೀರ್ವಾದ ನನ್ನ ಮೇಲಿದೆ. ನಾನು ಆಯ್ಕೆಯಾದರೆ ರಾಮಲಿಂಗಾರೆಡ್ಡಿ ಅವರನ್ನು ಮಂತ್ರಿ ಮಾಡುವುದು ರಾಹುಲ್‌ ಗಾಂಧಿ ಅವರಿಗೆ ಬಿಟ್ಟ ವಿಚಾರ. ಅರ್ಹರಿಗೆ ಮಂತ್ರಿ ಸ್ಥಾನ ಸಿಗುತ್ತದೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದರು.

ದಕ್ಷಿಣದಲ್ಲಿ ನನ್ನ ವಿರುದ್ಧ ಸ್ಪರ್ಧೆ ಮಾಡಿರುವ ಬಿಜೆಪಿಯ ತೇಜಸ್ವಿ ಸೂರ್ಯ ಅವರು ನನ್ನ ವಿರುದ್ಧ ವೈಯಕ್ತಿಕವಾಗಿ ಯಾವುದೇ ಆರೋಪ ಮಾಡುತ್ತಿಲ್ಲ. ನಾನೂ ಅವರ ಬಗ್ಗೆ ಆರೋಪ ಮಾಡುತ್ತಿಲ್ಲ. ಅವರ ವಿರುದ್ಧ ಬಂದಿರುವ ಆರೋಪದ ಬಗ್ಗೆ ಕಾನೂನು ಕ್ರಮ ಕೈಗೊಳ್ಳುತ್ತದೆ.
-ಬಿ.ಕೆ.ಹರಿಪ್ರಸಾದ್‌, ಬೆಂ.ದಕ್ಷಿಣ ಕಾಂಗ್ರೆಸ್‌ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next