ಬೆಂಗಳೂರು: ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮರು ಆಯ್ಕೆ ಬಯಸಿರುವ ಶಾಸಕ ಎಂ.ಕೃಷ್ಣಪ್ಪ ಬುಧವಾರ ಕ್ಷೇತ್ರದ ಹಲವೆಡೆ ಮತಯಾಚನೆ ನಡೆಸಿದರು.
ದಕ್ಷಿಣ ಕ್ಷೇತ್ರದ ಹುಲಿಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಪ್ಪ ಗ್ರಾಮದಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುತ್ತಲಿನ ಜನರನ್ನು ಭೇಟಿ, ಪ್ರಚಾರದ ಮೂಲಕ ಮತಯಾಚನೆ ಮಾಡಿದರು.
ರಾಜ್ಯದ ಬಿಜೆಪಿ ಸರ್ಕಾರ ಮತ್ತು ಕೇಂದ್ರದಲ್ಲಿನ ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ಅವರು ಮತದಾರರಿಗೆ ವಿವರಿಸಿದರು. ಹಾಗೆಯೇ ಶಾಸಕರಾಗಿ ತಮ್ಮ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಎಂ. ಕೃಷ್ಣಪ್ಪ ಅವರೊಂದಿಗೆ ಎಡಿಇ ಅಧ್ಯಕ್ಷ ರಾಜಶೇಖರ್ ರೆಡ್ಡಿ, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಚಂದ್ರಕಲಾ ಮುನಿರಾಜು, ಹುಲಿಮಂಗಲ ಗ್ರಾಮ ಪಂಚಾ ಯತಿ ಸದಸ್ಯ ಎಂ.ಕೆ. ಮುರಳಿರೆಡ್ಡಿ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಹಾಗೆಯೇ ಗೊಟ್ಟಿಗೆರೆ ವಾರ್ಡಿನಲ್ಲಿ ಚುನಾವಣೆಯಲ್ಲಿ ಪಕ್ಷ ಸಂಘಟನೆ ಹಾಗೂ ಮತಯಾಚನೆಯ ಕುರಿತು ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರೊಡನೆ ಕೃಷ್ಣಪ್ಪ ಅವರು ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪಾಂಚಲ್, ಬಿಬಿಎಂಪಿ ಮಾಜಿ ಸದಸ್ಯೆ ಲಲಿತಾ ಟಿ.ನಾರಾಯಣ್, ಮುಖಂಡರಾದ ಟಿ.ನಾರಾಯಣ್, ಜಯರಾಮ್ ಪದಾಧಿಕಾರಿಗಳಾದ ಕೇಶವ್‌ರಾಜ್, ನವೀನ್, ಶ್ರೀಧರ್ ಮೂರ್ತಿ ಹಾಗೂ ಕಾರ್ಯಕರ್ತರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.