Advertisement

ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವ ಗುರಿ

09:04 PM Feb 24, 2020 | Lakshmi GovindaRaj |

ಹೊಳೆನರಸೀಪುರ: ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನಮ್ಮ ಗುರಿಯಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ನವಿಲೆ ಅಣ್ಣಪ್ಪ ಹೇಳಿದರು. ಪಟ್ಟಣದ ಬಸವ ಭವನದಲ್ಲಿ ತಾಲೂಕು ಬಿಜೆಪಿ ಮಂಡಲದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಹೊಳೆ ನರಸೀಪುರ ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಪಕ್ಷದ ಮುಖಂಡರು ತೀರ್ಮಾನಿಸಿದ್ದಾರೆ. 2023 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಗೆಲುವಿಗೆ ಶ್ರಮಿಸಲಾಗುವುದು ಎಂದರು.

Advertisement

ಲೋಕಸಭಾ ಚುನಾವಣೆಯಲ್ಲಿ 48 ಸಾವಿರ ಮತ: ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರ ಬಿಜೆಪಿ ಪಕ್ಷಕ್ಕೆ 48 ಸಾವಿರ ಮತಗಳನ್ನು ನೀಡಿದೆ ಎಂಬುದನ್ನು ಯಾರೊಬ್ಬರು ಮರೆಯುವಂತಿಲ್ಲ. ಇಷ್ಟೊಂದು ಮತಗಳು ಬಂದಿರುವುದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದರೆ ಜಿಲ್ಲೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷ ಹೊಂದಾಣಿಕೆ ರಾಜಕೀಯ ಮಾಡುತ್ತಿರುವುದು ಹಾಗೂ ಕುಟುಂಬ ರಾಜಕಾರಣದ ವಿರುದ್ಧ ಮತಗಳು ಚಲಾವಣೆಯಾಗಿವೆ ಎಂದರು.

ಈಗ ಬಂದಿರುವ ಮತಗಳೆಲ್ಲಾ ಬಿಜೆಪಿಯದಲ್ಲ, ಆದ್ದರಿಂದ ನಮಗೆ ಬಂದಿರುವ ಎಲ್ಲಾ ಮತಗಳು ಬಿಜೆಪಿ ಪಕ್ಷದ ಮತಗಳಾಗಿ ಪರಿವರ್ತನೆ ಯಾಗಬೇಕಾದರೆ ಪಕ್ಷದ ಮುಖಂಡರು ಗ್ರಾಮೀಣ ಮಟ್ಟದಲ್ಲಿ ಬಿಜೆಪಿ ಪಕ್ಷಕ್ಕೆ ಶಕ್ತಿ ತುಂಬುವಂತ ಕೆಲಸ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ಬೆಳೆಯುತ್ತಿದೆ: ಹೊಳೆ ನರಸೀಪುರ ತಾಲೂಕಿನಲ್ಲಿ ಬಿಜೆಪಿ ಪಕ್ಷಕ್ಕೆ ಅಧ್ಯಕ್ಷರಾಗುವಂತೆ ಈ ಹಿಂದೆ ಬಲವಂತದಿಂದ ಪಟ್ಟ ಕಟ್ಟಬೇಕಿತ್ತು. ಆದರೆ ಇದೀಗ ಆ ಪರಿಸ್ಥಿತಿ ಬದಲಾಗಿದೆ ಎಂಬುದಕ್ಕೆ ಇಂದಿನ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿನ ರಾಜಕೀಯ ಪ್ರತಿಷ್ಠೆಯ ಕ್ಷೇತ್ರವಾದ ಹೊಳೆನರಸೀಪುರ ಕ್ಷೇತ್ರದಲ್ಲಿ ಬಿಜೆಪಿ ಬೆಳೆಯುತ್ತಿದೆ ಎಂದರು.

ಬ್ಯಾನರ್‌ ನಾಶಕ್ಕೆ ಖಂಡನೆ: ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ನಿಯೋಜಿತ ಅಧ್ಯಕ್ಷ ಎಚ್‌.ಕೆ.ಸುರೇಶ್‌ ಮಾತನಾಡಿ, ಬಿಜೆಪಿ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ತಳವೂರಿದೆ ಎಂಬುದನ್ನು ಅರಿತು ತಮಗೆ ಮುಂದಿನ ದಿನಗಳಲ್ಲಿ ಭವಿಷ್ಯವಿಲ್ಲ ಎಂಬ ಹತಾಶ ಭಾವನೆಯಿಂದ ಈ ಕಾರ್ಯಕ್ರಮಕ್ಕೆ ಪಟ್ಟಣದಲ್ಲಿ ಹಾಕಿದ್ದ ಬ್ಯಾನರ್‌ಗಳನ್ನು ಕೆಲ ಪುಂಡರು ಹರಿದುಹಾಕಿದ್ದಾರೆ. ಇದು ಆ ಪಕ್ಷದ ಹತಾಶ ಭಾವನೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ಬಗ್ಗೆ ಜಿಲ್ಲಾ ಬಿಜೆಪಿ ಯಿಂದ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ಯಾವ ರೀತಿ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡುತ್ತಿರುವುದಾಗಿ ತಿಳಿಸಿದರು.

Advertisement

ತಳ ಮಟ್ಟದಿಂದ ಪಕ್ಷ ಸಂಘಟಿಸಿ: ನೂತನ ಮಂಡಲ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಮಳಲಿ ನಾರಾಯಣ್‌, ಬಿಜೆಪಿ ಪಕ್ಷವನ್ನು ತಳ ಮಟ್ಟದಿಂದ ಕಟ್ಟಬೇಕಾದ ಅವಶ್ಯಕತೆ ಇದೆ. ಇದಕ್ಕಾಗ ಪಕ್ಷದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಸಹಕರಿಸಬೇಕು ಎಂದರು. ಬಿಜೆಪಿ ಕಾರ್ಯಕ್ರಮದ ಬ್ಯಾನರ್‌ಗಳನ್ನು ದುಷ್ಕರ್ಮಿಗಳು ಹರಿದು ಹಾಕಿದ್ದಾರೆ. ಇದನ್ನು ಕಂಡು ನಾವು ಸುಮ್ಮನೆ ಕೂರಿವುದಿಲ್ಲ. ಮುಂದಿನ ದಿನಗಳಲ್ಲಿ ಕ್ಷೇತ್ರದ ಯಾವೊಬ್ಬ ಶ್ರೀಸಾಮಾನ್ಯನಿಗೂ ಅನ್ಯಾಯ ವಾಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಪಕ್ಷದ ಮುಖಂಡ ಕೆ.ಆರ್‌.ಸುನೀಲ್‌ಕುಮಾರ್‌ ಮಾತನಾಡಿ, ಕಳೆದ ಲೋಕಸಭಾ ಚುನಾವಣೆ ವೇಳೆ ಪಕ್ಷದ ಸಭೆಯಲ್ಲಿ ಮುಖಂಡರು ಪಕ್ಷದ ಕಾರ್ಯಕರ್ತರ ಬೆಂಬಲಕ್ಕೆ ಇರುವುದಾಗಿ ಘೋಷಣೆ ಮಾಡಿದ್ದರು. ಆದರೆ ಚುನಾವಣೆ ಕಳೆದ ನಂತರ ಯಾವೊಬ್ಬ ಮುಖಂಡರು ಹೊಳೆನರಸೀಪುರಕ್ಕೆ ಬರಲೇ ಇಲ್ಲ. ಅದಾದ ನಂತರ ಇಂದು ನೂತನ ಅಧ್ಯಕ್ಷರ ಅಧಿಕಾರ ಹಸ್ತಾಂತರಕ್ಕೆ ಆಗಮಿಸಿದ್ದೀರಿ. ಕೇವಲ ಕಾಟಾಚಾರಕ್ಕೆ ಸಭೆ ನಡೆಸುವುದು ಬೇಡ. ನಿಮ್ಮ ಭರವಸೆ ನೆಚ್ಚಿಕೊಂಡು ಇಲ್ಲಿ ಪಕ್ಷದ ಮುಖಂಡರು ಕೆಲಸ ನಿರ್ವಹಿಸಲು ಮುಂದಾದರೆ ಸುಖಾ ಸುಮ್ಮನೆ ಇಲ್ಲದ ಸಂಕಷ್ಟ ಅನುಭವಿಸ ಬೇಕಾಗುತ್ತದೆ ಎಂದು ಆಪಾದಿಸಿದರು.

ಸಭೆಯನ್ನು ಉದ್ದೇಶಿಸಿ ರಾಜ್ಯ ಕಾರ್ಯದರ್ಶಿ ಮೈಲಾ ರವಿಶಂಕರ್‌ ಮಾತನಾಡಿ, ಪಕ್ಷದ ಬಲವರ್ಧನೆಗೆ ತಾವು ಸೇರಿದಂತೆ ಪಕ್ಷದ ಹೈಕಮಾಂಡ್‌ ನಿಮ್ಮ ಬೆಂಗಾವಲಾಗಿ ಇರಲು ತಿರ್ಮಾನಿಸಿದೆ, ಆದ್ದರಿಂದ ಪಕ್ಷದ ಮುಖಂಡರು, ಕಾರ್ಯಕರ್ತರು ಪಕ್ಷದ ಬೆಳವಣಿಗೆಗೆ ಸಹಕರಿಸುವಂತೆ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಪಕ್ಷದ ನಿಕಟಪೂರ್ವ ಮಂಡಲ ಅಧ್ಯಕ್ಷ ರವಿಕಮ್ಮರಿಗಿ ಅವರು ನೂತನ ಮಂಡಲದ ಅಧ್ಯಕ್ಷತೆ ಪಕ್ಷದ ಬಾವುಟ ನೀಡಿ ಅಧಿಕಾರ ಹಸ್ತಾಂತರ ಮಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧಡೆಗಳಿಂದ ತಾಲೂಕು ಬಿಜೆಪಿ ಅಧ್ಯಕ್ಷರು ಸೇರಿದಂತೆ ಹೊಳೆನರಸೀಪುರ ಬಿಜೆಪಿ ಮುಖಂಡರು ಹಾಜರಿದ್ದರು. ಪಕ್ಷದ ತಾಲೂಕು ಘಟಕದ ಕಾರ್ಯದರ್ಶಿ ನಾಗರಾಜ್‌ ಪಟೇಲ್‌ ನಿರೂಪಿಸಿದರು. ಮೈಲಾರಯ್ಯ ಸ್ವಾಗತಿಸಿದರು.

ಈಗ ಅಧಿಕಾರದಲ್ಲಿರುವ ಶಾಸಕರಿಗೆ ತಮ್ಮನ್ನು ಬಿಟ್ಟರೆ ಬೇರಾರೂ ಇಲ್ಲ ಎಂಬ ಮನೋಭಾವ ಇದೆ. ಪಕ್ಕದ ಕೃಷ್ಣರಾಜಪೇಟೆ ತಮ್ಮ ಪಕ್ಷದ ಮನೆ ಎಂದು ಹೇಳುತ್ತಿದ್ದರು. ಆದರೆ ಕಳೆದ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದ ನಂತರ ಅವರಲ್ಲಿದ್ದ ಭ್ರಮೆ ಬಿಟ್ಟು ಹೋಗಿದೆ.
-ನವಿಲೆ ಅಣ್ಣಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next