Advertisement

ಬಿಜೆಪಿ ಆಡಳಿತದ ಮೊದಲ ಆಯವ್ಯಯ: ಹಲವು ನಿರೀಕ್ಷೆ

09:55 PM Jan 27, 2021 | Team Udayavani |

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತಕ್ಕೆ ಒಂದು ವರ್ಷ ಕಳೆದಿದ್ದರೂ ಈ ಪರಿಷತ್‌ ಅವಧಿಗೆ ಬಿಜೆಪಿ ಆಡಳಿತದಡಿ ಗುರುವಾರ ಮೊದಲ ಬಜೆಟ್‌ ಮಂಡನೆಯಾಗುತ್ತಿದ್ದು, ನಗರದ ಅಭಿವೃದ್ಧಿಗೆ ಪೂರಕವಾಗಿ ಜನರಲ್ಲಿಯೂ ಬಹು ನಿರೀಕ್ಷೆಗಳಿವೆ.

Advertisement

ಹಾಲಿ ಮೇಯರ್‌ ದಿವಾಕರ್‌ ಪಾಂಡೇ ಶ್ವರ ಅವರು ಕಳೆದ ವರ್ಷ (2020)ಫೆ.28ಕ್ಕೆ ಅಧಿಕಾರ ಸ್ವೀಕರಿಸಿದ್ದರೂ ಆ ಬಳಿಕ ಬಜೆಟ್‌ ಮಂಡನೆ ಮಾಡಿರಲಿಲ್ಲ. ಏಕೆಂದರೆ, ಅದಕ್ಕೂ ಮೊದಲೇ (ಜನವರಿ) ಪಾಲಿಕೆ ಆಡಳಿತಾಧಿಕಾರಿಯಾಗಿದ್ದ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಅವರು ಬಜೆಟ್‌ ಅನ್ನು ಅಂಗೀಕಾರಗೊಳಿಸಿ, ಸರಕಾರದ ಒಪ್ಪಿಗೆಗೆ ಕಳುಹಿಸಿದ್ದರು. ಅದೇ ಬಜೆಟ್‌ ಅನ್ನು ದಿವಾಕರ್‌ ಪಾಂಡೇಶ್ವರ ಅವರ ಮೇಯರ್‌ ಆಡಳಿತಾವಧಿಯಲ್ಲಿ ಅನುಷ್ಠಾನಿಸಲಾಗಿತ್ತು.

ಹೀಗಾಗಿ ಪಾಲಿಕೆಯಲ್ಲಿ ಗುರುವಾರ ಮಂಡನೆ ಯಾಗುತ್ತಿರುವ ಬಜೆಟ್‌ ಬಿಜೆಪಿ ಆಡಳಿತಾವಧಿಯ ಮೊದಲ ಬಜೆಟ್‌ ಕೂಡ ಆಗಿದೆ.

ತೆರಿಗೆ ಸ್ಥಾಯೀ ಸಮಿತಿ ಅಧ್ಯಕ್ಷ ಕಿರಣ್‌ ಕುಮಾರ್‌ ಅವರು ಬೆಳಗ್ಗೆ 11 ಗಂಟೆಗೆ ಬಜೆಟ್‌ ಮಂಡಿಸಲಿದ್ದಾರೆ. ಈ ಸಂಬಂಧ ಬುಧವಾರ ಪಾಲಿಕೆಯಲ್ಲಿ ಸ್ಥಾಯೀ ಸಮಿತಿಯ ಮಹತ್ವದ ಸಭೆ ನಡೆಯಿತು. ಬಜೆಟ್‌ನಲ್ಲಿರುವ ಅಂಶ ಹಾಗೂ ಸಭೆಯ ಸ್ಥೂಲ ಅಂಶಗಳ ಬಗ್ಗೆ ಕಾರ್ಪೋರೆಟರ್‌ಗಳು ಚರ್ಚಿಸಿದ್ದಾರೆ.

ಬಿಜೆಪಿ ಆಡಳಿತದ ಮೊದಲ ಬಜೆಟ್‌ ಇದಾಗಿರುವುದರಿಂದ ಈ ಬಾರಿಯ ಬಜೆಟ್‌ ಮೇಲೆ ಮಂಗಳೂರಿನಲ್ಲಿ ಬಹುನಿರೀಕ್ಷೆ ಇರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಪಾಲಿಕೆ ಡಿಜಟಲೀಕರಣ, ಪೇಪರ್‌ಲೆಸ್‌ ವ್ಯವಸ್ಥೆಗೆ ಈ ಬಾರಿಗೆ ಬಜೆಟ್‌ನಲ್ಲಿ ಹೆಚ್ಚು ಒತ್ತು ನೀಡುವ ಬಗ್ಗೆ ಸಭೆಯಲ್ಲಿ ಆಗ್ರಹ ಕೇಳಿಬಂದಿದೆ. ಹೀಗಾಗಿ, ಈ ಬಾರಿಯ ಬಜೆಟ್‌ನಲ್ಲಿ ಪಾಲಿಕೆಯ ಆಡಳಿತ ಸುಧಾರಣೆಗೆ ಒತ್ತು ನೀಡುವ ಸಾಧ್ಯತೆಯಿದೆ. ಪಾಲಿಕೆಯಲ್ಲಿ ಸದ್ಯ ಸಮಸ್ಯೆಯಲ್ಲಿರುವ ಮಾರುಕಟ್ಟೆಗಳ ಸುಧಾರಣೆ, ಹೊಸ ಮಾರುಕಟ್ಟೆ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಆದ್ಯತೆ ನೀಡುವ ಸಾಧ್ಯತೆಯಿದೆ. ಕಳೆದ ಬಾರಿ ಅಂದರೆ, 2019ರಲ್ಲಿ ಒಟ್ಟು 270.67 ಕೋಟಿ ರೂ. ಗಾತ್ರದ ಮಿಗತೆ ಬಜೆಟ್‌ ಮಂಡಿಸಲಾಗಿತ್ತು.

Advertisement

ಮಂಗಳೂರು ಮಹಾನಗರ ಪಾಲಿಕೆಯ ಬಜೆಟ್‌ ಜ. 28ರಂದು ಮಂಡನೆಯಾಗಲಿದೆ. ಎಲ್ಲ ವಾರ್ಡ್‌ಗಳ ಸಮಗ್ರ ಅಭಿವೃದ್ಧಿ ಸಂಕಲ್ಪದೊಂದಿಗೆ ಬಜೆಟ್‌ ಮಂಡಿಸಲಾಗುವುದು. ಆಡಳಿತ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಲು ಉದ್ದೇಶಿಸಲಾಗಿದೆ ಎಂದು ಮೇಯರ್‌ ದಿವಾಕರ್‌ ಪಾಂಡೇಶ್ವರ ತಿಳಿಸಿದ್ದಾರೆ.

“ನನ್ನ ನಗರ ನನ್ನ ಬಜೆಟ್‌’: ಕುತೂಹಲ   :

ಮಹಾನಗರ ಪಾಲಿಕೆ ಬಜೆಟ್‌ಯಾವ ರೀತಿ ಇರಬೇಕು, ಯಾವೆಲ್ಲಾ ವಿಷಯಗಳನ್ನು ಸೇರ್ಪಡೆ ಮಾಡಬೇಕು ಎಂಬ ಕುರಿತು ಸಾರ್ವಜನಿಕ ಸಮಾಲೋಚನ ಸಭೆ ಸುರತ್ಕಲ್‌ ಹಾಗೂ ಮಂಗಳೂರು ಪಾಲಿಕೆಯಲ್ಲಿ ಇತ್ತೀಚೆಗೆ ನಡೆದಿತ್ತು. ಜತೆಗೆ, ಸಾಮಾಜಿಕ ಜಾಲತಾಣದಲ್ಲಿ ಜನಾಗ್ರಹ ಸಂಸ್ಥೆ ಆಯೋಜಿಸಿದ್ದ “ನನ್ನ ನಗರ ನನ್ನ ಬಜೆಟ್‌’ ಎಂಬ ಅಭಿಯಾನ ನಡೆಸಿ ಸುಮಾರು 1,060 (856 ಆನ್‌ಲೈನ್‌ ಮತ್ತು 204 ಲಿಖೀತ) ಸಲಹೆಗಳನ್ನು ಸಂಗ್ರಹಿಸಲಾಗಿತ್ತು. ಇದನ್ನು ಪಾಲಿಕೆ ಮೇಯರ್‌ ದಿವಾಕರ್‌ ಪಾಂಡೇಶ್ವರ, ಆಯುಕ್ತ ಅಕ್ಷಯ್‌ ಶ್ರೀಧರ್‌ ಅವರಿಗೆ ನೀಡಲಾಗಿತ್ತು. ಈ ಅಂಶಗಳು ಈ ಬಾರಿಯ ಬಜೆಟ್‌ನಲ್ಲಿ ಉಲ್ಲೇಖವಾಗಲಿದೆಯೇ ಎಂಬ ಕುತೂಹಲ ಮೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next