ಹೊಸದಿಲ್ಲಿ : ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ನಾಯಕ ಚಿರಾಗ್ ಪಾಸ್ವಾನ್ ಅವರಿಗೆ ಜುಲೈ 18 ರಂದು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ(NDA) ಸಭೆಯಲ್ಲಿ ಭಾಗವಹಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪತ್ರ ಬರೆದಿದ್ದಾರೆ.
ನರೇಂದ್ರ ಮೋದಿ ಅವರ ವಿರುದ್ಧ ಒಂದಾಗಲು ಪ್ರತಿಪಕ್ಷಗಳ ತೀವ್ರ ಪ್ರಯತ್ನಗಳ ನಡುವೆ ಕೇಂದ್ರ ಸರಕಾರ ಶಕ್ತಿ ಪ್ರದರ್ಶನವನ್ನು ಮಾಡಲು ಹೊರಟಿದೆ.
ಕೇಂದ್ರ ಸಚಿವ ನಿತ್ಯಾನಂದ ರಾಯ್ ಅವರು ಶುಕ್ರವಾರ ರಾತ್ರಿ ಚಿರಾಗ್ ಪಾಸ್ವಾನ್ ಅವರನ್ನು ವಾರದೊಳಗೆ ಎರಡನೇ ಬಾರಿಗೆ ಭೇಟಿಯಾಗಿದ್ದಾರೆ. ಬೆನ್ನಲ್ಲೇ ಎಲ್‌ಜೆಪಿ (ಆರ್) ಪಕ್ಷವು ಬಿಜೆಪಿ ಅಧ್ಯಕ್ಷ ನಡ್ಡಾ ಅವರು ಯುವ ನಾಯಕನಿಗೆ ಬರೆದ ಪತ್ರವನ್ನು ಹಂಚಿಕೊಂಡಿದೆ.
ನಡ್ಡಾ ಅವರು ಪ್ರಾದೇಶಿಕ ಪಕ್ಷವನ್ನು ಎನ್‌ಡಿಎಯ ಪ್ರಮುಖ ಘಟಕವೆಂದು ಬಣ್ಣಿಸಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಬಡವರ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ಪ್ರಮುಖ ಪಾಲುದಾರರಾಗಿ ಎಂದಿದ್ದಾರೆ.
ದಲಿತ ನಾಯಕ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ ಚಿರಾಗ್ ಅವರು ಬಿಹಾರದಲ್ಲಿ 2020 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟದಿಂದ ಹೊರಬಂದಿದ್ದರು. ಈಗ ಕೇಂದ್ರ ಸಚಿವರಾಗಿರುವ ಅವರ ಚಿಕ್ಕಪ್ಪ ಪಶುಪತಿ ಕುಮಾರ್ ಪರಸ್ ನೇತೃತ್ವದಲ್ಲಿ ಎಲ್‌ಜೆಪಿಯಲ್ಲಿನ ವಿಭಜನೆ ಚಿರಾಗ್ ಅವರನ್ನು ದುರ್ಬಲಗೊಳಿಸಿದರೂ, ಪಕ್ಷದ ನಿಷ್ಠಾವಂತ ಮತಬ್ಯಾಂಕ್ ಅನ್ನು ತಮ್ಮೊಂದಿಗೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಆರ್‌ಜೆಡಿ, ಜೆಡಿಯು, ಕಾಂಗ್ರೆಸ್ ಮತ್ತು ಎಡಪಕ್ಷಗಳ ಒಕ್ಕೂಟದ ವಿರುದ್ಧ ಸೆಣಸಲು ಬಿಜೆಪಿಗೆ ಪ್ರಾಮುಖ್ಯತೆಯನ್ನು ಸೂಚಿಸುತ್ತಿದೆ. ಪ್ರಮುಖ ವಿಷಯಗಳಲ್ಲಿ ಅವರು ಬಿಜೆಪಿಯನ್ನು ಬೆಂಬಲಿಸುವಲ್ಲಿ ದೃಢವಾಗಿ ನಿಂತಿದ್ದಾರೆ.