ಚಿಕ್ಕಬಳ್ಳಾಪುರ: ಬಿಜೆಪಿಗೆ ನೆಲೆ ಇಲ್ಲದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸತತ 3ನೇ ಬಾರಿ ಹ್ಯಾಟ್ರಿಕ್ ಗೆಲುವು ದಾಖಲಿಸುವ ಮೂಲಕ ಡಾ.ಕೆ.ಸುಧಾಕರ್, ಹೊಸ ರಾಜಕೀಯ ಇತಿಹಾಸ ಬರೆದಿದ್ದಾರೆ. ಜಿಲ್ಲೆಯ ಜನರನ್ನು ತುದಿಗಾಲಲ್ಲಿ ನಿಲ್ಲಿಸಿದ್ದ ಉಪ ಚುನಾವಣೆ ಕದನ ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು. ಸೋಮವಾರ ಮತ ಎಣಿಕೆ ನಡೆದು ಫಲಿತಾಂಶ ಹೊರ ಬೀಳುವ ಮೂಲಕ ತೆರೆ ಕಂಡಿದೆ.
2013, 2018ರಲ್ಲಿ ಸತತವಾಗಿ ಕಾಂಗ್ರೆಸ್‌ನಿಂದ ಶಾಸಕರಾಗಿದ್ದ ಡಾ.ಕೆ.ಸುಧಾಕರ್, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಗೆ ಪಕ್ಷಾಂತರಗೊಂಡು ಉಪ ಚುನಾವಣೆ ಎದುರಿ ಸಿದ್ದರು. ಜಿದ್ದಾಜಿದ್ದಿನ ಚುನಾ ವಣಾ ಅಖಾಡ ಏರ್ಪಟ್ಟಿತ್ತು. ಜಿಲ್ಲೆಯ ರಾಜಕೀಯ ಇತಿಹಾಸ ದಲ್ಲಿಯೇ ಮೊದಲ ಬಾರಿಗೆ ಕಾಂಗ್ರೆಸ್ ಭದ್ರ ಕೋಟೆಯಲ್ಲಿ ಕಮಲದ ಖಾತೆ ತೆರೆದ ಕೀರ್ತಿಗೆ ಇದೀಗ ಸುಧಾಕರ್ ಪಾತ್ರರಾಗಿ ಗಮನ ಸೆಳೆದಿದ್ದಾರೆ.
ಉಪ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಸುಧಾಕರ್‌ಗೆ ಈ ಬಾರಿ ಗೆಲುವು ಸುಲಭವಲ್ಲ ಎಂಬ ಮಾತುಗಳು ತಾಲೂಕಿನಲ್ಲಿ ಕೇಳಿ ಬಂದಿದ್ದವು. ಆದರೆ, ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳ ಲೆಕ್ಕಾಚಾರವನ್ನು ಉಪ ಚುನಾವಣೆ ಫಲಿತಾಂಶ ತಲೆಕೆಳಗೆ ಮಾಡಿ ಕಳೆದ ವಿಧಾನಸಭೆ ಚುನಾವಣೆಗಿಂತ ಮತ್ತೆ ಸುಧಾಕರ್ ಹೆಚ್ಚಿನ ಮತಗಳ ಅಂತರದಿಂದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ನಂದಿ ಅಂಜನಪ್ಪ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಅನರ್ಹ ಶಾಸಕ ಎಂಬ ಅಪವಾದದಿಂದ ಕೆ.ಸುಧಾಕರ್ ಪಾರಾಗಿ ಮತ್ತೂಮ್ಮೆ ಶಾಸಕರಾಗಿ ಆಯ್ಕೆಗೊಳ್ಳುವ ಮೂಲಕ ಕ್ಷೇತ್ರದ ತಮ್ಮ ಪ್ರಬಲ ರಾಜಕೀಯ ಎದುರಾಳಿಗಳಾದ ಕಾಂಗ್ರೆಸ್, ಜೆಡಿಎಸ್‌ಗೆ ಸೆಡ್ಡು ಹೊಡೆದಿದ್ದಾರೆ. ಆ ಮೂಲಕ ಸುಧಾಕರ್, 3ನೇ ಬಾರಿಯೂ ತಮ್ಮ ವೈಯಕ್ತಿಕ ವರ್ಚಸ್ಸಿನ ಮೂಲಕ ಗೆಲುವು ಸಾಧಿಸಿರುವುದು ಈ ಉಪ ಚುನಾವಣೆ ಫಲಿತಾಂಶದಿಂದ ಸ್ಪಷ್ಟವಾಗಿ ಗೋಚರಿಸಿದೆ.
ಜೊತೆಗೆ ಬಿಜೆಪಿ ಸರ್ಕಾರದಲ್ಲಿ ಮೆಡಿಕಲ್ ಕಾಲೇಜು ಶಂಕುಸ್ಥಾಪನೆ, ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಹೋಬಳಿಯನ್ನು ಹೊಸ ತಾಲೂಕಾಗಿ ಘೋಷಿಸಿದ್ದು ಸುಧಾಕರ್‌ಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ತಂದುಕೊಟ್ಟಿರುವುದು ಎದ್ದು ಕಾಣುತ್ತಿದೆ. ಅಲ್ಲದೇ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿ ಅನುದಾನ ದೊರಕಿಸಿಕೊಡುವ ಭರವಸೆಯನ್ನೂ ನೀಡಿದ್ದರು.
ಗೆದ್ದವರು
ಡಾ.ಕೆ.ಸುಧಾಕರ್ (ಬಿಜೆಪಿ)
ಪಡೆದ ಮತ: 84,389
ಗೆಲುವಿನ ಅಂತರ: 34,801
ಸೋತವರು
ನಂದಿ ಅಂಜನಪ್ಪ (ಕಾಂಗ್ರೆಸ್)
ಪಡೆದ ಮತ: 49,588
ಎನ್.ರಾಧಾಕೃಷ್ಣ (ಜೆಡಿಎಸ್)
ಪಡೆದ ಮತ: 35,869
ಗೆದ್ದದ್ದು ಹೇಗೆ?
-ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿರೋಧದ ನಡುವೆ ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜಿಗೆ ಶಂಕು
-ಮಂಚೇನಹಳ್ಳಿ ಹೋಬಳಿಯನ್ನು ಹೊಸ ತಾಲೂಕಾಗಿ ಸಿಎಂ ಘೋಷಣೆ
-ಚುನಾವಣೆಯನ್ನು ಬಿಜೆಪಿ ಪ್ರತಿಷ್ಠೆಯಾಗಿ ಪರಿಗಣಿಸಿದ್ದು
ಕಾಂಗ್ರೆಸ್ ಪಕ್ಷದಲ್ಲಿ ನಾನೇ ಎಂಬ ಅಹಂ, ಅಹಂಕಾರ ಇನ್ನಾದರೂ ಹೋಗಲಿ.ಸ್ಥಿರ ಹಾಗೂ ಅಭಿವೃದ್ಧಿ ಪರ ಸರ್ಕಾರ ಇರಲಿ ಎಂದು ರಾಜ್ಯದ ಉಪ ಚುನಾವಣೆದಲ್ಲಿ ಬಿಜೆಪಿಗೆ ಜನತೆ ಜನಾದೇಶ ನೀಡಿದ್ದಾರೆ. ತಮ್ಮನ್ನು ಅನರ್ಹಗೊಳಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಗ್ಗೆ ಹೆಚ್ಚು ಮಾತನಾಡಲ್ಲ. ಅವರ ಬಗ್ಗೆ ಸದನದಲ್ಲಿಯೇ ಉತ್ತರಿಸುವೆ. ಅವರೊಬ್ಬ ನಾಯಿ, ನರಿ.
-ಡಾ.ಕೆ.ಸುಧಾಕರ್, ಬಿಜೆಪಿ ವಿಜೇತ ಅಭ್ಯರ್ಥಿ