Advertisement

ಎಪ್ರಿಲ್‌ ಮೊದಲ ವಾರ ಬಿಜೆಪಿ ಪಟ್ಟಿ: ಬಿಡುಗಡೆ ಭಾಗ್ಯ ಕಾಣದ ಕಾಂಗ್ರೆಸ್‌ ಪಟ್ಟಿ

12:28 AM Mar 24, 2023 | Team Udayavani |

ಬೆಂಗಳೂರು: ಕಾಂಗ್ರೆಸ್‌ನಂತೆ ಬಿಜೆಪಿ ಯಲ್ಲೂ ಟಿಕೆಟ್‌ ಹಂಚಿಕೆ ಬಗ್ಗೆ ಸ್ಥಳೀಯವಾಗಿ ಗೊಂದಲ ಸೃಷ್ಟಿಯಾಗಿದ್ದು, ಎಪ್ರಿಲ್‌ ಮೊದಲ ವಾರ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.

Advertisement

ಅಭ್ಯರ್ಥಿ ಆಯ್ಕೆ ವಿಚಾರ ಸಂಬಂಧ ಬಿಜೆಪಿಯಲ್ಲಿ ಇದುವರೆಗೆ 1 ಸಭೆ ಮಾತ್ರ ನಡೆದಿದೆ. ರಾಜ್ಯ ನಾಯಕರ ಕೋರ್‌ ಕಮಿಟಿ ಸಭೆಯೂ ನಡೆದಿಲ್ಲ. ದಿಲ್ಲಿ ನಾಯಕರೇ ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ. ಕೋರ್‌ ಕಮಿಟಿ ಸದಸ್ಯರ ಪೈಕಿಯೇ ಕೆಲವರಿಗೆ ಟಿಕೆಟ್‌ ಖಾತ್ರಿ ಇಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ಆಯ್ಕೆ ಕಸರತ್ತು ಈಗ ತೀವ್ರ ಕುತೂಹಲ ಮೂಡಿಸಿದೆ.

ಒಂದು ಮೂಲದ ಪ್ರಕಾರ, ಅಧಿಸೂಚನೆ ಪ್ರಕಟವಾದ ಬಳಿಕ ಸೋಲಿನ ಭಯ ಇಲ್ಲದ ಹಾಲಿ ಶಾಸಕರ ಮೊದಲ ಪಟ್ಟಿ ಎಪ್ರಿಲ್‌ ಮೊದಲ ವಾರ ಪ್ರಕಟವಾಗಬಹುದು ಎಂದು ಹೇಳಲಾಗುತ್ತಿದೆ. ಹಾಲಿ ಶಾಸಕರ ಪೈಕಿ ಕೆಲವರಿಗೆ ಟಿಕೆಟ್‌ ಕೈ ತಪ್ಪುವುದು ಬಹುತೇಕ ಖಚಿತ ಎಂದು ತಿಳಿದು ಬಂದಿದೆ.

ಈ ನಡುವೆ ಸ್ಥಳೀಯ ಬೆಳವಣಿಗೆಗಳ ಮೇಲೆ ರಾಜ್ಯ ಚುನಾವಣ ಉಸ್ತುವಾರಿಗಳು ತೀವ್ರ ನಿಗಾ ಇಟ್ಟಿದ್ದಾರೆ. 25ಕ್ಕೂ ಹೆಚ್ಚು ಕಡೆ 2 ಅಥವಾ ಅದಕ್ಕಿಂತ ಹೆಚ್ಚು ಪ್ರಬಲ ಆಕಾಂಕ್ಷಿಗಳು ಇದ್ದಾರೆ. ಈ ಪೈಕಿ ಕೆಲವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಪ್ತರಾದರೆ, ಇನ್ನು ಕೆಲವರು ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಬೆಂಬಲಿಗರಾಗಿದ್ದಾರೆ. ಇಂಥ ಕ್ಷೇತ್ರಗಳಲ್ಲಿ ಉಭಯ ನಾಯಕರನ್ನು ಸರಿದೂಗಿಸಿಕೊಂಡೇ ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸಲಾಗುತ್ತದೆ ಎನ್ನಲಾಗಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಸಮೀಪ ಬಂದು ನಿಲ್ಲುವುದಕ್ಕೆ ಇದೇ ಗೊಂದಲ ಕಾರಣವಾಗಿತ್ತು. ಕುತೂಹಲಕಾರಿ ಸಂಗತಿ ಎಂದರೆ ಇವರಿಬ್ಬರೂ ಅಂತಿಮಗೊಳಿಸಿದ ಪಟ್ಟಿಯಲ್ಲಿ ಸರಾಸರಿ 10 ಜನರು ಸೋತಿದ್ದರು. ಹೀಗಾಗಿ ಈ ಬಾರಿ ವರಿಷ್ಠರು ಇಬ್ಬರ ಶಿಫಾರಸು ಅಂತಿಮಗೊಳಿಸುವಾಗ ಎಚ್ಚರಿಕೆಯ ನಡೆ ಅನುಸರಿಸಲಿದ್ದಾರೆ ಎಂದು ಇನ್ನೊಂದು ಮೂಲ ತಿಳಿಸಿದೆ.

ನಡುರಾತ್ರಿ ಪಟ್ಟಿ
ಕಳೆದ ಬಾರಿ ಬಿಜೆಪಿ 4 ಹಂತಗಳಲ್ಲಿ ಪಟ್ಟಿ ಬಿಡುಗಡೆ ಮಾಡಿತ್ತು. ಈ ಬಾರಿಯೂ ಅದೇ ಸೂತ್ರ ಪಾಲನೆಯಾಗಲಿದೆ. ಕೊನೇ ಕ್ಷಣದವರೆಗೂ ಆಕಾಂಕ್ಷಿಗಳಲ್ಲಿ ಎದೆಬಡಿತ ಹೆಚ್ಚಲಿದೆ. ಬಹುತೇಕ ಎಲ್ಲ ಪಟ್ಟಿಗೂ ತಡರಾತ್ರಿ ಬಿಡುಗಡೆ ಭಾಗ್ಯ ಲಭಿಸಲಿದೆ.

Advertisement

ಬಿಡುಗಡೆ ಭಾಗ್ಯ ಕಾಣದ ಕಾಂಗ್ರೆಸ್‌ ಪಟ್ಟಿ
ಬಹುನಿರೀಕ್ಷಿತ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಗೆ ತಡೆ ಬಿದ್ದಿದ್ದು, ಸಿದ್ದರಾಮಯ್ಯ ಕ್ಷೇತ್ರ ಆಯ್ಕೆ ಮಾಡಿ ಕೊಳ್ಳದ ಹೊರತು ಪಟ್ಟಿಗೆ ಬಿಡುಗಡೆ ಭಾಗ್ಯ ಇಲ್ಲ ಎಂಬಂತಾಗಿದೆ. ಸಿದ್ದರಾಮಯ್ಯ ಇನ್ನೂ ಅಂತಿಮ ತೀರ್ಮಾನ ಕೈಗೊಳ್ಳದಿರುವುದು ಕಗ್ಗಂಟಾಗಿ ಪರಿಣಮಿಸಿದ್ದು, ಪಕ್ಷದ ವಲಯದಲ್ಲೂ ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ. ವರುಣಾ, ಕೋಲಾರ, ಬಾದಾಮಿ, ಕಡೂರು ಹೀಗೆ ಸಿದ್ದರಾಮಯ್ಯ ಎಲ್ಲಿ ನಿಲ್ಲುತ್ತಾರೆ ಎಂಬ ಗೊಂದಲ ಮುಂದುವರಿದಿದ್ದು, ಯುಗಾದಿಯಂದು ಬಿಡುಗಡೆಯಾಗಬೇಕಾಗಿದ್ದ ಪಟ್ಟಿಗೆ “ಗ್ರಹಣ’ ಹಿಡಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next