Advertisement

ಟಿಪ್ಪು ಜಯಂತಿ ರದ್ದತಿಗೆ ಬಿಜೆಪಿ ಆಗ್ರಹ

10:39 AM Nov 10, 2018 | Team Udayavani |

ಕಲಬುರಗಿ: ರಾಜ್ಯ ಸರ್ಕಾರ ಆಚರಿಸಲು ಹೊರಟಿರುವ ಟಿಪ್ಪು ಸುಲ್ತಾನ್‌ ಜಯಂತಿ ರದ್ದು ಪಡಿಸಬೇಕೆಂದು ಒತ್ತಾಯಿಸಿ ಶುಕ್ರವಾರ ಬಿಜೆಪಿ ನಗರ ಮತ್ತು ಗ್ರಾಮಾಂತರ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಬಿಜೆಪಿ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

Advertisement

ನಗರದ ಸರ್ದಾರ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರು ಪ್ರತಿಭಟನೆ ನಡೆಸಿ ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆಯನ್ನು ತೀವ್ರವಾಗಿ ವಿರೋಧಿಸಿದರು. ಟಿಪ್ಪು ಸುಲ್ತಾನ ಹಿಂದೂ ವಿರೋಧಿಯಾಗಿದ್ದು ಸರ್ಕಾರದಿಂದ ಆತನ ಜಯಂತಿ ಆಚರಿಸುವುದು ತರವಲ್ಲ. ಆದ್ದರಿಂದ ತಕ್ಷಣವೇ ಟಿಪ್ಪು ಜಯಂತಿ ಆಚರಣೆಯನ್ನು ತಡೆಯಬೇಕೆಂದು ರಾಜ್ಯಪಾಲರಿಗೆ ಪ್ರತಿಭಟನಾಕಾರರು ಆಗ್ರಹಿಸಿದರು.

ಟಿಪ್ಪು ಸುಲ್ತಾನ್‌ ಮತಾಂಧ, ಸಾವಿರಾರು ಹಿಂದೂಗಳನ್ನು ಕೊಲೆ ಮಾಡಿದ್ದಾನೆ. ಅನೇಕ ದೇವಸ್ಥಾನಗಳನ್ನು ಒಡೆದು ಧ್ವಂಸ ಮಾಡಿದ್ದಾನೆ. ಮತಾಂತರಕ್ಕಾಗಿ ಅಸಂಖ್ಯ ಹಿಂದೂಗಳಿಗೆ ಚಿತ್ರಹಿಂಸೆ ನೀಡಿದ್ದಾನೆ. ದೇಶದ ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಪೆಟ್ಟುಕೊಡಲೆಂದು ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟಿಪ್ಪು ಸುಲ್ತಾನ್‌ ಕೊಡವರ ವಿರುದ್ಧ ಯುದ್ಧ ಮಾಡಿದ್ದ. ಚಿತ್ರದುರ್ಗದಲ್ಲಿ ಮದಕರಿ ನಾಯಕನ ಪಡೆಯನ್ನು ಬಂಧಿಯಾಗಿಸಿ ಚಿತ್ರದುರ್ಗದ ಹೆಸರನ್ನೇ ಬದಲಾಯಿಸಲು ಹೊರಟಿದ್ದ. ಮೇಲುಕೋಟೆಯಲ್ಲಿ ದೀಪಾವಳಿ ದಿನದಂದು 800 ಜನ ಆಯ್ಯಂಗಾರರನ್ನು ಟಿಪ್ಪು ಹತ್ಯೆ ಮಾಡಿದ್ದ. ಉಲ್ಲಾಳದಲ್ಲಿ ಕ್ರಿಶ್ಚಿಯನ್ನರನ್ನು ಮತಾಂತರ ಮಾಡಿದ್ದ ಟಿಪ್ಪು ಒಬ್ಬ ಜನ ವಿರೋಧಿ ಎಂದು ಆರೋಪಿಸಿದರು. 

ಶ್ರೀಮಂತ ಪರಂಪರೆ ಹೊಂದಿರುವ ಕರ್ನಾಟಕ ಸಹೋದರತೆ ಸಹಬಾಳ್ವೆಗೆ ಹೆಸರಾದ ನಾಡು. ಇಲ್ಲಿ ಕ್ರೌರ್ಯ ಮೆರೆದವರನ್ನು  ವೈಭವಿಕರಿಸುವುದೆಂದರೆ ಕರ್ನಾಟಕದ ಪರಂಪರೆ ಧ್ವಂಸ ಮಾಡುವುದೇ ಎಂದರ್ಥ. ಇಂತಹ ವಿಘಟನಾಕಾರಿ ಮಾನಸಿಕತೆಗೆ ರಾಜ್ಯದಲ್ಲಿ ಅವಕಾಶ ನೀಡಬಾರದು. ಹೀಗಾಗಿ ಟಿಪ್ಪು ಜಯಂತಿ ಆಚರಣೆ ರದ್ದು ಮಾಡಬೇಕೆಂದು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಪ್ರತಿಭಟನಾಕಾರರು ಮನವಿ
ಮಾಡಿದರು.

Advertisement

ಪ್ರತಿಭಟನೆಯಲ್ಲಿ ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡಗೌಡ ಪಾಟೀಲ, ಮಾಜಿ ಸಚಿವ ಬಾಬುರಾವ ಚವ್ಹಾಣ, ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ, ಚಂದ್ರು ಪಾಟೀಲ ಹಾಗೂ ಇನ್ನಿತರ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next