ಬೆಂಗಳೂರು: ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿದ ಬಿಟ್ ಕಾಯಿನ್ ಪ್ರಕರಣದ ಸಾಕ್ಷ್ಯನಾಶ, ಹ್ಯಾಕರ್ ಶ್ರೀಕಿ ಮೂಲಕ ಬಿಟ್‌ಕಾಯಿನ್ ಹಾಗೂಕ್ರಿಪ್ಟೋ ಕರೆನ್ಸಿ ವರ್ಗಾವಣೆ ಮಾಡಿ ಕೊಂಡ ಆರೋಪದಲ್ಲಿ ತಲೆಮರೆಸಿ ಕೊಂಡಿದ್ದ ಐಎಸ್‌ಡಿಯ ಡಿವೈಎಸ್ಪಿ ಶ್ರೀಧರ್ ಕೆ.ಪೂಜಾರ್ ಬುಧವಾರ ಎಸ್ ಐಟಿ ವಿಚಾರಣೆಗೆ ಹಾಜರಾದರು.
ಹೈಕೋರ್ಟ್ ಸೂಚನೆಯಂತೆ ಆರೋಪಿತ ಅಧಿಕಾರಿ ಎಸ್‌ಐಟಿ ಮುಂದೆ ಹಾಜರಾಗಿದ್ದರು. ಆದರೆ ಪ್ರಕರಣದ ಪ್ರಮುಖ ತನಿಖಾಧಿಕಾರಿ ಬಾಲರಾಜ್ ಅವರು ವೈದ್ಯಕೀಯ ರಜೆ ಮೇಲಿದ್ದ ಕಾರಣ ಮತ್ತೂಂದು ದಿನಾಂಕ ನೀಡಿ ತನಿಖೆಗೆ ಹಾಜರಾಗುವಂತೆ ಸೂಚಿಸಿ ಕಳುಹಿಸಲಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಬಿಟ್‌ಕಾಯಿನ್ ಪ್ರಕರಣದ ತನಿಖೆ ನಡೆಸಿದ್ದ ಸಿಸಿಬಿಯ ಅಂದಿನ ತನಿಖಾಧಿಕಾರಿಯಾಗಿದ್ದ ಶ್ರೀಧರ್ ಕೆ.ಪೂಜಾರ್ ಹಾಗೂ ಇತರ ಅಧಿಕಾರಿಗಳು, ತನಿಖೆ ವೇಳೆ ಪ್ರಕರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯಿಂದ ವ್ಯಾಲೆಟ್ ಹ್ಯಾಕ್ ಮಾಡಿಸಿ, ಬಿಟ್‌ಕಾಯಿನ್ ಮತ್ತು ಕ್ರಿಪ್ಟೋ ಕರೆನ್ಸಿಗಳನ್ನು ವರ್ಗಾವಣೆ ಮಾಡಿಕೊಂಡಿದ್ದರು. ಅಲ್ಲದೆ ಪ್ರಕರಣದಲ್ಲಿ ಸಾಕ್ಷ್ಯಗಳ ನಾಶಪಡಿಸಿದ್ದರು. ಈ ಸಂಬಂಧ ಕಾಟನ್‌ಪೇಟೆ ಠಾಣೆಯಲ್ಲಿ ಆರೋಪಿತ ಅಧಿಕಾರಿಗಳ ವಿರುದ್ಧ ಎಫ್ ಐಆರ್ ದಾಖಲಾಗಿತ್ತು. ಆ ನಂತರ ಪ್ರಕರಣವನ್ನು ಸಿಐಡಿಯ ಎಸ್‌ಐಟಿಗೆ ವರ್ಗಾವಣೆ ಮಾಡಲಾಗಿತ್ತು.
ಪ್ರಕರಣದಲ್ಲಿ ತನಿಖೆ ನಡೆಸಿದ್ದ ಇನ್ ಸ್ಪೆಕ್ಟರ್ ಪ್ರಶಾಂತ್ ಬಾಬು, ಲಕ್ಷ್ಮೀ ಕಾಂತಯ್ಯ ಅವರನ್ನು ಬಂಧಿಸಲಾಗಿತ್ತು.
ಬಳಿಕ ಶ್ರೀಧರ್ ಪೂಜಾರ್ ಬಂಧನಕ್ಕೆ ಎಸ್‌ಐಟಿ ತಂಡದ ಕಾರಿಗೆ ಬೇರೆ ವಾಹನದಿಂದ ಡಿಕ್ಕಿ ಹೊಡೆಸಿ ಪರಾಯಾಗಿದ್ದರು.
ಕೋರ್ಟ್ ಅನುಮತಿ ಪಡೆದು ಕೊಂಡ ಎಸ್‌ಐಟಿ, ಆರೋಪಿಯನ್ನು ಘೋಷಿತ ಅಪರಾಧಿ ಎಂದು ತೀರ್ಮಾನಿಸಿ ಬಹುಮಾನ ನೀಡುವುದಾಗಿ ಘೋಷಿಸಿತ್ತು.