Advertisement

ಸಮ್ಮಿಶ್ರ ಸರ್ಕಾರ ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ರಣತಂತ್ರ

06:30 AM Jul 03, 2018 | Team Udayavani |

ಬೆಂಗಳೂರು: ವಿಧಾನಮಂಡಲ ಅಧಿವೇಶನದಲ್ಲಿ ಅತಿವೃಷ್ಠಿ ಪರಿಹಾರ, ಕಾನೂನು ಸುವ್ಯವಸ್ಥೆ,ಮಾಸಾಶನ ಸ್ಥಗಿತ ಸೇರಿ ಸರ್ಕಾರದ ವೈಫ‌ಲ್ಯಗಳನ್ನು ಪ್ರಸ್ತಾಪಿಸಿ ಸಮ್ಮಿಶ್ರ ಸರ್ಕಾರವನ್ನು ಇಕ್ಕ ಟ್ಟಿಗೆ ಸಿಲುಕಿಸಲು ಬಿಜೆಪಿ ರಣತಂತ್ರ ರೂಪಿಸಿದೆ.

Advertisement

ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ, ಉಭಯ ಸದನಗಳಲ್ಲಿ ಸರ್ಕಾರದ ವೈಫ‌ಲ್ಯಗಳ ವಿರುದ್ಧ ಹೋರಾಟ ನಡೆಸಲು ತೀರ್ಮಾನಿಸಲಾಯಿತು.

ಬಜೆಟ್‌ ಮಂಡನೆವರೆಗೂ ಕಾದು ನೋಡಿ, ಪ್ರಣಾಳಿಕೆಯಲ್ಲಿ ಹೇಳಿದಂತೆ ಎಲ್ಲ ರೈತರ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಮಾಡದಿದ್ದರೆ ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡಲು
ನಿರ್ಧರಿಸಲಾಯಿತು. ಸದಸ್ಯರು ನಿತ್ಯ ಸದನಕ್ಕೆ ಹಾಜರಾಗಿ ಪ್ರಶ್ನೋತ್ತರ ಕಲಾಪ ಸೇರಿ ಎಲ್ಲ ಚರ್ಚೆಗಳಲ್ಲಿ ಪಾಲ್ಗೊಂಡು ಅಭಿಪ್ರಾಯ ವ್ಯಕ್ತಪಡಿಸಬೇಕು. ಜನವಿರೋಧಿ ತೀರ್ಮಾನ ಅಥವಾ ಪ್ರಸ್ತಾಪಗಳನ್ನು ವಿರೋಧಿಸಬೇಕು ಎಂದು ಸೂಚಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗಿಲ್ಲ. ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ.ಹೀಗಾಗಿ, ಜನರ ಕೆಲಸ ಕಾರ್ಯಗಳಿಗೆ ತೊಂದರೆಯಾಗಿದೆ. ಸರ್ಕಾರದ ವೈಫ‌ಲ್ಯಗಳನ್ನು ನಾವು ಸದನದಲ್ಲಿ ಸಮರ್ಥವಾಗಿ ಎತ್ತಿ ತೋರಿಸಬೇಕು. ಪ್ರತಿ ಹಂತ ದಲ್ಲೂ ಎಚ್ಚರಿಕೆಯಿಂದ ಕೆಲಸ ಮಾಡಬೇಕೆಂದು ಬಿಎಸ್‌ವೈ ಅವರು ಕಿವಿಮಾತು ಹೇಳಿದರು.

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುವಾಗ ರಾಜ್ಯಪಾಲರ ಭಾಷಣದಲ್ಲಿ ರಾಜ್ಯದ ಅಭಿವೃದ್ಧಿ ಬಗ್ಗೆ ಸ್ಪಷ್ಟ ಚಿತ್ರಣ ನೀಡದಿರುವುದನ್ನು ಪ್ರಸ್ತಾಪಿಸಬೇಕು. ಸಾಲಮನ್ನಾ ಸೇರಿ ರೈತರಿಗೆ ಅನುಕೂಲವಾಗುವ ಘೋಷಣೆ ಮಾಡಿಲ್ಲ. ಈ ವಿಚಾರಗಳೆಲ್ಲ ಪ್ರಸ್ತಾಪಿಸಬೇಕೆಂದು ತಿಳಿಸಿದರು.

Advertisement

ಬಿಎಸ್‌ವೈ ಕಿವಿಮಾತು: ಹೊಸ ಶಾಸಕರು ಸದನದಲ್ಲಿ ಹೆಚ್ಚು ಹೆಚ್ಚು ಭಾಗವಹಿಸಬೇಕು. ನಿಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಿಕೊಂಡು ಸದನಕ್ಕೆ ಬರಬೇಕು. ಜತೆಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳು, ಸಮಸ್ಯೆಗಳ ಬಗ್ಗೆಯೂ ಮಾಹಿತಿ ತಿಳಿದುಕೊಳ್ಳಬೇಕು ಎಂದು ಬಿಎಸ್‌ವೈ ಕಿವಿಮಾತು ಹೇಳಿದರು ಎನ್ನಲಾಗಿದೆ.

ಆಪರೇಷನ್‌ ಭೀತಿ
ಪ್ರತಿಪಕ್ಷ ಬಿಜೆಪಿಗೆ ಆಪರೇಷನ್‌ ಹಸ್ತದ ಭೀತಿ ಎದುರಾಗಿದೆ ಎಂದು ಹೇಳಲಾಗಿದ್ದು, ಎಚ್ಚರಿಕೆಯಿಂದ ಇರುವಂತೆ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಶಾಸಕರಿಗೆ ಸೂಚಿಸಿದ್ದಾರೆ. ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆಂದು ಸಚಿವ ರಮೇಶ್‌ಜಾರಕಿಹೊಳಿ ಹೇಳಿಕೆ ವಿಚಾರವೂ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಸ್ತಾಪವಾಗಿ, ಬಿಜೆಪಿಯ ಐದಾರು ಶಾಸಕರಿಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಗಾಳ ಹಾಕಿದೆ ಎಂಬ ಮಾಹಿತಿ ಇದೆ. ಶಾಸಕರೂ ಆದಷ್ಟೂ ಎಚ್ಚರಿಕೆಯಿಂದ ಇರಬೇಕೆಂದು ಹೇಳಿದರು.

ಜತೆಗೆ ಅನುಮಾನ ಇರುವ ಶಾಸಕರ ಚಲನ ವಲನದ ಮೇಲೆ ನಿಗಾ ಇಡಲು ಕೆಲವು ಹಿರಿಯ ಶಾಸಕರಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next