Advertisement

ನಿಗೂಢ ಹಣಕಾಸಿನ ವಹಿವಾಟು… ಬಿಟ್ ಕಾಯಿನ್ ಎಂದರೇನು?

04:05 PM Nov 23, 2021 | |

ಬಿಟ್ ಕಾಯಿನ್ ಇತ್ತೀಚಿನ ದಿನಗಳಲ್ಲಿ ಬಹಳ ಸದ್ದು ಮಾಡುತ್ತಿದೆ. ಬಿಟ್ ಕಾಯಿನ್ ವ್ಯವಹಾರದಲ್ಲಿ ಭಾರೀ ಹಗರಣ ನಡೆದಿದೆ ಎಂದು ರಾಜಕೀಯ ಪಕ್ಷಗಳು ದಿನ ನಿತ್ಯ ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿವೆ. ಆದರೆ ಬಿಟ್ ಕಾಯಿನ್ ಎಂದರೇನು ಎಂಬುದು ಶ್ರೀಸಾಮಾನ್ಯನಿಗೆ ತಿಳಿದಿಲ್ಲವೆಂಬುದು ಮಾತ್ರ ಸರಳ ಸತ್ಯ.ಬಿಟ್ ಕಾಯಿನ್ ಎಂಬುದೊಂದು ‘ವಿದ್ಯುನ್ಮಾನ ಹಣ (digital currency).’ ಬಿಟ್ ಕಾಯಿನ್ ಕೊಳ್ಳುವ, ಮಾರುವ ಮತ್ತು ಹಣವನ್ನು ಸಂಗ್ರಹಿಸಿಡುವ (investment) ಸಾಧನವೆಂದು ಈಗಾಗಲೇ ಪ್ರಪಂಚಾದ್ಯಂತ ಮಾನ್ಯತೆ ಪಡೆದಿದೆ. ಬಿಟ್ ಕಾಯಿನಿನ ವ್ಯವಹಾರವನ್ನು ‘ಗುಪ್ತ ಲಿಪಿ ಶಾಸ್ತ್ರ (Cryptography),’ ಎಂಬ ತಂತ್ರಜ್ಞಾನದ ಮುಖಾಂತರ ನಡೆಸಲಾಗುತ್ತದೆ.

Advertisement

ಇದನ್ನೂ ಓದಿ:ವಿಧಾನ ಪರಿಷತ್ ಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ ವೈ.ಎಂ.ಸತೀಶ್ ಅವರು ನಾಮಪತ್ರ ಸಲ್ಲಿಕೆ  

ಚಾಲ್ತಿಯಲ್ಲಿರುವ ಹಲವಾರು ವಿದ್ಯುನ್ಮಾನ ಹಣಗಳಲ್ಲಿ, ಬಿಟ್ ಕಾಯಿನ್ ಮುಂಚೂಣಿಯಲ್ಲಿದೆ. ಲಿಟೆಕಾಯ್ನ್, ಪೀರ್ ಕಾಯಿನ್, ನೋವ ಕಾಯಿನ್ ಮುಂತಾದ ಬೇರೆ ಬೇರೆ ವಿದ್ಯುನ್ಮಾನ ಹಣಗಳೂ ಚಲಾವಣೆಯಲ್ಲಿ ಇವೆ. ಬಿಟ್ ಕಾಯಿನಿನ ಸೃಷ್ಟಿಯಲ್ಲೇ ನಿಗೂಢತೆ ಇದೆ. ಯಾರಿಗೂ ಪರಿಚಯವಿರದ ‘ಸತೋಷಿ ನಕಾಮೋಟೋ’ ಎಂಬ ವ್ಯಕ್ತಿ, 2009ರಲ್ಲಿ ಬಿಟ್ ಕಾಯಿನನ್ನು ಕಂಡು ಹಿಡಿದನು ಎಂದು ಹೇಳಲಾಗುತ್ತಿದೆ. ಜನವರಿ 2011ರಂದು, ಅಮೆರಿಕಾದ ಒಂದು ಡಾಲರ್ ನಸ್ಟು ಬೆಲೆಯಿದ್ದ ಒಂದು ಬಿಟ್ ಕಾಯಿನಿನ ಬೆಲೆ, 2017ರ ಹೊತ್ತಿಗೆ 18,000 ಡಾಲರ್ ಗೆ ಏರಿಕೆಯಾಗಿ ವಿಶ್ವದ ಜನರ ಹುಬ್ಬೇರುವಂತೆ ಮಾಡಿದ್ದು ಈಗ ಇತಿಹಾಸ. ಅದರ ಬೆಲೆ ಈಗ ಸುಮಾರು 75,000 ಡಾಲರ್ ಆಗಿದೆ. (ಅಂದರೆ 52 ಲಕ್ಷ ರು.) ಎನ್ನುವುದು ಸೋಜಿಗದ ಸಂಗತಿ.

‘ವಿದ್ಯುನ್ಮಾನ ಹಣ’ ಎಂದರೇನು?

ಸಾವಿರಾರು ವರುಷಗಳ ಹಿಂದೆ, ಕವಡೆ(seashells)ಗಳನ್ನೂ ಹಣವೆಂದು ವಿನಿಮಯ ಮಾಡಿಕೊಳ್ಳಲಾಗುತ್ತಿತ್ತು. ಅಂದಿನ ಜನರು ಕವಡೆಗಳನ್ನು(ಅಂದರೆ ಹಣವನ್ನು) ಗಳಿಸಲು ಸರಕುಗಳನ್ನು ಮಾರಾಟ ಮಾಡಬೇಕಿತ್ತು ಅಥವಾ ದೈಹಿಕ ಶ್ರಮದ ಕೆಲಸಗಳನ್ನು ಮಾಡಬೇಕಿತ್ತು. ಮತ್ತೆ ಕೆಲವು ಸಾಹಸಿಗಳು ಸಮುದ್ರದ ನಡುವೆ ಸಾಗಿ, ಕವಡೆಗಳನ್ನೇ ನೇರವಾಗಿ ಸಂಗ್ರಹಿಸಿ  ಹಣವಂತರಾಗುತ್ತಿದ್ದರು. ಇದೇ ಅಂದಿನ ದಿನಗಳಲ್ಲಿ ‘ಕವಡೆಗಳ ಗಣಿಗಾರಿಕೆ (mining seashells)’ ಎನ್ನಿಸಿಕೊಳ್ಳುತ್ತಿತ್ತು.

Advertisement

ಈಗ ನಾವು ಕಂಪ್ಯೂಟರ್ ಯುಗದಲ್ಲಿದ್ದೇವೆ. ಕಂಪ್ಯೂಟರ್ ಒಗಟು (puzzles)ಗಳು ಮತ್ತು ಆಟಗಳಿಗೆ ಪರಿಹಾರ(solution)ವನ್ನು ಕಂಡು ಹಿಡಿಯುವುದರಲ್ಲೇ ದಿನವಿಡೀ ಮಗ್ನರಾಗಿ, ಪರಿಹಾರ ದೊರಕಿದಾಗ ಗೆಲುವಿನ ನಗೆ ಬೀರುವ ನಮ್ಮ ಯುವಕರನ್ನು ನಾವೀಗ ನೋಡುತ್ತಿದ್ದೇವೆ. ಆ ಗೆಲುವಿನ ಅಂಕಗಳನ್ನು ದಾಖಲಿಸಿಡುವ ಕಂಪ್ಯೂಟರ್ ಜಾಲತಾಣಗಳು ಇಲ್ಲದಿಲ್ಲ. ಈ ರೀತಿಯ ಪ್ರಕ್ರಿಯೆಯೇ ವಿದ್ಯುನ್ಮಾನ ಹಣಗಳ ಮೂಲವೆಂದು ಹೇಳಬಹುದು.

ಬಿಟ್ ಕಾಯಿನಿನಂತಹ ವಿದ್ಯುನ್ಮಾನ ಹಣದ ಪ್ರವರ್ತಕರು (promoters), ಗುಪ್ತಲಿಪಿ  ಶಾಸ್ತ್ರ (Cryptography) ತಂತ್ರ ಜ್ಞಾನವನ್ನು ಬಳಸಿ, ಅತ್ಯಂತ ಕ್ಲಿಷ್ಟ ಒಗಟು(puzzles)ಗಳನ್ನು ಸೃಷ್ಟಿಸುತ್ತಾರೆ. ಅಪಾರವಾದ ಬುದ್ಧಿಶಕ್ತಿ ಮತ್ತು ಕಷ್ಟಸಹಿಷ್ಣುತೆಯುಳ್ಳ ತಂತ್ರಜ್ಞರು, ಅತ್ಯಾಧುನಿಕ ಯಂತ್ರ (sophisticated hardware)ಗಳನ್ನು ಬಳಸಿ ಅಂತಹ ಒಗಟುಗಳಿಗೆ ಪರಿಹಾರವನ್ನು ಕಂಡುಹಿಡಿಯಬಲ್ಲರು. ಅಂತಹ ಪರಿಹಾರದ ಅಂಕಗಳಿಗೆ ಈಗ ‘ವಿದ್ಯುನ್ಮಾನ ಹಣ(cryptocurrency)’ವೆಂಬ ಮಾನ್ಯತೆ ದೊರೆತು,

ವಿನಿಮಯದ ಮಾಧ್ಯಮವಾಗಿ ಬೆಳೆದು ನಿಂತಿದೆ. ಅಂತಹ ಪರಿಹಾರಗಳು ‘ಬ್ಲಾಕ್ ಚೈನ್ (block chain)’ನ ವಿನ್ಯಾಸದಲ್ಲಿದ್ದು, ಅದು ಒಂದು ನಿರ್ಧಿಷ್ಟ ಸಂಖ್ಯೆಯ ವಿದ್ಯುನ್ಮಾನದ ಅಂಕಗಳನ್ನು, ಅಂದರೆ ‘ವಿದ್ಯುನ್ಮಾನ ಹಣ/ನಾಣ್ಯ(cryptocurrency)’ವನ್ನು ಹೊಂದಿರುತ್ತದೆ. ಈ ಶೋಧನೆಯನ್ನೇ ‘ವಿದ್ಯುನ್ಮಾನ ಹಣದ ಗಣಿಗಾರಿಕೆ(mining of cryptocurrency)’ ಎನ್ನುತ್ತಾರೆ.

ಬಿಟ್ ಕಾಯಿನ್ ನ ಬ್ಲಾಕ್ ಚೈನಿನಲ್ಲಿ 21 ದಶ ಲಕ್ಷ ಬಿಟ್ ಕಾಯಿನ್ ಗಳಿದ್ದು, ಅವುಗಳ ಪೈಕಿ ಸುಮಾರು 17 ದಶ ಲಕ್ಷ ಬಿಟ್ ಕಾಯಿನ್ ಗಳು ಮಾತ್ರ ಶೋಧಕರ ಕೈವಶವಾಗಿದ್ದು, ವಹಿವಾಟು ಮುಂದುವರೆದಿರುತ್ತದೆ. ವಿದ್ಯುನ್ಮಾನ ಹಣದ ಗಣಿಗಾರಿಕೆ(mining ofcryptocurrency) ಕಷ್ಟದಾಯಕವಾಗಿದ್ದು, ಆ ಪ್ರಕ್ರಿಯೆಗೆ ಅಪಾರವಾದ ಹಣ ವ್ಯಯವಾಗುವುದಂತೂ ಖಂಡಿತ.

ವಿದ್ಯುನ್ಮಾನ ಹಣದ ಗಣಿಗಾರಿಕೆ(mining of cryptocurrency)ಯನ್ನು ಶ್ರೀಸಾಮಾನ್ಯರು ಮಾಡಲಾರರು. ಅಂತಹ ವಿದ್ಯುನ್ಮಾನ ಹಣವನ್ನು, ಅವುಗಳನ್ನು ಹೊಂದಿರುವವರಿಂದ, ಅದರ ಬೆಲೆಯನ್ನು ತೆತ್ತು, ಶ್ರೀಸಾಮಾನ್ಯರು ಖರೀದಿಸಬೇಕಾಗುತ್ತದೆ. ಈ ರೀತಿಯ ವ್ಯವಹಾರ ಕುದುರಿ ವಿದ್ಯುನ್ಮಾನ ಹಣಕ್ಕೆ ಭಾರಿ ಬೇಡಿಕೆಯುಂಟಾಗಿದೆ.

ಬ್ಲಾಕ್ ಚೈನ್ (block chain) ಎಂದರೇನು?

ವಿದ್ಯುನ್ಮಾನ ಹಣ, ನಾಣ್ಯದ ಅಥವಾ ನೋಟಿನ ರೂಪದಲ್ಲಿರುವುದಿಲ್ಲ. ಅವುಗಳು ಇ-ಚೀಲ(e-wallet)ದಲ್ಲಿ ವಿದ್ಯುನ್ಮಾನ(electronic) ರೂಪದಲ್ಲಿರುತ್ತವೆ. ವಿದ್ಯುನ್ಮಾನ ಹಣವನ್ನು ಹೊಂದಿರುವವರ ವಿವರಗಳ ದಾಖಲೆಯನ್ನು ಗುಪ್ತವಾಗಿ ಇಟ್ಟಿರುವ ವಿದ್ಯುನ್ಮಾನ ಸಾಧನವನ್ನೇ ಬ್ಲಾಕ್ ಚೈನ್(block chain) ಎನ್ನುತ್ತಾರೆ. ವಿದ್ಯುನ್ಮಾನ ಹಣದ ಮಾರಾಟ, ಖರೀದಿ ಮತ್ತು ಸಂಗ್ರಹದ ವಿವರಗಳು ಬ್ಲಾಕ್ ಚೈನಿನಲ್ಲಿ ಅಡಕವಾಗಿದ್ದು, ಅದನ್ನು ಹೊಂದಿದವರ ಹೆಸರುಗಳು ಯಾರಿಗೂ ತಿಳಿದಿರುವುದಿಲ್ಲ. ವಿದ್ಯುನ್ಮಾನ ಹಣದ ಬಳಕೆ ಅತ್ಯಂತ ಕ್ಲಿಷ್ಟವಾದ ಗುಪ್ತಪದ(password)ದ ಬಳಕೆಯಿಂದ ಮಾತ್ರ ಸಾಧ್ಯ. ಅಂತಹ ಕ್ಲಿಷ್ಟಕರವಾದ ಗುಪ್ತಪದವನ್ನು ಮರೆತು/ಕಳೆದುಕೊಂಡು, ಕೋಟ್ಯಂತರ ರೂಪಾಯಿ ಹಣವನ್ನು ಕಳೆದುಕೊಂಡವರಿದ್ದಾರೆ. ಗುಪ್ತಪದಗಳಗುಟ್ಟನ್ನು ಬೇಧಿಸಿ, ಕೋಟ್ಯಂತರ ಬೆಲೆಯ ವಿದ್ಯುನ್ಮಾನ ಹಣವನ್ನು ಲಪಟಾಯಿಸಿದ ಖದೀಮರೂ ಇಲ್ಲದಿಲ್ಲ!

ವಿದ್ಯುನ್ಮಾನ ಹಣದ ನಿಯಂತ್ರಣ ಸಾಧ್ಯವೇ?

ವಿದ್ಯುನ್ಮಾನ ಹಣವೆಂಬುದು ಪ್ರಪಂಚದ ಯಾವುದೇ ಸರಕಾರದ ನಿಯಂತ್ರಣಕ್ಕೂ ಒಳಪಟ್ಟಿಲ್ಲ. ಹಾಗಾಗಿ ಯಾವ ಸರಕಾರವೂ ವಿದ್ಯುನ್ಮಾನ ಹಣದ ಬೆಲೆಗೆ ಯಾವುದೇ ರೀತಿಯ ಖಾತರಿಯನ್ನು ನೀಡುವುದಿಲ್ಲ! ಅದರ ಪ್ರವತಕರು ಮತ್ತು ದಾಖಲೆಗಳ ವಿವರಗಳೇ ನಿಗೂಢ. ವಿದ್ಯುನ್ಮಾನ ಹಣದ ದಾಖಲೆಗಳ ಜಾಲತಾಣವೇ ಕುಸಿದು (crashing of cryptocurrency sites) ಬಿದ್ದರೆ, ಹೂಡಿಕೆದಾರರೆಲ್ಲರೂ ಮುಗ್ಗರಿಸಿ ಬಿದ್ದಂತೆಯೇ ಸರಿ. ಒಮ್ಮಲೇ ಬಲಿಷ್ಠ ಸರಕಾರಗಳು ಮುಂದಾಗಿ, ವಿದ್ಯುನ್ಮಾನ ಹಣದ ಮೇಲೆ

ನಿಯಂತ್ರಣ ಸ್ಥಾಪಿಸಬಲ್ಲ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ. ಖದೀಮರಿಂದ ಲಪಟಾಯಿಸಲ್ಪಡುವ (swindling by hackers) ಸಾಧ್ಯತೆಯೂ ಸೇರಿದಂತೆ, ವಿದ್ಯುನ್ಮಾನ ಹಣದ ವ್ಯವಹಾರದಲ್ಲಿ ಭಾರಿ ಅಪಾಯ ಅಡಗಿದೆ ಎಂಬುದು ನಾವೆಲ್ಲರೂ ಅರಿಯಬೇಕಾದ ಸತ್ಯ. ಆದರೂ ವಿದ್ಯುನ್ಮಾನ ಹಣದ ವ್ಯವಹಾರಗಳಿಗೆ, ಅಮೇರಿಕಾ, ಕೆನಡಾ, ಆಸ್ಟ್ರೇಲಿಯಾ ಮತ್ತು ಹಲವಾರು ಐರೋಪ್ಯ ರಾಷ್ಟ್ರಗಳೂ ಮಾನ್ಯತೆ ನೀಡಿವೆ. ಇತ್ತೀಚಿಗೆ ನಮ್ಮ ದೇಶ ಭಾರತದಲ್ಲೂ ವಿದ್ಯುನ್ಮಾನ ಹಣದ ವ್ಯವಹಾರ ಭಾರಿ ಪ್ರಮಾಣದಲ್ಲೇ ನಡೆಯುತ್ತಿದ್ದು, ಅದು ನಮ್ಮ ಸರಕಾರಕ್ಕೂ ತಿಳಿದಿದೆ.

ಮುಂದೇನು?

ತಂತ್ರಜ್ಞಾನ(technology)ವೆಂಬುದು ದಿಢೀರನೆ ಭಾರೀ ಬದಲಾವಣೆ (disruption)ಗಳನ್ನು ತಂದೊಡ್ಡಬಲ್ಲದು. ಒಂದೂ ಟ್ಯಾಕ್ಸಿಯನ್ನು ಹೊಂದಿರದ ಉಬರ್(uber)ನಂತಹ ಸಂಸ್ಥೆಗಳು, ಇಂದು ಕೋಟ್ಯಂತರ ಟ್ಯಾಕ್ಸಿಗಳನ್ನು ನಿಯಂತ್ರಿಸುತ್ತಿವೆ. ‘ಇ-ಮೇಲ್ ತಂತ್ರಜ್ಞಾನವು ಪೋಸ್ಟ್ ಆಫೀಸಗಳನ್ನು ಅನಗತ್ಯಗೊಳಿಸಿದಂತೆ, ವಿದ್ಯುನ್ಮಾನ ಹಣವೆಂಬುದು ಬ್ಯಾಂಕ್ ಗಳನ್ನು ಮುಂದೆ ಅನಗತ್ಯಗೊಳಿಸಬಹುದು’ ಎಂಬುದು ತಂತ್ರಜ್ಞರ ಭವಿಷ್ಯವಾಣಿಯಾಗಿದೆ. ಬದಲಾವಣೆಗಳಿಗೆ ಹೊಂದಿಕೊಂಡು ಮುನ್ನಡೆಯುವುದೇ ಜೀವನ. ವಿದ್ಯುನ್ಮಾನ ಹಣದ ಬಳಕೆ ನಿಯಂತ್ರಣದ ಹಾಗು ಕಾನೂನಿನ ಚೌಕಟ್ಟುಗಳಿಗೆ ಒಳಪಡಲಿ ಮತ್ತು ಎಚ್ಚರಿಕೆಯ ಹೆಜ್ಜೆಗಳನ್ನು ಶ್ರೀಸಾಮಾನ್ಯರು ಮುಂದಿಡುತ್ತಾ ಸಾಗಲಿ ಎಂದು ಆಶಿಸೋಣ.

ಲಕ್ಷ್ಮೀನಾರಾಯಣ ಕೆ.ಮಾಜಿ ಬ್ಯಾಂಕರ್

M.Sc.,M.B.A.,C.A.I.I.B.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next