Advertisement

ಯುದ್ಧಕ್ಕೂ ಮುನ್ನವೇ ಬಿಜೆಪಿ ಶಸ್ತ್ರ ತ್ಯಾಗ

02:36 PM May 11, 2023 | Team Udayavani |

ಬಂಗಾರಪೇಟೆ: 2023ರ ವಿಧಾನಸಭೆ ಚುನಾವಣೆಗೆ ಉತ್ಸಾಹದಿಂದ ಸ್ಪರ್ಧಿಸಿ ಕ್ಷೇತ್ರದಲ್ಲಿ ಮತದಾನದವರೆಗೂ ಚುರುಕಿನಿಂದ ಓಡಾಡಿ ಗೆಲುವಿನ ಹಾದಿಯಲ್ಲಿದ್ದ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ, ಕೊನೆ ಕ್ಷಣದಲ್ಲಿ ಯಾರೂ ಕಣ್ಣಿಗೂ ಕಾಣಿಸಿಕೊಳ್ಳದೇ ನಾಪತ್ತೆಯಾಗಿದ್ದರಿಂದ ಕ್ಷೇತ್ರದಲ್ಲಿ ಬಿಜೆಪಿ ಮುಖಂಡರ ಹಾಗೂ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Advertisement

ಮಂಗಳವಾರ ಸಂಜೆಯಿಂದಲೇ ಅಭ್ಯರ್ಥಿ ಕಾಣೆ: ಬಿಜೆಪಿ ಪಕ್ಷದಲ್ಲಿ ಮೂವರು ಟಿಕೆಟ್‌ ಆಕಾಂಕ್ಷಿಗಳಿದ್ದರೂ ಕೊನೆ ಕ್ಷಣದಲ್ಲಿ ಮಾಜಿ ಶಾಸಕ ಎಂ.ನಾರಾಯಣಸ್ವಾಮಿಗೆ ಹೈಕಮಾಂಡ್‌ ಟಿಕೆಟ್‌ ಘೋಷಣೆ ಮಾಡಿ ಕಣಕ್ಕಿಳಿಸಿದ್ದು, ಪ್ರಬಲ ಆಕಾಂಕ್ಷಿಗಳಾಗಿದ್ದ ಬಿ.ವಿ.ಮಹೇಶ್‌ ಹಾಗೂ ವಿ.ಶೇಷು ಶಕ್ತಿಮೀರಿ ಬಿಜೆಪಿ ಪರವಾಗಿ ಮತಪ್ರಚಾರ ಮಾಡಿ ದ್ದರು. ಬುಧವಾರ ಮತದಾನ ಪ್ರಕ್ರಿಯೆಗೂ ಮುನ್ನ ಮಂಗಳವಾರ ಸಂಜೆಯಿಂದಲೇ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಚುನಾವ ಣೆಯಿಂದ ದೂರ ವಾಗಿದ್ದು, ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಎಂ.ನಾರಾಯಣಸ್ವಾಮಿ ಅವರಿಗೆ ಎಲ್ಲಾ ಆಕಾಂಕ್ಷಿಗಳು ಸೇರಿ ಬಿಜೆಪಿ ಟಿಕೆಟ್‌ ಘೋಷಣೆ ಮಾಡುವ ಬಗ್ಗೆ ತೀರ್ಮಾನ ಕೈಗೊಂಡು ಚುನಾವಣಾ ಕಾರ್ಯಗಳನ್ನು ಸುಗಮವಾಗಿ ಪ್ರಚಾರ ನಡೆಸುತ್ತಿದ್ದರು. ಇವರ ಬೆಂಬಲಿಗರಿಗೆ ಒಲವು ಇಲ್ಲದಿದ್ದರೂ, ಕೊನೆ ಚುನಾವಣೆ ಎಂದು ಮತದಾರರು ಹಾಗೂ ಬೆಂಬಲಿಗರಿಂದ ಅನುಕಂಪ ಗಿಟ್ಟಿಸಿಕೊಳ್ಳಲು ಹಲವಾರು ತಂತ್ರ ಉಪಯೋಗಿಸಿ ಬಿಜೆಪಿ ಗೆಲ್ಲಲು ಸಾಕಷ್ಟು ಪ್ರಯತ್ನ ನಡೆಸಿದ್ದ ಎಂ.ನಾರಾಯಣಸ್ವಾಮಿ ಕೊನೆ ಕ್ಷಣದಲ್ಲಿ ಆರ್ಥಿಕ ಸಂಪನ್ಮೂಲದ ಕೊರತೆಯಿಂದ ಚುನಾವಣೆ ನಡೆಸಲು ಹಿಂದೆ ಸರಿದಿರುವ ಬಗ್ಗೆ ಹೇಳುತ್ತಿದ್ದಂತೆ,ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಸಿಟ್ಟು, ಕೋಪ, ಆತಂಕ ಹೆಚ್ಚಾಗಿದೆ.

ಪಕ್ಷದ ವಿರುದ್ಧ ಕಾರ್ಯಕರ್ತರ ಆಕ್ರೋಶ: ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ 2013ರ ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಲೋಕಸಭೆ ಟಿಕೆಟ್‌ ನೀಡಿ ಸ್ಪರ್ಧಿಸಲು ಅವಕಾಶ ನೀಡಿತ್ತು. ಈ ಚುನಾವಣೆಯಲ್ಲಿಯೂ ಸಹ ಇದೇ ರೀತಿ ಮತದಾನಕ್ಕೂ ಮುನ್ನ ಇದೇ ರೀತಿ ಚುನಾವಣೆಯಿಂದ ಹಿಂದೆ ಸರಿದಿದ್ದರು. ಇದನ್ನು ತೀವ್ರ ಖಂಡಿಸಿ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ತೀವ್ರ ಹೋರಾಟ ನಡೆಸಿ ಚುನಾವಣೆ ಮಾಡಿದ್ದರು. ಇದರಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿಯೇ ಹೆಚ್ಚು ಮತಗಳನ್ನು ಪಡೆದಿದ್ದು ಎಲ್ಲರಿಗೂ ಗೊತ್ತಿದ್ದರೂ ಮತ್ತೇ ಏಕೆ ಬಿಜೆಪಿ ಟಿಕೆಟ್‌ ನೀಡಿದ್ದಾರೆಂದು ಬಿಜೆಪಿ ಹೈಕಮಾಂಡ್‌ ವಿರುದ್ಧ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ಈ ಬಾರಿ ಟಿಕೆಟ್‌ ಘೋಷಣೆಗೂ ಮುನ್ನವೇ ಸಾಕಷ್ಟು ವದಂತಿಗಳನ್ನು ಹರಡಿತ್ತು. ಮತದಾನದ ಕೊನೆಕ್ಷಣದಲ್ಲಿ ನಾಪತ್ತೆ ಆಗುತ್ತಾರೆಂಬ ಕ್ಷೇತ್ರದ ಜನರು ಹೇಳುತ್ತಿದ್ದ ಭವಿಷ್ಯ ದಂತೆಯೇ ಚುನಾವಣೆಯಲ್ಲಿ ನಾಪತ್ತೆಯಾಗಿದ್ದಾರೆ.

ಬಿಜೆಪಿಗೆ ಭಾರೀ ಮುಖಭಂಗ: ಕೊನೆಕ್ಷಣದಲ್ಲಿ ಎಂ. ನಾರಾಯಣಸ್ವಾಮಿ ಕಾರ್ಯಕರ್ತರಿಗೆ ಕೈಗೆ ಸಿಗದೆ ದೂರ ಉಳಿದಿರುವ ಹಿನ್ನಲೆಯಲ್ಲಿ ಜೆಡಿಎಸ್‌ ಪಕ್ಷದೊಳಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ನಾರಾಯಣಸ್ವಾಮಿ ಅವರ ತಪ್ಪು ನಿರ್ಧಾರದಿಂದ ಕ್ಷೇತ್ರದಲ್ಲಿ ಬಿಜೆಪಿಗೆ ಮುಖಭಂಗ ಉಂಟಾಗಿದೆ.

ಶ್ರದ್ಧಾಂಜಲಿ ಪೋಸ್ಟರ್‌ ಹಾಕಿ ಆಕ್ರೋಶ: ಬಿಜೆಪಿ ಮರ್ಯಾದೆ ಎಲ್ಲಾ ಹೋಯ್ತು, ಬಿಜೆಪಿಗೆ ಹೇಗೆ ಮತ ಕೇಳಬೇಕು. ಮುಂದೆ ನಮ್ಮ ರಾಜಕೀಯ ಭವಿಷ್ಯ ಹಾಳಾಯಿತು ಎಂದು ಅಭ್ಯರ್ಥಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಹಲವರು ಸಾಮಾಜಿಕ ಜಾಲತಾಣದಲ್ಲಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ವಿರುದ್ಧ ಶ್ರದ್ಧಾಂಜಲಿ ಪೋಸ್ಟರ್‌ಗಳನ್ನು ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಕ್ಷೇತ್ರದಲ್ಲಿ ಕಾಣದ ಮುಖಂಡರು: ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಅವರ ಹಿಂದೆ ಸರಿದಿರುವ ನಿರ್ಧಾರದಿಂದ ಅಸಮಾಧಾನಗೊಂಡ ಬಿಜೆಪಿ ಮುಖಂಡರು ಮತದಾನದ ವೇಳೆಯಲ್ಲಿ ಹೊರಗಡೆ ಎಲ್ಲೂ ಕಾಣಿಸಿಕೊಂಡಿಲ್ಲ. ಸುಮಾರು 259 ಮತಗಟ್ಟೆ ಕೇಂದ್ರಗಳ ಬಳಿ ಒಂದೇ ಒಂದು ಬಿಜೆಪಿ ಟೇಬಲ್‌ ಹಾಕಿಲ್ಲ. ಮತಗಟ್ಟೆ ಕೇಂದ್ರದೊಳಗಡೆ ಒಬ್ಬೇ ಒಬ್ಬ ಏಜೆಂಟ್‌ರು ಸಹ ಇಲ್ಲವಾಗಿತ್ತು. ಕ್ಷೇತ್ರದಲ್ಲಿ ಬಿಜೆಪಿ ಪಕ್ಷವು ನನಗೆ ಹೆಚ್ಚಿನ ಒಲವು ನೀಡಿ ಸ್ಪರ್ಧಿಸಲು ಅವಕಾಶ ನೀಡಿದ್ದು ನನ್ನ ಮಹಾಭಾಗ್ಯವಾಗಿದೆ. ಆದರೆ, ಮತದಾನಕ್ಕೂ ಮುನ್ನ ಆರ್ಥಿಕ ಸಂಪನ್ಮೂಲ ನೀಡುವಲ್ಲಿ ವಿಫ‌ಲಗೊಂಡ ಹಿನ್ನಲೆಯಲ್ಲಿ ಮತದಾನಕ್ಕೂ ಮುನ್ನ ಬೇರೆ ಪಕ್ಷಗಳಿಗೆ ಪೈಪೋಟಿ ನೀಡಲು ಪಕ್ಷದ ಕೆಲವು ಮುಖಂಡರುಗಳ ಸಹಕಾರ ಇಲ್ಲದೇ ಇರುವುದರಿಂದ ಹಿಂದೆ ಸರಿಯಲು ಕಾರಣವಾಗಿದೆ. ನಾನೂ ಯಾರ ಬಳಿಯೂ ಡೀಲ್‌ ಮಾಡಿಕೊಂಡಿಲ್ಲ. ಒಳ ಒಪ್ಪಂದವೂ ಮಾಡಿಕೊಂಡಿಲ್ಲ. – ಎಂ.ನಾರಾಯಣಸ್ವಾಮಿ, ಬಿಜೆಪಿ ಅಭ್ಯರ್ಥಿ

ಎಂ.ಸಿ.ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next