Advertisement

ಬಿಜೆಪಿ ಅಭ್ಯರ್ಥಿ ಇಂದು ಪ್ರಕಟ ನಿರೀಕ್ಷೆ 

01:48 AM Mar 20, 2019 | Team Udayavani |

ಬೆಂಗಳೂರು: ರಾಜ್ಯದ 28 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕುರಿತು ದಿಲ್ಲಿಯಲ್ಲಿ ಬೀಡು ಬಿಟ್ಟಿರುವ ರಾಜ್ಯ ನಾಯಕರೊಂದಿಗೆ ಬಿಜೆಪಿ ವರಿಷ್ಠರು ತಡರಾತ್ರಿವರೆಗೆ ಚರ್ಚೆ ನಡೆಸಿದ್ದು, ಅಭ್ಯರ್ಥಿ ಪಟ್ಟಿಯನ್ನು ಅಂತಿಮಗೊಳಿಸಿದರೂ ಬುಧವಾರ ಪ್ರಕಟವಾಗುವ ನಿರೀಕ್ಷೆ ಇದೆ.

Advertisement

ಸೋಮವಾರ ನಿಗದಿಯಾಗಿದ್ದ ಪಕ್ಷದ ಕೇಂದ್ರ ಚುನಾವಣ ಸಮಿತಿ ಸಭೆ ಮಂಗಳವಾರಕ್ಕೆ ಮುಂದೂಡಿಕೆ ಯಾಗಿದ್ದ ಹಿನ್ನೆಲೆಯಲ್ಲಿ ಯಡಿಯೂರಪ್ಪ ನೇತೃತ್ವದ ನಿಯೋಗ ದಿಲ್ಲಿಯಲ್ಲೇ ವಾಸ್ತವ್ಯ ಮುಂದುವರಿಸಿದೆ. ಮಂಗಳವಾರ ಸಂಜೆ ಅಮಿತ್‌ ಶಾ ಅವರೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಯಡಿಯೂರಪ್ಪ, ಜಗದೀಶ ಶೆಟ್ಟರ್‌, ಕೆ.ಎಸ್‌. ಈಶ್ವರಪ್ಪ, ಸಂಸದ ಪ್ರಹ್ಲಾದ್‌ ಜೋಷಿ, ಬಿಜೆಪಿ ರಾಷ್ಟ್ರೀಯ ಸಹ ಸಂಘಟನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಅರುಣ್‌ ಕುಮಾರ್‌ ಪಾಲ್ಗೊಂಡು ಚರ್ಚಿಸಿದರು.
ಅನಂತರ ಕರ್ನಾಟಕಕ್ಕೆ ಸಂಬಂಧಪಟ್ಟಂತೆ ಆರಂಭವಾದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ರಾಜ್ಯದ ಆಯ್ದ ನಾಯಕರಷ್ಟೇ ಪಾಲ್ಗೊಂಡಿದ್ದರು. ಕರ್ನಾಟಕ ಮಾತ್ರವಲ್ಲದೆ ದೇಶಾದ್ಯಂತ ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ಎಲ್ಲ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಅಖೈರುಗೊಳಿಸುವ ಕಾರ್ಯದ ಹಿನ್ನೆಲೆಯಲ್ಲಿ ತಡರಾತ್ರಿವರೆಗೆ ಸಭೆ ಮುಂದುವರಿದಿತ್ತು ಎಂದು ಮೂಲಗಳು ತಿಳಿಸಿವೆ.

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಮಂಗಳವಾರ ನಡೆದಿತ್ತು. ಕೆಲವು ರಾಜ್ಯಗಳ ನಾಯಕರು ಸಿದ್ಧಪಡಿಸಿ ಸಲ್ಲಿಸಿದ್ದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಮಗ್ರವಾಗಿ ಪರಿಶೀಲಿಸಿ ಚರ್ಚಿಸಿದ ವರಿಷ್ಠರು ಕೆಲವು ಹೆಸರನ್ನು ಬದಲಾಯಿಸುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಸಭೆ ಸುದೀರ್ಘ‌ವಾಗಿ ಸಾಗಿತ್ತು. ಬುಧವಾರ ಏಕಕಾಲಕ್ಕೆ ನೂರಕ್ಕೂ ಹೆಚ್ಚು ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಘೋಷಿಸುವ ನಿರೀಕ್ಷೆಯಿದೆ. 

ಬಿಎಸ್‌ವೈ -ರಮೇಶ್‌ ಜಾರಕಿಹೊಳಿ ಭೇಟಿ?
ಬೆಂಗಳೂರು: ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಕಾಂಗ್ರೆಸ್ಸಿಗನ ಸ್ಪರ್ಧೆಗೆ ಟಿಕೆಟ್‌ ನೀಡುವಂತೆ ಕಾಂಗ್ರೆಸ್‌ನ ಮಾಜಿ ಸಚಿವರೊಬ್ಬರು ಬಿಜೆಪಿ ನಾಯಕರ ಬಳಿ ಲಾಬಿ ನಡೆಸಿದ್ದಾರೆ ಎನ್ನಲಾಗಿದೆ.

ಮಾಜಿ ಸಚಿವರಾದ ಕಾಂಗ್ರೆಸ್‌ ಶಾಸಕ ರಮೇಶ್‌ ಜಾರಕಿಹೊಳಿ ಅವರು ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಬಳ್ಳಾರಿ ಕ್ಷೇತ್ರದಲ್ಲಿ ವೆಂಕಟೇಶ ಪ್ರಸಾದ್‌ ಅವರಿಗೆ ಬಿಜೆಪಿ ಟಿಕೆಟ್‌ ನೀಡಬೇಕೆಂದು ಒತ್ತಾಯ ಮಾಡಿದ್ದಾರೆ. ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಪಟ್ಟಂತೆ ದೆಹಲಿಯಲ್ಲೇ ಬೀಡುಬಿಟ್ಟಿರುವ ಯಡಿಯೂರಪ್ಪ ಅವರನ್ನು ರಮೇಶ್‌ ಜಾರಕಿಹೊಳಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಮಂಗಳವಾರವಷ್ಟೇ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾದ ವೆಂಕಟೇಶ್‌ ಪ್ರಸಾದ್‌ ಅವರಿಗೆ ಬಿಜೆಪಿಯಿಂದ ಟಿಕೆಟ್‌ ನೀಡಬೇಕೆಂದು ರಮೇಶ್‌ ಜಾರಕಿಹೊಳಿ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Advertisement

ಬಿಜೆಪಿ ನಾಯಕರು ದೇವೇಂದ್ರಪ್ಪ ಅವರನ್ನು ಬಳ್ಳಾರಿ ಕ್ಷೇತ್ರದಿಂದ ಕಣಕ್ಕಿಳಿಸಲು ಚಿಂತನೆ ನಡೆಸಿದ್ದರು. ದೇವೇಂದ್ರಪ್ಪ ಅವರು ರಮೇಶ್‌ ಜಾರಕಿಹೊಳಿ ಅವರ ಸಂಬಂಧಿಯಾಗಿದ್ದಾರೆ. ವೆಂಕಟೇಶ ಪ್ರಸಾದ್‌ಗೆ ಟಿಕೆಟ್‌ ನೀಡುವ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸುವುದಾಗಿ ಯಡಿಯೂರಪ್ಪ ತಿಳಿಸಿದ್ದಾರೆ. ಕಳೆದ ಮೂರು ದಿನಗಳಿಂದ ದೆಹಲಿಯಲ್ಲೇ ವಾಸ್ತವ್ಯ ಹೂಡಿರುವ ರಮೇಶ್‌ ಜಾರಕಿಹೊಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿಯಾಗಲು
ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next