ಬೆಳಗಾವಿ: ರಾಜ್ಯದಲ್ಲಿ ಬಿಜೆಪಿಯ 25 ಸಂಸದರಿದ್ದರೂ ಯಾವೊಬ್ಬ ಸಂಸದರು ಮಹದಾಯಿ ವಿಚಾರವಾಗಿ ಲೋಕಸಭೆಯಲ್ಲಿ ಧ್ವನಿ ಎತ್ತಿಲ್ಲ. ನನ್ನ ಬಿಟ್ಟು ಯಾರು ಧ್ವನಿ ಎತ್ತಿದ್ದಾರೆ ಹೇಳಲಿ ಎಂದು ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.
ಜೆಡಿಎಸ್‌ದಿಂದ ಹಮ್ಮಿಕೊಂಡ ಜಲಧಾರೆ ಆಂದೋಲನದ ಅಂಗವಾಗಿ ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ಮಲಪ್ರಭಾ ನದಿಯ ಉಗಮ ಸ್ಥಾನಕ್ಕೆ ಶನಿವಾರ ಭೇಟಿ ನೀಡಿ ಪೂಜೆ ಸಲ್ಲಿಸಿ ಚಾಲನೆ ನೀಡಿದ ನಂತರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮಹದಾಯಿ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ರಾಜಕೀಯ ಬಿಟ್ಟು ಬೇರೆ ಏನೂ ಮಾಡುತ್ತಿಲ್ಲ ಎಂದರು.
ಮಹದಾಯಿ ವಿಷಯದಲ್ಲಿ ಕರ್ನಾಟಕದಲ್ಲಿ ತಾವು ಹೇಳಿರುವುದು ಸತ್ಯವೋ, ಇಲ್ಲಾ ಗೋವಾದಲ್ಲಿ ಹೇಳುತ್ತಿರುವುದು ಸತ್ಯವೋ ಎಂಬುದನ್ನು ಬಿಜೆಪಿ-ಕಾಂಗ್ರೆಸ್ ಪಕ್ಷಗಳೆರಡೂ ಸ್ಪಷ್ಟಪಡಿಸಬೇಕು. ಜನರನ್ನು ಗೊಂದಲದಲ್ಲಿ ಬೀಳಿಸಬಾರದು ಎಂದು ಸವಾಲು ಹಾಕಿದರು.
ಈ ಭಾಗದ ಜನರಿಗೆ ನೀರು ಕೊಡಬೇಕೆಂದು ದೇವೇಗೌಡರು, ಕುಮಾರಸ್ವಾಮಿಯವರು ಮತ್ತು ನಾವು ಹೋರಾಟ ಆರಂಭಿಸಿದ್ದೇವೆ. ಇದು ನಮ್ಮ ನದಿ. ನಾವು ನೀರು ಕೇಳುತ್ತಿರುವುದು ಕುಡಿಯುವುದಗೋಸ್ಕರ. ವ್ಯವಸಾಯ ಅಥವಾ ವಿದ್ಯುತ್ ಉತ್ಪಾದನೆಗೆ ನೀರು ಕೇಳುತ್ತಿಲ್ಲ. ನೀರು ಎಲ್ಲಿಯೋ ಹೋಗಿ ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ಸಮುದ್ರಕ್ಕೆ ಯಾಕೆ ಬಿಡುತ್ತೀರಿ, ನಮಗೇ ಕುಡಿಯಲು ನೀರು ಕೊಡಿ ಎಂದು ಕೇಳುತ್ತಿದ್ದೇವೆ. ಇದರಲ್ಲಿ ತಪ್ಪೇನು. ಕುಡಿಯುವ ನೀರಿಗಾಗಿ ಯಾರ ಹೋರಾಟ ಮಾಡಿದರೂ ನಾನು ಬೆಂಬಲ ಕೊಡುತ್ತೇನೆ. ನಮಗೆ ಕುಡಿಯುವ ನೀರು ಬೇಕು. ಹೀಗಾಗಿ ಇದರಲ್ಲಿ ರಾಜಕೀಯ, ಜಾತಿ ಬೆರೆಸಲು ಹೋಗಬೇಡಿ ಎಂದು ಹೇಳಿದರು.
ಮಹದಾಯಿ ಯೋಜನೆಗೆ ಮೊದಲು 100 ಕೋಟಿ ಅನುದಾನ ಕೊಟ್ಟವರೇ ಕುಮಾರಸ್ವಾಮಿ. ಮಲಪ್ರಭಾ ನದಿ ದಡದ ರೈತರಿಗೆ ನೀರು ಕೊಡಬೇಕೆಂದು ನಿರ್ಧರಿಸಿದ್ದವರು. ಹಾಗಾಗಿ ನಾವು ಆರಂಭ ಮಾಡಿದ್ದ ಹೋರಾಟ ನಾವೇ ಅಂತ್ಯಗೊಳಿಸಬೇಕು ಎಂದು ಹೋರಾಟಕ್ಕೆ ಇಳಿದಿದ್ದೇವೆ. ಬೇರೆ ಸರ್ಕಾರ ಏನು ಮಾಡಿದೆ, ಏನು ಮಾಡಿಲ್ಲ ಎಂಬುದನ್ನು ನಾವು ಪ್ರಶ್ನಿಸುತ್ತಿಲ್ಲ. ನಮಗೆ ಅಧಿಕಾರ ಸಿಕ್ಕಾಗಲೆಲ್ಲ ಸುದೀರ್ಘವಾಗಿ ಈ ವಿಚಾರದ ಬಗ್ಗೆ ಚರ್ಚಿಸಿದ್ದೇವೆ. ಆದರೆ ಈಗ 25 ಜನ ಬಿಜೆಪಿ ಸಂಸದರಿದ್ದರೂ ಮಹದಾಯಿಗಾಗಿ ಯಾರೊಬ್ಬರೂ ಪ್ರಶ್ನೆ ಮಾಡಿಲ್ಲ. ಲೋಕಸಭೆಯಲ್ಲಿ ನಾನೊಬ್ಬನೇ ಮಾತನಾಡಿದ್ದೇನೆ ಎಂದರು.
ನಾವು ಡೋಂಗಿ ಪ್ರಚಾರಕ್ಕೆ ಬಂದಿಲ್ಲ. ಮಹದಾಯಿ ವಿಷಯದಲ್ಲಿ ಖಂಡಿತಾ ನ್ಯಾಯ ಕೊಡುತ್ತೇವೆ. ನಮ್ಮಲ್ಲಿ ಡಬಲ್ ಇಂಜಿನ್ ಸರ್ಕಾರ ಇದೆ ಎಂದು ಬಿಜೆಪಿಯವರು ಹೇಳುತ್ತಾರೆ. ಹಾಗಾದರೆ ಮಹದಾಯಿ ಯೋಜನೆ ಮಾಡಿಸಲು ಇವರಿಂದ ಯಾಕೆ ಆಗುತ್ತಿಲ್ಲ. ಸಿಡಬ್ಲುಸಿ ಯಾರ ಕೈಯಲ್ಲಿ ಇರುತ್ತದೆ. ಪ್ರಧಾನ ಮಂತ್ರಿಗಳು ಅಥವಾ ಜಲಶಕ್ತಿ ಸಚಿವರು ದಿಟ್ಟ ಮನಸ್ಸು ಮಾಡಿ ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ಏಕೆ ಸಮಸ್ಯೆ ಬಗೆಹರಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವಂತೆ ಹೋರಾಟ ಮಾಡಿದ್ದೇವೆ. ಆಂಧ್ರಪ್ರದೇಶದವರು ಬಲವಾಗಿ ವಿರೋಧಿಸಿದ್ದಕ್ಕೆ ಘೋಷಣೆ ಮಾಡಲಿಲ್ಲ. ಕೇಂದ್ರಕ್ಕೆ ಕರ್ನಾಟಕದ 25 ಸಂಸದರನ್ನು ಜನ ಕೊಟ್ಟಿದ್ದಾರೆ. ಅವರಿಗೆ ನಾವು ನ್ಯಾಯ ಕೊಡಿಸುವುದು ಇವರ ಧರ್ಮವಲ್ಲವೇ ಎಂದು ಪ್ರಶ್ನಿಸಿದರು.