Advertisement

Bitcoin: ಅಧಿಕಾರಿಗಳು ಯಾರೇ ಇದ್ದರೂ ಕಾನೂನು ಕ್ರಮ: ಡಾ.ಜಿ. ಪರಮೇಶ್ವರ್‌ ಸ್ಪಷ್ಟನೆ

07:01 PM Oct 28, 2023 | Team Udayavani |

ಬೆಂಗಳೂರು: ಬಿಟ್‌ ಕಾಯಿನ್‌ ಪ್ರಕರಣದಲ್ಲಿ ಯಾರಾದರೂ ಅಧಿಕಾರಿ ಭಾಗಿಯಾಗಿದ್ದರೆ ಕ್ರಮ ಕೈಗೊಳ್ಳುತ್ತೇವೆ. ಅಂತಹ ಅಧಿಕಾರಿಯನ್ನು ಇಟ್ಟುಕೊಂಡು ತನಿಖೆ ಮಾಡುವುದಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಸ್ಪಷ್ಟಪಡಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಟ್‌ ಕಾಯಿನ್‌ ಪ್ರಕರಣದಲ್ಲಿ ಕೆಲ ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ಆರೋಪಗಳಿರುವುದು ನಿಜ. ಆದರೆ, ಅಂತಹ ಕೆಲ ಅಧಿಕಾರಿಗಳನ್ನು ಈಗಾಗಲೇ ಬಂಧಿಸಿ, ವಿಚಾರಣೆ ಸಹ ಮಾಡಲಾಗಿದೆ. ಕಾನೂನು ರೀತಿಯ ಕ್ರಮಗಳು ಆಗುತ್ತಿವೆ ಎಂದರು.

ಬಿಟ್‌ ಕಾಯಿನ್‌ ತನಿಖೆಯ ನೆಪದಲ್ಲಿ ಫೋನ್‌ ಕದ್ದಾಲಿಕೆ ಮಾಡಲಾಗುತ್ತಿತ್ತು ಎಂಬ ಆರೋಪ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಲಾಗುತ್ತದೆ. ತನಿಖೆ ನಡೆಸುತ್ತಿರುವ ಪ್ರತಿ ಅಧಿಕಾರಿಯೂ ಸೂಕ್ಷ್ಮಗ್ರಾಹಿಯಾಗಿರಬೇಕು. ಬಹಳ ಎಚ್ಚರಿಕೆಯಿಂದ ತನಿಖೆ ನಡೆಸಬೇಕು ಎಂದು ಹೇಳಿದರು.

ಕುಮಾರಸ್ವಾಮಿ ಹೇಳಿದ್ದೆಲ್ಲಾ ಸತ್ಯವಲ್ಲ
ಕುಮಾರಸ್ವಾಮಿ ಹೇಳುವುದೆಲ್ಲಾ ಸತ್ಯವಲ್ಲ. ಸಮ್ಮಿಶ್ರ ಸರ್ಕಾರ ಪತನಕ್ಕೂ ಮೊದಲು ನನ್ನ ಮನೆಯಲ್ಲಿ ಯಾವ ಸಭೆಯೂ ನಡೆದಿಲ್ಲ. ಅವರು ಹೀಗೇ ಆರೋಪ ಮಾಡಿಕೊಂಡು ಇರಲಿ. ಅವರಿಗೆ ಜನರೇ ಉತ್ತರ ಕೊಟ್ಟಾಗಿದೆ ಎಂದು ಪರಮೇಶ್ವರ್‌ ತಿರುಗೇಟು ನೀಡಿದರು.

ನಮ್ಮ ಮನೆಗೆ ಶಾಸಕರು ಬಂದು-ಹೋಗಿ ಮಾಡಿದ ಮಾತ್ರಕ್ಕೆ ಸರ್ಕಾರ ಉರುಳಿಸುವ ಷಡ್ಯಂತ್ರ ನಡೆದಿತ್ತು ಎಂದರೆ ಹೇಗೆ? ಅವರು ಹೇಳಿದ್ದೆಲ್ಲ ಸತ್ಯ ಎಂದು ನಂಬಬೇಡಿ. ಅವರ ಆರೋಪಗಳು ನಿರಾಧಾರ. ಇಂತಹ ಆರೋಪಕ್ಕೆಲ್ಲಾ ನಾನು ಉತ್ತರಿಸುವ ಅಗತ್ಯವಿಲ್ಲ. ಜನರು ಕೊಟ್ಟಿರುವ ಉತ್ತರವನ್ನು ಅವರು ಅರ್ಥ ಮಾಡಿಕೊಂಡರೂ ಸಾಕು ಎಂದರು.

Advertisement

ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅಥವಾ ಯಾರೇ ಶಾಸಕರು ಪ್ರವಾಸ ಹೋದರೆ ಅದಕ್ಕೆ ಏನೇನೋ ಅರ್ಥವನ್ನೇಕೆ ಕಲ್ಪಿಸಬೇಕು? ಅಸಮಾಧಾನ ಇದ್ದರೆ ದುಬೈಗೇ ಏಕೆ ಹೋಗುತ್ತಾರೆ? ಅಲ್ಲಿಗೆ ಹೋಗುವುದು ಸುತ್ತಾಡಿಕೊಂಡು ಶಾಪಿಂಗ್‌ ಮಾಡಿಕೊಂಡು ಬರುವುದಕ್ಕಲ್ಲವೇ? ಅವರ ಖರ್ಚಿನಲ್ಲಿ ಹೋದರೆ ಸಮಸ್ಯೆ ಏನು? ಪ್ರವಾಸ ಹೋಗುವವರು ಎಂಜಾಯ್‌ ಮಾಡಿಕೊಂಡು ಬರಲಿ ಎಂದು ಹಾಸ್ಯವಾಗಿ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next