Advertisement

BJP 2ನೇ ಪಟ್ಟಿ: 3 ಮಾಜಿ ಸಿಎಂಗಳಿಗೆ ಅವಕಾಶ

12:50 AM Mar 14, 2024 | Team Udayavani |

 ಹೊಸದಿಲ್ಲಿ: ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ. ಕರ್ನಾಟಕ ಸಹಿತ ಒಟ್ಟು 11 ರಾಜ್ಯಗಳನ್ನು ಒಳಗೊಂಡಿರುವ ಈ ಪಟ್ಟಿಯಲ್ಲಿ ಕೇಂದ್ರ ಸಚಿವರಾದ ನಿತಿನ್‌ ಗಡ್ಕರಿ, ಪಿಯೂಷ್‌ ಗೋಯಲ್‌, ಅನುರಾಗ್‌ ಠಾಕೂರ್‌, ಮಾಜಿ ಸಿಎಂಗಳಾದ ಮನೋಹರ್‌ ಲಾಲ್‌ ಖಟ್ಟರ್‌, ಬಸವರಾಜ ಬೊಮ್ಮಾಯಿ ಪ್ರಮುಖ ಹುರಿಯಾಳುಗಳು. ಒಟ್ಟು 72 ಅಭ್ಯರ್ಥಿಗಳನ್ನು ಈ ಬಾರಿ ಬಿಜೆಪಿ ಹೆಸರಿಸಿದೆ. ವಿಶೇಷ ಎಂದರೆ, ಈ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಮುಖಗಳಿಗೆ ಟಿಕೆಟ್‌ ನೀಡಲಾಗಿದೆ. ಮಾ.2ರಂದು ಬಿಜೆಪಿ 195 ಅಭ್ಯರ್ಥಿಗಳ ಮೊದಲನೇ ಪಟ್ಟಿ ರಿಲೀಸ್‌ ಮಾಡಿತ್ತು. ಹೀಗಾಗಿ ಬಿಜೆಪಿ ಒಟ್ಟು 267 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದಂತಾಗಿದೆ.

Advertisement

ದಿಲ್ಲಿಯ 2 ಕ್ಷೇತ್ರಗಳಿಗೆ ಹೊಸ ಮುಖಗಳನ್ನು ಪರಿಚಯಿಸಲಾಗಿದೆ. ಪೂರ್ವ ದಿಲ್ಲಿಗೆ ಹರ್ಷ ಮಲ್ಹೋ ತ್ರಾ, ವಾಯವ್ಯ ದಿಲ್ಲಿ ಕ್ಷೇತ್ರಕ್ಕೆ ಯೋಗೇಂದ್ರ ಚಾಂಡೋ ಲಿಯಾಗೆ ಟಿಕೆಟ್‌ ನೀಡಲಾಗಿದೆ. ಇದರೊಂದಿಗೆ ದಿಲ್ಲಿಯ 7 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಿಗೆ ಹೊಸಬರನ್ನು ಕಣಕ್ಕಿಳಿಸಿದಂತಾಗಿದೆ.

ಬಿಜೆಪಿ ಮುಖ್ಯ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯ ಅನಿಲ್‌ ಬಲೂನಿ ಅವರನ್ನು ಉತ್ತರಾಖಂಡದ ಗಡ ವಾಲ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಗುಜರಾತ್‌ನ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹೆಸರಿಸಲಾಗಿದೆ. ಹಸು¾ಖ ಭಾಯ್‌ ಸೋಮಭಾಯ್‌ ಪಟೇಲ್‌(ಅಹ್ಮದಾಬಾದ್‌ ಪೂರ್ವ) ಮರು ಆಯ್ಕೆ ಬಯಸಿದರೆ, ಭಾವನಗರ ದಿಂದ ನಿಮುಬೆನ್‌ ಸಹಿತ ಪ್ರಮುಖರು ಸ್ಪರ್ಧಿಸಲಿದ್ದಾರೆ.

3 ಮಾಜಿ ಸಿಎಂಗಳಿಗೆ ಮಣೆ: ಮಾಜಿ ಮುಖ್ಯ ಮಂತ್ರಿಗಳಾದ ಮನೋಹರ್‌ ಲಾಲ್‌ ಖಟ್ಟರ್‌ (ಕರ್ನಾಲ್‌, ಹರಿಯಾಣ), ಬಸವರಾಜ ಬೊಮ್ಮಾಯಿ (ಹಾವೇರಿ, ಕರ್ನಾಟಕ) ಮತ್ತು ತ್ರಿವೇಂದ್ರ ಸಿಂಗ್‌ ರಾವತ್‌(ಉತ್ತರಾಖಂಡ, ಹರಿದ್ವಾರ) ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ.

ಮಹಾರಾಷ್ಟ್ರದಲ್ಲಿ 20 ಕ್ಷೇತ್ರಕ್ಕೆ ಅಭ್ಯರ್ಥಿಗಳು: ಮಹಾರಾಷ್ಟ್ರದಲ್ಲಿ ಸೀಟು ಹಂಚಿಕೆ ಸಂಬಂಧ ಏಕನಾಥ ಶಿಂಧೆ ನೇತೃತ್ವದ ಶಿವಸೇನೆ ಹಾಗೂ ಅಜಿತ್‌ ಪವಾರ್‌ ಅವರ ಎನ್‌ಸಿಪಿ ಜತೆ ಮಾತುಕತೆ ನಡೆಯು­ತ್ತಿರುವಾಗಲೇ ಬಿಜೆಪಿ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿರುವುದು ವಿಶೇಷವಾಗಿದೆ. ದಿ| ಗೋಪಿನಾಥ ಮುಂಢೆ ಅವರ ಪುತ್ರಿ ಪಂಕಜಾ ಮುಂಢೆ ಬೀಡ್‌ ಮತ್ತು ರಾಜ್ಯಸಭಾ ಸದಸ್ಯ ಪಿಯೂಷ್‌ ಗೋಯಲ್‌ ಮುಂಬಯಿ ಉತ್ತರ ಕ್ಷೇತ್ರದಿಂದ ಕಣಕ್ಕೆ ಇಳಿಯುವ ಪ್ರಮುಖರು.

Advertisement

ಯಾವ ರಾಜ್ಯದಲ್ಲಿ ಎಷ್ಟು?
ದಾದರ್‌ ಮತ್ತು ನಗರ ಹವೇಲಿ 1, ದಿಲ್ಲಿ 2, ಗುಜರಾತ್‌ 7, ಹರಿಯಾಣ 6, ಹಿಮಾಚಲ ಪ್ರದೇಶ 2, ಕರ್ನಾಟಕ 20, ಮಧ್ಯಪ್ರದೇಶ 5, ಮಹಾರಾಷ್ಟ್ರ 20, ತೆಲಂಗಾಣ 6, ತ್ರಿಪುರಾ 1, ಉತ್ತರಾಖಂಡದ 2 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಲಾಗಿದೆ.

ಪ್ರಮುಖ ಅಭ್ಯರ್ಥಿಗಳು
ನಿತಿನ್‌ ಗಡ್ಕರಿ, ಪಿಯೂಷ್‌ ಗೋಯಲ್‌, ಅನುರಾಗ್‌ ಠಾಕೂರ್‌, ಮನೋಹರ್‌ ಲಾಲ್‌ ಖಟ್ಟರ್‌, ಮಹಾರಾಣಿ ಕೀರ್ತಿ ಸಿಂಗ್‌, ದೇವವರ್ಮ್, ಭಾರತಿ ಪ್ರವೀಣ್‌
ಪವಾರ್‌, ಪಂಕಜಾ ಮುಂಢೆ, ತ್ರಿವೇಂದ್ರ ಸಿಂಗ್‌ ರಾವ್‌ ಮತ್ತಿತರು.

ನಾಗಪುರದಿಂದ ಗಡ್ಕರಿ ಕಣಕ್ಕೆ
ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರ ಸ್ಪರ್ಧೆ ಬಗ್ಗೆ ನಾನಾ ಊಹಾಪೋಹಗಳಿದ್ದವು. ಇದಕ್ಕೆ ಪುಷ್ಟಿ ನೀಡುವಂತೆ ಮೊದಲನೇ ಪಟ್ಟಿಯಲ್ಲಿ ಅವರ ಹೆಸರು ಕಾಣಿಸಿಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಉದ್ಧವ್‌ ಠಾಕ್ರೆ, ತಮ್ಮ ಕೂಟಕ್ಕೆ ಗಡ್ಕರಿಯನ್ನು ಆಹ್ವಾನಿಸಿದ್ದರು. ಆದರೆ ಬಿಜೆಪಿಯ 2ನೇ ಪಟ್ಟಿಯಲ್ಲಿ ನಿತಿನ್‌ ಗಡ್ಕರಿ ಅವರು ನಾಗಪುರ ಕ್ಷೇತ್ರದಿಂದ ಸರ್ಧಿಸುವುದು ಖಚಿತವಾಗಿದೆ.

ಕೊನೇ ಕ್ಷಣದಲ್ಲಿ ಬಿಆರ್‌ಎಸ್‌, ಕಾಂಗ್ರೆಸ್‌ ನಾಯಕರಿಗೆ ಟಿಕೆಟ್‌
ತೆಲಂಗಾಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ 2ನೇ ಪಟ್ಟಿಯಲ್ಲಿ ಭಾರೀ ಅಚ್ಚರಿ ಉಂಟಾಗಿದೆ. ಬುಧವಾರ ಪ್ರಕಟಿಸಲಾಗಿರುವ 6 ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಿಗೆ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌)ಯ ಮತ್ತು ಕಾಂಗ್ರೆಸ್‌ನ ನಾಲ್ವರು ಮುಖಂಡರಿಗೆ ಸ್ಪರ್ಧೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಬಿಆರ್‌ಎಸ್‌ನ ಸೀತಾ­ ರಾಮ ನಾಯ್ಕ, ಎಸ್‌.ಸಾಯಿ ರೆಡ್ಡಿ, ಗೋಡಮ್‌ ನಾಗೇಶ್‌, ಕಾಂಗ್ರೆಸ್‌ನ ಗೋಮಸ ಶ್ರೀನಿವಾಸ ರೆಡ್ಡಿ ಅವರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ.

ಬಿಜೆಪಿ ಜತೆ ಮಾಜಿ ಸಿಎಂ ಪನ್ನೀರ್‌ಸೆಲ್ವಂ, ಟಿಟಿವಿ ದಿನಕರನ್‌ ಚರ್ಚೆ
ತಮಿಳುನಾಡಿನ ಮಾಜಿ ಸಿಎಂ ಓ.ಪನ್ನೀರ್‌ಸೆಲ್ವಂ ಹಾಗೂ ಎಎಂಎಂಕೆ ಸ್ಥಾಪಕ ಟಿ.ಟಿ.ವಿ ದಿನಕರನ್‌ ಮಂಗಳ­ವಾರ ತಡ ರಾತ್ರಿ­ಯಿಂದ ಬುಧ­ವಾರ ಮುಂಜಾವಿನ ವರೆಗೂ ಬಿಜೆಪಿ ಜತೆಗೆ ಮಾತುಕತೆ ನಡೆಸಿದ್ದಾರೆ. ಲೋಕಸಭೆ ಚುನಾ­ವಣೆ ಸಂಬಂಧಿಸಿದಂತೆ ಸೀಟು ಹಂ ಚಿಕೆ ಬಗ್ಗೆ ಮಾತುಕತೆ ಇದಾಗಿದ್ದು, ಎಐಎಡಿ­ಎಂಕೆಯ 2 ಎಲೆಗಳ ಚಿಹ್ನೆಯಲ್ಲೇ ತನ್ನ ಅಭ್ಯರ್ಥಿಗಳು ಸ್ಪರ್ಧಿ ಸುವ ಬಗ್ಗೆ ಪನ್ನೀರ್‌ಸೆಲ್ವಂ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
2 ದಿನಗಳ ಹಿಂದಷ್ಟೇ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟಕ್ಕೆ ಸೇರ್ಪಡೆಗೊಳ್ಳುವುದಾಗಿ ಪನ್ನೀರ್‌ ಸೆಲ್ವಂ ಮತ್ತು ದಿನಕರನ್‌ ಘೋಷಿಸಿದ್ದರು. ಈ ಬೆನ್ನಲ್ಲೇ ಬಿಜೆಪಿ ಜತೆಗೆ ರಾತೋರಾತ್ರಿ ಸಭೆ ನಡೆಸಲಾಗಿದೆ.

ಚುನಾವಣೆ ಹಿನ್ನೆಲೆ: 15ರಿಂದ 3 ದಿನಗಳ ಕಾಲ ಆರ್‌ಎಸ್‌ಎಸ್‌ ಸಭೆ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉನ್ನತ ನಿರ್ಣಯ ವಿಭಾಗವಾದ ಅಖೀಲ ಭಾರ­ತೀಯ ಪ್ರತಿನಿಧಿ ಸಭಾ (ಎಬಿಪಿಎಸ್‌) ಮಾ.15ರಿಂದ ಮೂರು ದಿನಗಳ ಪ್ರಮುಖ ಸಭೆ ನಡೆಸಲಿದೆ. ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿರುವಾಗಲೇ ನಡೆಯುತ್ತಿರುವ ಈ ಸಭೆಯಲ್ಲಿ ಬಿಜೆಪಿ 350 ಕ್ಷೇತ್ರ ಗಳಲ್ಲಿ ಜಯಸಾಧಿಸಲು ಅಗತ್ಯವಿರುವ ರೂಪುರೇಷೆ ಕುರಿತು ಚರ್ಚೆ ನಡೆಯಲಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನ ಕಾರ್ಯದರ್ಶಿ ಸುನಿಲ್‌ ಬನ್ಸಾಲ್‌, ಬಿ.ಎಲ್‌.ಸಂತೋಷ್‌ ಸೇರಿ ಹಲವು ಮುಖಂಡರು ಸಭೆಯಲ್ಲಿ ಭಾಗಿ ಯಾಗಲಿದ್ದಾರೆ. 2025ರಲ್ಲಿ ಆರ್‌ಎಸ್‌ಎಸ್‌ನ ಶತಮಾನೋತ್ಸವ ಆಚರಿಸಲಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರಿಗೆ ನೀಡಬೇಕಿರುವ ಸೂಚನೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ ಎನ್ನಲಾಗಿದೆ.

ಚಿರಾಗ್‌ ನೇತೃತ್ವದ ಎಲ್‌ಜೆಪಿಗೆ ಬಿಜೆಪಿಯ 5 ಸ್ಥಾನದ ಆಫ‌ರ್‌?
ಎಲ್‌ಜೆಪಿ(ಪಾಸ್ವಾನ್‌) ಪಕ್ಷದ ನಾಯಕ ಚಿರಾಗ್‌ ಪಾಸ್ವಾನ್‌ ಬಿಹಾರದಲ್ಲಿ ಬಿಜೆಪಿ ಜತೆಗೆ ಸೀಟು ಹಂಚಿಕೆ ಪೂರ್ಣ­ಗೊಂ ಡಿದೆ. ಈ ಬಗ್ಗೆ ಆ ಪಕ್ಷದ ನಾಯಕ ಚಿರಾಗ್‌ ಪಾಸ್ವಾನ್‌ ಪ್ರಕಟಿಸಿದ್ದಾರೆ. “ಹೊಂದಾಣಿಕೆ ಬಗ್ಗೆ ಸೂಕ್ತ ಸಮಯದಲ್ಲಿ ವಿವರವನ್ನು ಬಹಿರಂಗ ಮಾಡ ಲಾಗುವುದು’ ಎಂದಿದ್ದಾರೆ. ಮೂಲಗಳ ಪ್ರಕಾರ, ಚಿರಾಗ್‌ ಪಕ್ಷಕ್ಕೆ ಬಿಜೆಪಿ 5 ಕ್ಷೇತ್ರ ಬಿಟ್ಟುಕೊಟ್ಟಿದೆ ಎನ್ನ ಲಾಗಿದೆ. ಈ ಮಧ್ಯೆ, ಇಂಡಿಯಾ ಮೈತ್ರಿಕೂಟವು ಪಾಸ್ವಾನ್‌ ಅವರನ್ನು ಆಹ್ವಾನಿಸಿತ್ತು. 2019ಕ್ಕಿಂತ 2 ಹೆಚ್ಚುವರಿ ಸೀಟುಗಳನ್ನು ನೀಡುವ ಭರವಸೆ ದೊರೆ ತಿತ್ತು ಎನ್ನಲಾಗಿದೆ. ಆದರೆ ಅಂತಿಮವಾಗಿ ಪಾಸ್ವಾನ್‌ ಅವರು ಎನ್‌ಡಿಎ ಜತೆ ಹೋಗಲು ನಿರ್ಧರಿಸಿದ್ದಾರೆ.

ಮಹಾರಾಷ್ಟ್ರ ಎನ್‌ಡಿಎ ಸೀಟು ಫೈನಲ್‌: ಅಜಿತ್‌ ಬಣಕ್ಕೆ 4, ಬಿಜೆಪಿಗೆ 31
ಬಿರುಸಿನ ಮಾತುಕತೆ ಬಳಿಕ ಮಹಾ­ರಾಷ್ಟ್ರದಲ್ಲಿ ಎನ್‌ಡಿಎ ಒಕ್ಕೂಟದ ಪಕ್ಷಗಳಾದ ಬಿಜೆಪಿ, ಏಕನಾಥ್‌ ಶಿಂಧೆ ಬಣದ ಶಿವ­ಸೇನೆ, ಅಜಿತ್‌ ಪವಾರ್‌ ನೇತೃ ತ್ವದ ಎನ್‌ಸಿಪಿ ನಡುವೆ ಸೀಟು ಹಂಚಿಕೆ ಅಂತಿಮ­ಗೊಂಡಿದೆ. ಒಟ್ಟು 48 ಕ್ಷೇತ್ರಗಳ ಪೈಕಿ ಬಿಜೆಪಿ 31, ಶಿಂಧೆ ಬಣದ ಶಿವಸೇನೆ 13 ಸ್ಥಾನ, ಅಜಿತ್‌ ಪವಾರ್‌ ಬಣದ ಎನ್‌ಸಿಪಿ 4 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಬಾರಾಮತಿಯಿಂದ ಅಜಿತ್‌ ಪತ್ನಿ ಸುನೇತ್ರಾ ಪವಾರ್‌, ರಾಯ್‌ಗಢದಿಂದ ಎನ್‌ಸಿಪಿ ಮಹಾರಾಷ್ಟ್ರ ಅಧ್ಯಕ್ಷ ಸುನಿಲ್‌ ತಟ್ಕರೆ, ಶಿರೂರ್‌ನಿಂದ ಪ್ರದೀಪ್‌ ಕಂಡ್‌ ಅಥವಾ ಅಧಲರಾವ್‌ ಪಾಟೀಲ್‌ ಮತ್ತು ಪರ್ಭಾನಿ ಕ್ಷೇತ್ರದಿಂದ ರಾಜೇಶ್‌ ವಿಟೇಕರ್‌ ಅವರನ್ನು ಕಣಕ್ಕೆ ಇಳಿಸುವ ಸಾಧ್ಯತೆಗಳಿವೆ.

ದೀದಿ ವಿರುದ್ಧ ಕಿರಿಯ ಸಹೋದರ ಬಾಬುನ್‌ ಬ್ಯಾನರ್ಜಿ ಬಂಡಾಯ
ಟಿಎಂಸಿ ನಾಯಕಿ, ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಅವರ ಕಿರಿಯ ಸೋದರ ಬಾಬುನ್‌ ಬ್ಯಾನರ್ಜಿ ಬಂಡಾಯ ಎದ್ದಿ­ದ್ದಾರೆ. ಹೌರಾ ಲೋಕ­ಸಭಾ ಕ್ಷೇತ್ರದಿಂದ ಪ್ರಸೂನ್‌ ಬ್ಯಾನ­ರ್ಜಿಗೆ ಮತ್ತೆ ಅವಕಾಶ ನೀಡಿದ್ದಕ್ಕೆ ಕೋಪ ಗೊಂಡಿದ್ದಾರೆ. ಜತೆಗೆ ಆ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವು­ದಾಗಿ ಬಾಬುನ್‌ ಬ್ಯಾನರ್ಜಿ ಘೋಷಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಮಮತಾ, “ಬಾಬುನ್‌ ಬ್ಯಾನರ್ಜಿ ಜತೆಗಿನ ಸಂಬಂಧ ತ್ಯಜಿಸಿದ್ದೇವೆ. ಪ್ರತೀ ಚುನಾವಣೆಗೂ ಮುನ್ನ ಆತ ಸಮಸ್ಯೆ ಸೃಷ್ಟಿಸುತ್ತಾನೆ. ನನಗೆ ಕುಟುಂಬ ರಾಜಕಾರಣದಲ್ಲಿ ನಂಬಿಕೆ ಇಲ್ಲ. ಹೀಗಾಗಿ ಆತನಿಗೆ ಟಿಕೆಟ್‌ ನೀಡಿಲ್ಲ’ ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next