ಬೆಂಗಳೂರು: ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಎದುರು, ಮೈಸೂರು,ಹುಬ್ಬಳ್ಳಿ-ಧಾರವಾಡ, ಮಂಗಳೂರು ಸೇರಿ ರಾಜ್ಯದ ಎಲ್ಲಾ ಕಡೆ ಪಟಾಕಿಗಳನ್ನು ಸಿಡಿಸಿ ಹರ್ಷ ವ್ಯಕ್ತಪಡಿಸಿದ ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿದರು. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪರ ಘೋಷಣೆ ಕೂಗಿದರು. ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಬಿಜೆಪಿ ಕಚೇರಿ ಎದುರು ಪ್ರಧಾನಿ ಮತ್ತು ಅಮಿತ್ ಶಾ ಅವರ ಭಾವಚಿತ್ರಗಳೊಂದಿಗೆ ನೃತ್ಯ ಮಾಡಿದ ಬಿಜೆಪಿ ಕಾರ್ಯಕರ್ತರು, ಬಿಜೆಪಿ ಪರ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದಟಛಿ ಘೋಷಣೆ ಕೂಗಿದರು. ಸ್ಥಳಕ್ಕೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಹಾರ ಹಾಕಿ ಸಂಭ್ರಮಿಸಿದರು. ಅಲ್ಲದೆ, ಸಿಹಿ ತಿನ್ನಿಸಿದರು.
ಇದಾದ ಬಳಿಕ ಕಚೇರಿಯೊಳಗೆ ಆಗಮಿಸಿದ ಯಡಿಯೂರಪ್ಪ ಅವರು ತಮ್ಮ ಜತೆಗಿದ್ದ ಶಾಸಕ ಸುರೇಶ್‌ಕುಮಾರ್, ವಿಧಾನ ಪರಿಷತ್ ಸದಸ್ಯ ರಾಮಚಂದ್ರಗೌಡ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಉಪಾಧ್ಯಕ್ಷ ಕೆ.ಪಿ.ನಂಜುಂಡಿ, ಚಿತ್ರನಟ ಜಗ್ಗೇಶ್, ಶಾಸಕರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ, ವೈ.ಎ.ನಾರಾಯಣಸ್ವಾಮಿ ಮತ್ತಿತರರಿಗೆ ಸಿಹಿ ವಿತರಿಸಿದರು.
ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತಿರುವ ಪಟ್ಟಿಗೆ ಹಿಮಾಚಲ ಪ್ರದೇಶ ಹೊಸ ಸೇರ್ಪಡೆಯಾಗಿದೆ. ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತಿರುವ ಪಟ್ಟಿಯ ಮುಂದಿನ ಸರದಿ ಕರ್ನಾಟಕವಾಗಲಿದೆ. ಈ ಚುನಾವಣಾ ಫಲಿತಾಂಶದಿಂದ ರಾಜ್ಯಕ್ಕೆ ಸ್ಫೂರ್ತಿ ಸಿಕ್ಕಿದೆ. ನಾಯಕರು, ಕಾರ್ಯಕರ್ತರಲ್ಲಿ ಉತ್ಸಾಹ ಜಾಸ್ತಿಯಾಗಿದೆ. ಕೇಂದ್ರ ನಾಯಕರಿಗೂ ಮುಂದಿನ ಗುರಿ ಕರ್ನಾಟಕವಾಗಿದೆ.
– ಶೋಭಾ ಕರಂದ್ಲಾಜೆ, ಸಂಸದೆ.