ಚೆನ್ನೈ: ಈಗಿನ ಕಾಲದಲ್ಲಿ ನಾವು ಎಲ್ಲಿದ್ದರೂ ಅಲ್ಲಿಗೆ ಬಂದು ಫುಡ್ ಡೆಲಿವೆರಿಯನ್ನು ಮಾಡುವ ವ್ಯವಸ್ಥೆಗಳಿವೆ. ಹಸಿವಾದರೆ ಆನ್ಲೈನ್ ನಲ್ಲಿ ಆರ್ಡರ್ ಮಾಡಿ ತಿನ್ನುತ್ತೇವೆ. ಆದರೆ ಆರ್ಡರ್ ಮಾಡುವ ಬದಲು ನಾವೇ ಹೋಗಿ ಬಿರಿಯಾನಿಯನ್ನು ಪಡೆದುಕೊಂಡರೆ ಹೇಗೆ?
ನಾವೇ ಹೋಗಿ ಪಡೆದುಕೊಳ್ಳುವುದು ಎಂದರೆ ಹೊಟೇಲ್ ಗೆ ಹೋಗಿ ಬಿರಿಯಾನಿಯನ್ನು ಖರೀದಿಸುವುದಲ್ಲ. ಎಟಿಎಂ ಯಂತ್ರಕ್ಕೆ ಹೇಗೆ ಎಟಿಎಂ ಕಾರ್ಡ್ ನ್ನು ಹಾಕಿ ಹಣ ಪಡೆದುಕೊಳ್ಳುತ್ತೇವೆಯೋ ಹಾಗೆಯೇ ಬಿರಿಯಾನಿಯನ್ನೂ ಈಗ ನಾವು ಪಡೆದುಕೊಳ್ಳಬಹುದು.!
ಇದನ್ನೂ ಓದಿ: ಚಿಕ್ಕಮಗಳೂರು:ದರ್ಗಾ,ದೇವಾಲಯ ವಿವಾದ ಪ್ರಕರಣ;ಇಂದು ಎಸ್.ಡಿ.ಪಿ.ಐ. ಮುಖಂಡರು ದರ್ಗಾಕ್ಕೆ ಭೇಟಿ
ಕೇಳೋದಕ್ಕೆ ಸ್ವಲ್ಪ ವಿಚಿತ್ರವೆನಿಸಿದರೂ ಹೀಗೊಂದು ವ್ಯವಸ್ಥೆ ಚೆನ್ನೈನಲ್ಲಿ ಆರಂಭಗೊಂಡಿದೆ. ಚೆನ್ನೈ ಮೂಲದ ಸ್ಟಾರ್ಟ್ ಅಪ್ ಕಂಪೆನಿಯಾಗಿರುವ ಬಾಯಿ ವೀಟು ಕಲ್ಯಾಣಂ (ಬಿ.ವಿ.ಕೆ) ಚೆನ್ನೈನ ಕೊಳತ್ತೂರುನಲ್ಲಿ ಬಿರಿಯಾನಿ ಎಟಿಎಂ ಆರಂಭಿಸಿದೆ.
ಏನಿದು ಬಿರಿಯಾನಿ ಎಟಿಎಂ?: ಎಟಿಎಂ ಯಂತ್ರದ ಹಾಗೆ ಮೂರು ಯಂತ್ರಗಳಿರುತ್ತವೆ. ಆ ಮೂರು ಯಂತ್ರಗಳಲ್ಲಿ ನೀವು ಹೋಗುವ ಯಂತ್ರಗಳಲ್ಲಿ ಬಿರಿಯಾನಿಯ ಮೆನುಗಳು ಬರುತ್ತದೆ. ಅದರಲ್ಲಿ ಒಂದನ್ನು ಆಯ್ಕೆ ಮಾಡಿದ ಬಳಿಕ ಎಟಿಎಂ ಕಾರ್ಡ್ ಅಥವಾ ಕ್ಯೂಆರ್ ಕೋಡ್ ಮೂಲಕ ಹಣವನ್ನು ಪಾವತಿಸಬಹುದು. ಆದಾದ ನಂತರ ನಿಮ್ಮ ಬಿರಿಯಾನಿ ಪ್ಯಾಕ್ ಆಗಿ ಬರಲು ಎಷ್ಟು ಹೊತ್ತು ಆಗುತ್ತದೆ ಎನ್ನುವ ನಿಮಿಷವನ್ನು ಯಂತ್ರ ತೋರಿಸುತ್ತದೆ. ಯಂತ್ರದ ಕೆಳ ಭಾಗದಲ್ಲಿ ಒಂದು ಬಾಗಿಲು ರೀತಿ ಓಪನ್ ಆಗಿ ಅಲ್ಲಿ ನಿಮ್ಮ ಬಿರಿಯಾನಿ ಅಚ್ಚುಕಟ್ಟಾಗಿ ಪ್ಯಾಕ್ ಆಗಿ ಬರುತ್ತದೆ.
ಭಾರತದ ಮೊದಲ ಬಿರಿಯಾನಿ ಎಟಿಎಂ ಇದಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇದರ ವಿಡಿಯೋ ವೈರಲ್ ಆಗಿದೆ. ಆದರೆ ಕೆಲವರು ಆಹಾರದ ಗುಣಮಟ್ಟದ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಬಾಯಿ ವೀಟು ಕಲ್ಯಾಣಂ ಬಿರಿಯಾನಿ ಡೆಲಿವೆರಿ ಮಾಡುವ ಸಂಸ್ಥೆ 2020 ರಲ್ಲಿ ಚೆನ್ನೈನಲ್ಲಿ ಆರಂಭವಾಯಿತು.