ದಾವಣಗೆರೆ: ಇಲ್ಲಿನ ಎಂಸಿಸಿ ಬಿ ಬ್ಲಾಕ್‌ನಲ್ಲಿ ಮಹಾನಗರಪಾಲಿಕೆಗೆ ಸೇರಿದ 25 ಕೋಟಿ ರೂ. ಮೌಲ್ಯದ ನಿವೇಶನ ಕಬಳಿಸಲು ಬಿಜೆಪಿ ಸಂಚು ರೂಪಿಸಿದೆ ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಜಿ.ಎಸ್. ಮಂಜುನಾಥ್ ಗಡಿಗುಡಾಳ್ ಗಂಭೀರ ಆರೋಪ ಮಾಡಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷದಿಂದ ಮಹಾನಗರಪಾಲಿಕೆಯ ನಿವೇಶನದಲ್ಲಿ ಒಳಾಂಗಣ ಕ್ರೀಡಾಂಗಣ, ವಾಣಿಜ್ಯ ಕಟ್ಟಡ, ನಗರಪಾಲಿಕೆ ಕಚೇರಿ ನಿರ್ಮಾಣಕ್ಕೆ ಮನವಿ ಮಾಡಲಾಗುತ್ತಿದೆ. ಸ್ವತಃ ಶಾಸಕ ರವೀಂದ್ರನಾಥ್ ಕೂಡ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಆ ನಿವೇಶನ ಕಾರ್ಯಾಲಯಕ್ಕೆ ನಿವೇಶನ ಮಂಜೂರು ಮಾಡಿಕೊಡುವಂತೆ ಬಿಜೆಪಿ ಜಿಲ್ಲಾಧ್ಯಕ್ಷರು ಮಹಾನಗರಪಾಲಿಕೆಗೆ ಮನವಿ ಸಲ್ಲಿಸಿದ್ದಾರೆ. ಅದು ನಮ್ಮ ಜಾಗ ಮತ್ತು ನಮ್ಮ ಹಕ್ಕು. ಯಾವುದೇ ಕಾರಣಕ್ಕೂ ನಿವೇಶನ ಬಿಟ್ಟುಕೊಡುವುದಿಲ್ಲ ಎಂದರು.
ಎಂಸಿಸಿ ಬಿ ಬ್ಲಾಕ್‌ನಲ್ಲಿ 3681/10, 3681/10ಎ, 3681/11 ಹಾಗೂ 3681/12 ಸರ್ವೇ ನಂಬರ್‌ನಲ್ಲಿ 131.23 -196.86 ಅಡಿ ಸುತ್ತಳತೆಯ ಮಹಾನಗರ ಪಾಲಿಕೆಗೆ ಸೇರಿದ ನಿವೇಶನ ಇದೆ. ಈಗಿನ ಮಾರುಕಟ್ಟೆ ಬೆಲೆ 25 ಕೋಟಿ ರೂ. ಆಗಬಹುದು. ಅಂತಹ ಬೆಲೆ ಬಾಳುವ ಮತ್ತು ಸಾರ್ವಜನಿಕ ಅನುಕೂಲಕ್ಕೆ ಮೀಸಲಿಟ್ಟಿರುವ ಜಾಗವನ್ನ ಬಿಜೆಪಿ ಕಾರ್ಯಾಲಯಕ್ಕೆ ಮಂಜೂರು ಮಾಡಿಕೊಡಬೇಕು ಎಂದು ಜಿಲ್ಲಾಧ್ಯಕ್ಷ ಎಸ್. ಎಂ. ವೀರೇಶ್ ಹನಗವಾಡಿ ಜ. 20ರಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದಾರೆ. ಆ ಮೂಲಕ ನಿವೇಶನ ಕಬಳಿಸುವ ಯತ್ನ ನಡೆಸಲಾಗುತ್ತಿದೆ ಎಂದು ದೂರಿದರು.
ನಾವು ಯಾವುದೇ ಕಾರಣಕ್ಕೂ ನಿವೇಶನ ಬಿಟ್ಟು ಕೊಡುವುದಿಲ್ಲ. ಕಾನೂನು ಹೋರಾಟ ಒಳಗೊಂಡಂತೆ ಎಲ್ಲ ಹಂತದ ಹೋರಾಟ ನಡೆಸುತ್ತೇವೆ. ಆ ಜಾಗವನ್ನು ಬಿಜೆಪಿ ಆಸ್ತಿಯನ್ನಾಗಿ ಮಾಡಿಕೊಳ್ಳಲು ಬಿಡುವುದೇ ಇಲ್ಲ. ಎಂತದ್ದೇ ತ್ಯಾಗಕ್ಕೂ ಸಿದ್ಧ ಎಂದು ಗುಡುಗಿದರು.
ಕಾಂಗ್ರೆಸ್ ಸದಸ್ಯ ಎ. ನಾಗರಾಜ್ ಮಾತನಾಡಿ, ಮಹಾನಗರ ಪಾಲಿಕೆ ಬಜೆಟ್ ಸಭೆಯಲ್ಲಿ ಏಕಾಏಕಿ ಸ್ವಯಂ ಘೋಷಣೆ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದನ್ನ ವಿರೋಧಿಸಿ ಮುಂದಿನ ದಿನಗಳಲ್ಲಿ ಹಂತ ಹಂತದ ಹೋರಾಟ ನಡೆಸಲಾಗುವುದು. ಕೊರೊನಾ ಕಾರಣದಿಂದ ತೆರಿಗೆ ಹೆಚ್ಚಳ ಮಾಡದಂತೆ ಮನವಿ ಮಾಡಲಾಗಿತ್ತು. ಆದರೂ ಬಜೆಟ್ ಸಭೆಯಲ್ಲಿ ಎಸ್ ಎಎಸ್ ಪದ್ಧತಿಯಡಿ ಶೇ. 3 ರಷ್ಟು ತೆರಿಗೆ ಹೆಚ್ಚಿಸಿರುವುರಿಂದ ಜನರಿಗೆ ಹೊರೆ ಅಗಲಿದೆ. 2005-06ರಲ್ಲಿ ನಿಗದಿಯಾಗಿರುವಂತೆ ತೆರಿಗೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
2020-21ನೇ ಸಾಲಿನಲ್ಲಿ ಜಿಲ್ಲಾಧಿಕಾರಿ ಅಧಿಕಾರಾವಧಿಯಲ್ಲಿ ವಸತಿ ವಲಯಕ್ಕೆ ಶೇ. 15, ವಾಣಿಜ್ಯ ಸಂಕೀರ್ಣಕ್ಕೆ ಶೇ. 17 ತೆರಿಗೆ ಹೆಚ್ಚಿಸಲಾಗಿದೆ. ಈಗ ಉಪ ನೋಂದಣಿ ಇಲಾಖೆ ಮೌಲ್ಯದ ಆಧಾರದಲ್ಲಿ ಶೇ. 3 ರಿಂದ 5ರಷ್ಟು ತೆರಿಗೆ ಹೆಚ್ಚಿಸಿರುವುದರಿಂದ ತೆರಿಗೆ ಪಾವತಿದಾರರಿಗೆ ಹೆಚ್ಚು ಹೊರೆ ಆಗಲಿದೆ. ಒಂದು ವರ್ಷ ತೆರಿಗೆ ಕಟ್ಟದೇ ಹೋದಲ್ಲಿ ಶೇ. 24ರಷ್ಟು ದಂಡ ಹಾಕಲಾಗುವುದು. ಮೂಲ ಕಂದಾಯಕ್ಕೆ ಸೆಸ್ ವಿಧಿಸಬೇಕು. ತೆರಿಗೆ ಹೆಚ್ಚಳ ಹಿಂದಕ್ಕೆ ಪಡೆಯಬೇಕು. ಇಲ್ಲದೆ ಹೋದರೆ ಕಾಂಗ್ರೆಸ್ ನಿಂದ ಹೋರಾಟ ಮಾಡಲಾಗುವುದು ಎಂದರು.
ಸದಸ್ಯ ಕೆ. ಚಮನ್ ಸಾಬ್ ಮಾತನಾಡಿ, ಕೇಂದ್ರ, ರಾಜ್ಯ ಸರ್ಕಾರ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು, ಜನರ ಬೇರೆಡೆ ಗಮನ ಸೆಳೆಯಲು ಹಿಜಾಬ್, ಕಾಶ್ಮೀರ್ ಫೈಲ್ಸ್, ಈಗ ಜಟ್ಕಾ, ಹಲಾಲ್ ಕಟ್ ವಿಚಾರ ಕೈಗೆತ್ತಿಕೊಂಡಿವೆ ಎಂದು ದೂರಿದರು. ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಗಣೇಶ್ ಹುಲ್ಮನೆ ಸುದ್ದಿಗೋಷ್ಠಿಯಲ್ಲಿದ್ದರು.