Advertisement
“ದಲಿತರ ಹಣ ನುಂಗಿದ ಕಾಂಗ್ರೆಸ್’ ಎಂಬ ಬ್ಯಾನರ್ ಅಡಿಯಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು. ದಲಿತರ ಹಣವನ್ನು “ಟಕಾಟಕ್’ ಎಂದು ಲೂಟಿ ಮಾಡಿದ ಕಾಂಗ್ರೆಸ್ ಸರಕಾರವನ್ನು “ಟಕಾಟಕ್’ ಎಂದೇ ಅಧಿಕಾರದಿಂದ ಕೆಳಗಿಳಿಸುವ ದಿನ ದೂರವಿಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
187 ಕೋ.ರೂ. ಹಣ ಹೈದರಾಬಾದ್‌ನ ಐಟಿ ಕಂಪೆನಿಗೆ ವರ್ಗಾವಣೆಯಾಗಿದೆ ಎನ್ನಲಾಗುತ್ತಿದ್ದು, ಲೋಕಸಭೆ ಚುನಾವಣೆಗೆ ಬಳಕೆಯಾಗಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್ ಆರೋಪಿಸಿದ್ದಾರೆ.
Related Articles
ಒಪ್ಪದ ಸಿಎಂ, ಡಿಸಿಎಂ; ಸಿಐಡಿ ವರದಿ ಬಳಿಕ ಕ್ರಮ: ಸಮಜಾಯಿಷಿ
Advertisement
ವಾಲ್ಮೀಕಿ ನಿಗಮ ದಲ್ಲಿ ನಡೆದಿದೆ ಎನ್ನಲಾದ ಅಕ್ರಮವನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಜತೆಗೆ ಸರಕಾರ ಹಾಗೂ ಪಕ್ಷದ ವರ್ಚಸ್ಸಿಗೆ ಆಗುತ್ತಿರುವ ಹಾನಿ ಬಗ್ಗೆಯೂ ಆತಂಕ ವ್ಯಕ್ತಪಡಿಸಿದೆ.
ದಿಲ್ಲಿಯಲ್ಲಿ ಸಿಎಂ, ಡಿಸಿಎಂ ಜತೆಗೆ ಎಐಸಿಸಿ ಅಧ್ಯಕ್ಷ ಖರ್ಗೆ ಬುಧವಾರ ತಡರಾತ್ರಿ ನಡೆಸಿದ ಸಭೆಯ ಆರಂಭದಲ್ಲೇ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇಷ್ಟೊಂದು ದೊಡ್ಡ ಹಗರಣ ನಡೆದಿದ್ದರೂ ಸರಕಾರದ ಗಮನಕ್ಕೆ ಬಂದಿಲ್ಲದಂತೆ ನಡೆದುಕೊಳ್ಳುತ್ತಿರುವುದು ಸರಿಯಲ್ಲ. ಸಂಬಂಧಪಟ್ಟ ಇಲಾಖೆಯ ಸಚಿವರ ಮೌಖೀಕ ಆದೇಶದ ಮೇರೆಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ ಎಂದು ಆತ್ಮಹತ್ಯೆ ಅಧಿಕಾರಿ ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದ ಮೇಲೆ ಇನ್ನೂ ಏಕೆ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆದಿಲ್ಲ ಎಂದು ಖರ್ಗೆ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.ಸರಕಾರ ಹಾಗೂ ಪಕ್ಷಕ್ಕೆ ಆಗುತ್ತಿರುವ ಹಾನಿಯನ್ನು ಹೇಗೆ ಸರಿಪಡಿಸುತ್ತೀರಿ ಎಂದು ಖರ್ಗೆ ಪ್ರಶ್ನಿಸಿದ್ದಾರೆ. ಸಿಐಡಿ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ, ಡಿಸಿಎಂ ಸಮಜಾಯಿಷಿ ನೀಡಿದರೆಂದು ಗೊತ್ತಾಗಿದೆ. ವಿಪಕ್ಷಗಳು ಬೀದಿಗಿಳಿದು ಹೋರಾಟ ಮಾಡುವ ಮುನ್ನವೇ ಸಚಿವರ ರಾಜೀನಾಮೆ ಪಡೆಯುವುದು ಸೂಕ್ತವೆಂದು ಖರ್ಗೆ ಅಭಿಪ್ರಾಯಪಟ್ಟರೆಂದು ಹೇಳಲಾಗುತ್ತಿದೆ. ತ್ರಿಮೂರ್ತಿಗಳ ಸಭೆಯಲ್ಲಿ ನಡೆದದ್ದೇನು?
ಸಿಎಂ ಸಿದ್ದರಾಮಯ್ಯ, ಸಚಿವರಾದ ಬೈರತಿ ಸುರೇಶ್, ಬಿ. ನಾಗೇಂದ್ರ ದಿಲ್ಲಿಯಲ್ಲಿ ಒಂದು ತಾಸಿಗೂ ಹೆಚ್ಚು ಕಾಲ ರಹಸ್ಯ ಸಭೆ ನಡೆಸಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. 87 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಸಂಬಂಧ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಈಗ ಸಚಿವ ನಾಗೇಂದ್ರ ಅವರಿಗೆ ಸಂಕಷ್ಟ ತಂದಿದೆ. ಅವರ ರಾಜೀನಾಮೆಗೆ ವಿಪಕ್ಷಗಳು ಆಗ್ರಹಿಸುತ್ತಿರುವುದರ ನಡುವೆಯೇ ಈ ತ್ರಿಮೂರ್ತಿಗಳ ಸಭೆಯಲ್ಲಿ ನಡೆದದ್ದೇನು ಎಂಬುದು ಚರ್ಚೆಗೆ ಗ್ರಾಸವಾಗಿದೆ. ಸಿಬಿಐ ತನಿಖೆಗೆ ಕೋರಿಕೆ
ಬೆಂಗಳೂರು, ಮೇ 30: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ತೆಲಂಗಾಣದ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾದ ಪ್ರಕರಣಕ್ಕೆ ಈಗ ಹೊಸ ತಿರುವು ಲಭಿಸಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾವು ಸಿಬಿಐಗೆ ಔಪಚಾರಿಕ ದೂರು ಸಲ್ಲಿಸಿದೆ.
ಹೀಗಾಗಿ ರಾಜ್ಯ ಸರಕಾರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸದೆ ಇದ್ದರೂ ಸಚಿವ ಬಿ.ನಾಗೇಂದ್ರ ಸಿಬಿಐ ವಿಚಾರಣೆ ಎದುರಿಸಬೇಕಾದ ಅನಿವಾರ್ಯಕ್ಕೆ ಸಿಲುಕುವ ಸಾಧ್ಯತೆ ದಟ್ಟವಾಗಿದೆ. ಪ್ರಕರಣ ರಾಜಕೀಯ ತಿರುವು ತೆಗೆದುಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಈ ಬಗ್ಗೆ ಪತ್ರಿಕಾ ಪ್ರಕಟನೆ ಹೊರಡಿಸಿದೆ. ಬ್ಯಾಂಕ್ ಹೇಳಿದ್ದೇನು? ಅಕ್ರಮ ಬೆಳಕಿಗೆ ಬಂದೊಡನೆ ಕಾನೂನುಬಾಹಿರ ವ್ಯವಹಾರ ಎಂದು ಘೋಷಿಸಿದ್ದೇವೆ.
ಮೂವರು ಅಧಿಕಾರಿಗಳನ್ನೂ ಅಮಾನತುಗೊಳಿಸಲಾಗಿದೆ.
ಸಂಪೂರ್ಣ ತನಿಖೆ, ಅಪರಾಧಿಗಳ ತ್ವರಿತ ಪತ್ತೆಗಾಗಿ ಅಗತ್ಯ ಕ್ರಮವೇ ನಮ್ಮ ಉದ್ದೇಶ.
ಮೇ 30ರಂದು ಸಿಬಿಐಗೆ ಔಪಚಾರಿಕವಾಗಿ ದೂರು ಸಲ್ಲಿಸಿದ್ದೇವೆ.