Advertisement

Karnataka: ಕನಿಷ್ಠ ವೇತನ ಸಿಗದೆ ಬಿಸಿಯೂಟ ಸಿಬಂದಿ ಸಂಕಷ್ಟ!

09:10 PM Jul 09, 2023 | Team Udayavani |

ಬೆಂಗಳೂರು: ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ಸಿದ್ಧಪಡಿಸುವ ಅಕ್ಷರ ದಾಸೋಹ ಸಿಬಂದಿ ಕನಿಷ್ಠ ವೇತನ ಜಾರಿಯಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ರಾಜ್ಯದ ಸರಕಾರಿ ಶಾಲೆಗಳಲ್ಲಿ 1.21 ಲಕ್ಷ ಬಿಸಿಯೂಟ ತಯಾರಕ ಸಿಬಂದಿ ಇದ್ದಾರೆ. ಸರಕಾರಿ ನೌಕರರೆಂದು ಪರಿಗಣಿಸಿದರೂ ಪ್ರಸ್ತುತ ನೀಡಲಾಗುತ್ತಿರುವ 3,600ರೂ. ಮಾಸಿಕ ವೇತನದಲ್ಲಿ ಜೀವನ ನಿರ್ವಹಣೆ ಸಾಧ್ಯವಾಗದೆ ಈ ಕುಟುಂಬಗಳು ಬೀದಿಗೆ ಬಂದಿವೆ. ಅಧಿಕಾರಕ್ಕೆ ಬಂದ ಕೂಡಲೇ ವೇತನವನ್ನು 6 ಸಾವಿರ ರೂ.ಗಳಿಗೆ ಹೆಚ್ಚಿಸುವುದಾಗಿ ಗ್ಯಾರಂಟಿ ಕೊಟ್ಟಿದ್ದ ಕಾಂಗ್ರೆಸ್‌ ಸರಕಾರವು ಮೌನಕ್ಕೆ ಶರಣಾಗಿದೆ.

Advertisement

15 ಸಾವಿರ ರೂ. ಕನಿಷ್ಠ ವೇತನ
ಸರಕಾರಿ ಶಾಲೆಗಳಲ್ಲಿ 25 ಮಕ್ಕಳಿಗೆ ಒಬ್ಬರು ಮುಖ್ಯ ಅಡುಗೆ ಸಿಬಂದಿ ಇದ್ದು, ಮಾಸಿಕ ಕೇವಲ 3,700 ರೂ. ನೀಡಲಾಗುತ್ತಿದೆ. 25ಕ್ಕಿಂತ ಅಧಿಕ ಮಕ್ಕಳಿರುವ ಶಾಲೆಗಳಲ್ಲಿ ಮಕ್ಕಳ ಪ್ರಮಾಣಕ್ಕೆ ಅನುಗುಣವಾಗಿ ಕೆಲಸ ಮಾಡುವ ಅಡುಗೆ ಸಹಾಯಕರಿಗೆ 3,600 ರೂ. ಮಾಸಿಕ ವೇತನವಿದೆ. ನಿಯಮ ಪ್ರಕಾರ ರಾಜ್ಯ ಸರಕಾರದ ಕನಿಷ್ಠ ವೇತನ 15 ಸಾವಿರ ರೂ. ಇದೆ. ಇಂಡಿಯನ್‌ ಲೇಬರ್‌ ಆರ್ಗನೈಸೇಶನ್‌ (ಐಎಲ್‌ಒ) ಪ್ರಕಾರ ಒಂದು ಕುಟುಂಬದ ಜೀವನಕ್ಕೆ ತಿಂಗಳಿಗೆ ತಗಲುವ ಖರ್ಚನ್ನು ಕನಿಷ್ಠ ವೇತನ ಎಂದು ಪರಿಗಣಿಸಲಾಗುತ್ತದೆ. ಸದ್ಯ ಐಎಲ್‌ಒ 31,500 ರೂ. ಇದೆ.

ದುರ್ಘ‌ಟನೆಗೆ ಪರಿಹಾರ ಸಿಗುತ್ತಿಲ್ಲ
ಅಡುಗೆ ಮಾಡುವ ವೇಳೆ ಗ್ಯಾಸ್‌ ಸಿಲಿಂಡರ್‌, ಕುಕ್ಕರ್‌ ಸ್ಫೋಟ, ಕೈ-ಕಾಲಿಗೆ ಗಾಯದಂತಹ ದುರ್ಘ‌ಟನೆ ಸಂಭವಿಸಿದರೆ ಸಂತ್ರ ಸ್ತ ರಿಗೆ ಸರಕಾರವು 30 ಸಾವಿರ ರೂ. ಪರಿಹಾರ ಮೀಸಲಿಟ್ಟಿದೆ. ಆದರೆ ಶೇ. 95ರಷ್ಟು ಪ್ರಕರಣಗಳಲ್ಲಿ ಇದು ಸಂತ್ರಸ್ತರ ಕೈ ಸೇರುವುದೇ ಇಲ್ಲ. ಶಾಲಾ ಮುಖ್ಯೋಪಾಧ್ಯಾಯರು ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಿಸಿದರೆ ಆ ದಾಖಲೆಯ ಆಧಾರದ ಮೇಲೆ ಪರಿಹಾರ ಸಿಗುತ್ತದೆ. ಆದರೆ ಎಫ್ಐಆರ್‌ ದಾಖಲಾದರೆ ಉಂಟಾಗುವ ಕಿರಿಕಿರಿಯ ಭಯದಿಂದಾಗಿ ಎಫ್ಐಆರ್‌ ದಾಖಲಿಸುತ್ತಿಲ್ಲ.

ಬಿಸಿಯೂಟ ಸಿಬಂದಿಯ ಬೇಡಿಕೆಗಳೇನು?
– ವೇತನ 6 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು
– ನಿವೃತ್ತಿ ಹೊಂದುವವರಿಗೆ ಪರಿಹಾರ ರೂಪದಲ್ಲಿ 1 ಲಕ್ಷ ರೂ. ನೀಡಬೇಕು
– ದುರ್ಘ‌ಟನೆ ಸಂಭವಿಸಿದರೆ ಎಫ್ಐಆರ್‌ ದಾಖಲೆ ಇಲ್ಲದೆ ಅನುದಾನ ಕೊಡಬೇಕು
– ಆರೋಗ್ಯ ವಿಮೆ, ಮರಣ ಪರಿಹಾರ, ಗಾಯಗಳಾದರೆ ಆಸ್ಪತ್ರೆ ಖರ್ಚು ವೆಚ್ಚ ಸರಕಾರ ಭರಿಸಬೇಕು

ಗ್ಯಾರಂಟಿ ಭರವಸೆ ಸುಳ್ಳು
ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಬಿಸಿಯೂಟ ತಯಾರಕರ ವೇತನವನ್ನು 6 ಸಾವಿರ ರೂ.ಗಳಿಗೆ ಹೆಚ್ಚಿಸುವುದು 6ನೇ ಗ್ಯಾರಂಟಿಯಾಗಿದೆ ಎಂದು ಚುನಾವಣೆಗೆ ಮುನ್ನ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ ಭರವಸೆ ಕೊಟ್ಟಿದ್ದರು. ಈಗ ಈ ಭರವಸೆ ಸುಳ್ಳಾಗಿದೆ ಎಂದು ಬಿಸಿಯೂಟ ತಯಾರಕ ಸಿಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಚುನಾವಣೆಯ ಅನಂತರ ಕಾಂಗ್ರೆಸ್‌ ಸರಕಾರ ಬಿಸಿಯೂಟ ತಯಾರಕರನ್ನು ಅವಗಣಿಸಿದೆ. ದುಡಿಯುವ ಮಹಿಳೆಯರನ್ನು ಸುಳ್ಳು ಹೇಳಿ ವಂಚಿಸಿದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪಾಠ ಕಲಿಸಬೇಕಾಗುತ್ತದೆ.
– ಅವರಗೆರೆ ಚಂದ್ರು, ಪ್ರಧಾನ ಕಾರ್ಯದರ್ಶಿ, ಬಿಸಿಯೂಟ ತಯಾರಕರ ಒಕ್ಕೂ ಟದ ರಾಜ್ಯ ಸಮಿತಿ

ಅವಿನಾಶ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next