ಆಲಮಟ್ಟಿ: ರಾಜ್ಯ ಸರ್ಕಾರ ಎ ಸ್ಕೀಂ-ಬಿ ಸ್ಕೀಂ ಮಾಡಿ ಅವಳಿ ಜಿಲ್ಲೆ ರೈತರನ್ನು ವಂಚಿಸುತ್ತಿದೆ. ಅದನ್ನು ಬಿಟ್ಟು ಪ್ರಥಮ ಆದ್ಯತೆಯಾಗಿ ಅವಳಿ ಜಿಲ್ಲೆ ರೈತರಿಗೆ ಮುಂಗಾರು ಹಾಗೂ ಹಿಂಗಾರು ಹಂಗಾಮಿಗೆ ನೀರು ಕೊಡಬೇಕು. ಇಲ್ಲದಿದ್ದರೆ ಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಶಾಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.
ಪಾದಯಾತ್ರೆ ಮೂಲಕ ಆಲಮಟ್ಟಿಗೆ ಆಗಮಿಸಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇಲ್ಲಿವರೆಗೆ ಎರಡು ನ್ಯಾಯಾಧಿಕರಣಗಳು ನೀರು ಹಂಚಿಕೆ ಬಗ್ಗೆ ತೀರ್ಪು ನೀಡಿವೆ. ಅವುಗಳಲ್ಲಿ ಯಾವ ನ್ಯಾಯಾಧಿಕರಣಗಳೂ ರಾಜ್ಯದಲ್ಲಿರುವ ಜಲಾಶಯಗಳಿಗೆ ಇಂತಿಷ್ಟೇ ನೀರು ಬಳಸಿಕೊಳ್ಳಬೇಕೆಂದು ಆದೇಶಿಸಿಲ್ಲ. ಆದರೆ ರಾಜ್ಯ ಸರ್ಕಾರವು ಸ್ಕೀಂಗಳ ಹೆಸರಿನಲ್ಲಿ ಮತ್ತು ಜಲಾಶಯ ಎತ್ತರವಾದಾಗ ಮಾತ್ರ ಅವಳಿ ಜಿಲ್ಲೆಯ ರೈತರಿಗೆ ನೀರು ಎನ್ನುತ್ತಿದೆಯಾದರೆ ಆಲಮಟ್ಟಿಯಲ್ಲಿರುವ ಜಲಾಶಯ 123 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಆ ನೀರಿನಲ್ಲಿ ನಮಗೆ ಕೇವಲ 20-30 ಟಿಎಂಸಿ ನೀರನ್ನು ಸಾಕಾಗುತ್ತಿದೆ
ಎಂದರು.
ಇನ್ನು ಕೆಲವು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆಲಮಟ್ಟಿ ಜಲಾಶಯವನ್ನು 524 ಮೀ.ಗೆ ಎತ್ತರಿಸಿದಾಗ ಅವಳಿ ಜಿಲ್ಲೆಗಳ ರೈತರಿಗೆ ದೊರೆಯಲಿದೆ. ಅಲ್ಲಿ ತನಕ ಸ್ವಲ್ಪ ತಾಳ್ಮೆಯಿರಲು ಹೇಳಿ ದಾರಿ ತಪ್ಪಿಸುತ್ತಿದ್ದಾರೆ. ನೀರು ಹಂಚಿಕೆ ವಿಷಯದಲ್ಲಿ ಸುಳ್ಳು, ಮೋಸ ಮಾಡುತ್ತಿದ್ದು ಈ ಭಾಗದ ಜನರು ಅರಿಯಬೇಕಾಗಿದೆ. 20 ವರ್ಷಗಳ ಹಿಂದೆಯೇ ಕಾಲುವೆ ನಿರ್ಮಾಣಕ್ಕೆ ಆದ್ಯತೆ ನೀಡಿದ್ದರೆ ಈ ಭಾಗ ಹಸಿರಿನಿಂದ ಕಂಗೊಳಿಸುವಂತಾಗುತ್ತಿತ್ತು. ಜಿಲ್ಲೆಯಲ್ಲಿ ಅವಳಿ ಜಲಾಶಯಗಳನ್ನು ನಿರ್ಮಿಸಿಕೊಂಡು ಹನಿ ನೀರಿಗಾಗಿ ಪರದಾಡುವಂತಾಗಲು ಕಾರಣರಾರು? ಎನ್ನುವುದನ್ನು ಅರಿಯಬೇಕು ಎಂದು ಹೇಳಿದರು. ರಾಜ್ಯದಲ್ಲಿ ಬರಗಾಲ ಆವರಿಸಿದ್ದರೂ ಎರಡೂ ಜಲಾಶಯಗಳಲ್ಲಿ ಮಳೆಗಾಲದಲ್ಲಿ ಗರಿಷ್ಠ ಪ್ರಮಾಣದಲ್ಲಿ ನೀರಿನ ಸಂಗ್ರಹವಾಗಿತ್ತು. ಆದರೆ ನಾರಾಯಣಪುರದಲ್ಲಿ ಸಂಗ್ರಹಿಸಿಟ್ಟ ನೀರು ಹೆಚ್ಚಿನ ಪ್ರಮಾಣದಲ್ಲಿ ಜಲಾಶಯದ ಕೆಳಗಡೆ ಹರಿದು ಹೋಗುತ್ತಿದೆ ಎಂದು ಆರೋಪಿಸಿದರು.
ಕಳೆದ ಎರಡು ದಶಕಗಳ ಹಿಂದೆಯೇ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳು ಸಂಪೂರ್ಣ ನೀರಾವರಿಯಿಂದ ಕಂಗೊಳಿಸಿ ಹಸಿರು ಕ್ರಾಂತಿಗೆ ನಾಂದಿ ಹಾಡಬಹುದಿತ್ತು, ಅದರೆ ಜನ ಪ್ರತಿನಿಧಿಗಳ ನಿರಾಸಕ್ತಿ, ನಿರ್ಲಕ್ಷ್ಯ ಭಾವದಿಂದ ಇನ್ನೂ ರೈತರು ನೀರಾವರಿಯಿಂದ ವಂಚಿತರಾಗುವಂತಾಗಿದೆ. ರಾಜಕೀಯ ಇಚ್ಛಾಶಕ್ತಿ ಕೊರತೆ ಇಲ್ಲಿ ಎದ್ದು ಕಾಣುತ್ತಲಿದ್ದು ಇನ್ನು ಸಹಿಸಲಾಗದು. ಇಷ್ಟು ದಿನಗಳ ಕಾಲ ನೀರಿನ ನೋವು ಅನುಭವಿಸಿದ್ದೇ ಸಾಕು, ಈಗ ನಮಗೆ ನೀರು ಬೇಕು. ನೀರಿನ ಶಾಪ ನಮಗೇಕೆ? ಇದರ ಮುಕ್ತಿಗಾಗಿ ನನ್ನ ಹೋರಾಟಕ್ಕೆ ಎಲ್ಲರೂ ಕೈಜೋಡಿಸಿ ಬೆಂಬಲಿಸಬೇಕೆಂದು ವಿನಂತಿಸಿದರು.
ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ನಾರಾಯಣಪುರ ಜಲಾಶಯ ನಿರ್ಮಾಣದ ವೇಳೆ ಒಂದು
ಎಕರೆಗೆ 300-400 ರೂ. ಪರಿಹಾರ ನೀಡಿದ್ದಾರೆ. ಇರಲಿ ನಮಗೇ ಒಳ್ಳೆಯದಾಗುತ್ತದೆ ಎಂದು ಕೊಟ್ಟಷ್ಟು ಪರಿಹಾರ ಪಡೆದಿದ್ದಾರೆ. ಅವರಿಗೆ ಇಂದಿಗೂ ಸಮರ್ಪಕವಾಗಿ ನೀರಿಲ್ಲ. ಇದರಿಂದ ತ್ಯಾಗ ಮಾಡಲು ನಾವು ಅನುಭವಿಸುವರು ಬೇರೆಯವರು ಎನ್ನುವಂತಾಗಿದೆ. ಇದು ತೊಲಗಬೇಕು. ತ್ಯಾಗ ಮಾಡಿದ ಅವಳಿ ಜಿಲ್ಲೆಗಳಿಗೆ ಮೊದಲ ಆದ್ಯತೆ ನೀಡಿ ಎಲ್ಲ ಕೆರೆ ಹಾಗೂ ಕಾಲುವೆಗಳಿಗೆ ನೀರು ಬಿಡಬೇಕು ಎಂದರು. ನಂತರ ಸಭೆಗೆ ಆಗಮಿಸಿದ ಸಚಿವ ಶಿವಾನಂದ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. ಇಟಗಿಯ ಗುರುಶಾಂತವೀರ ಸ್ವಾಮೀಜಿ, ಮಲಕೇಂದ್ರಗೌಡ ಪಾಟೀಲ, ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ಬಸವರಾಜ ಕುಂಬಾರ ಸೇರಿದಂತೆ ಅವಳಿ ಜಿಲ್ಲೆಯ ವಿವಿಧೆಡೆಯಿಂದ ರೈತ ಮುಖಂಡರು ಅಪಾರ ಸಂಖ್ಯೆಯಲ್ಲಿ ಪಾದಯಾತ್ರೆ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸಿದ್ದರು.