ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಪ್ರವಾಹದಲ್ಲಿ ಮುಳುಗಿ ಸಂಕಷ್ಟಕ್ಕೆ ಸಿಲುಕಿರುವ ವೇಳೆ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ಪರಸ್ಪರ ಕೆಸರೆರಚಿಕೊಳ್ಳುತ್ತಿವೆ. 2017ರಲ್ಲಿ ದೆಹಲಿಯನ್ನು ಲಂಡನ್‌ನಂತೆ ಮಾಡುತ್ತೇವೆ, 2019 ರಲ್ಲಿ ಪ್ಯಾರಿಸ್‌ನಂತೆ ಮಾಡುತ್ತೇವೆ ಎಂದಿದ್ದ ಆಮ್ ಆದ್ಮಿ ಪಕ್ಷ 2023ರಲ್ಲಿ ಸರೋವರಗಳ ನಗರವನ್ನಾಗಿ ಮಾಡಿದೆ ಎಂದು ಬಿಜೆಪಿ ಪ್ರವಾಹ ಪರಿಸ್ಥಿತಿಯ ಕುರಿತು ಆಮ್ ಆದ್ಮಿ ಪಕ್ಷದ ವಿರುದ್ಧ ಶನಿವಾರ ಆಕ್ರೋಶ ಹೊರ ಹಾಕಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಮತ್ತು ಪಕ್ಷದ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ, ಕೇಜ್ರಿವಾಲ್ ಸರಕಾರ ಕಳೆದ ಎಂಟು ವರ್ಷಗಳಲ್ಲಿ ಯಮುನಾ ನದಿಯ ಹೂಳು ತೆಗೆಯದ ಕಾರಣದಿಂದ ಪ್ರವಾಹ ಉಂಟಾಗಿದೆ ಎಂದು ಆರೋಪಿಸಿದರು.
“ಆಪ್ ಮತ್ತು ಕೇಜ್ರಿವಾಲ್ ಅವರು ಭ್ರಷ್ಟಾಚಾರ ಮತ್ತು ನಿಷ್ಕ್ರಿಯತೆಯಲ್ಲಿ ದೊಡ್ಡವರು. ಕೋವಿಡ್ -19 ಸಮಯದಲ್ಲಿ ಮತ್ತು ಮಾಲಿನ್ಯದ ಸಮಯದಲ್ಲಿ ಅವರು ಕೇಂದ್ರ ಮತ್ತು ಇತರ ರಾಜ್ಯಗಳನ್ನು ದೂಷಿಸಿದಂತೆಯೇ, ಈಗ ದೆಹಲಿಯ ಪ್ರವಾಹಕ್ಕೆ ಹರಿಯಾಣವನ್ನು ಆರೋಪಿಸುತ್ತಿದ್ದಾರೆ”ಎಂದು ಭಾಟಿಯಾ ಕಿಡಿ ಕಾರಿದರು.
ಕೇಂದ್ರ ಸರಕಾರ, ಸೇನೆ, ಎನ್‌ಡಿಆರ್‌ಎಫ್, ದೆಹಲಿ ಲೆಫ್ಟಿನೆಂಟ್ ಗವರ್ನರ್ ಮತ್ತು ಇತರ ಏಜೆನ್ಸಿಗಳು ಜನರಿಗೆ ಪರಿಹಾರ ನೀಡಲು ಶ್ರಮಿಸುತ್ತಿರುವಾಗ, ಎಎಪಿ ಮತ್ತು ಕೇಜ್ರಿವಾಲ್ ಸರ್ಕಾರದ ಮಂತ್ರಿಗಳು ನಗರವನ್ನು ಪ್ರವಾಹ ಪೀಡಿತ ಮಾಡಲು “ಪಿತೂರಿ” ನಡೆದಿದೆ ಎಂದು ಆರೋಪಿಸುತ್ತಿರುವುದು ಕೀಳು ಮನಸ್ಥಿತಿ ಎಂದರು.
”ಸುಳ್ಳು ಭರವಸೆಗಳನ್ನು ಏಣಿಯಾಗಿ ಬಳಸಿಕೊಂಡು ಕೇಜ್ರಿವಾಲ್ ತನ್ನನ್ನು ಶ್ರೀಮಂತನನ್ನಾಗಿ ಮಾಡಿಕೊಂಡಿದ್ದಾರೆ ಮತ್ತು ದೆಹಲಿಯ ಜನರು ಪ್ರವಾಹಕ್ಕೆ ಸಿಲುಕಿದ್ದಾರೆ. ದೆಹಲಿ ಮುಳುಗಿದೆ ಆದರೆ ಕೇಜ್ರಿವಾಲ್ ತನ್ನ ‘ಶೀಷ್ಮಹಲ್’ ನಲ್ಲಿ ತನ್ನ ದುರಾಡಳಿತಕ್ಕಾಗಿ ಇತರರನ್ನು ದೂಷಿಸುವುದರಲ್ಲಿ ನಿರತರಾಗಿದ್ದಾರೆ.ಸಾರ್ವಜನಿಕರು ಅದನ್ನು ಖಂಡಿತವಾಗಿ ಲೆಕ್ಕ ಹಾಕುತ್ತಾರೆ” ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಬಿಜೆಪಿ ನೇತೃತ್ವದ ಕೇಂದ್ರ ಮತ್ತು ಹರಿಯಾಣ ಸರಕಾರವು ಉದ್ದೇಶಪೂರ್ವಕವಾಗಿ ರಾಷ್ಟ್ರ ರಾಜಧಾನಿ ಕಡೆಗೆ ನೀರು ಬಿಡುವುದರಿಂದ ನಗರದಲ್ಲಿ ಪ್ರವಾಹ ಉಂಟಾಗಿದೆ ಎಂದು ದೆಹಲಿ ಸಂಪುಟ ಸಚಿವ ಸೌರಭ್ ಭಾರದ್ವಾಜ್ ಶನಿವಾರ ಆರೋಪಿಸಿದ್ದರು.