ಭುವನೇಶ್ವರ್: ಒಡಿಶಾದ ರೌರ್ಕೆಲಾದ ಬಿರ್ಸಾ ಮುಂಡಾ ಹಾಕಿ ಕ್ರೀಡಾಂಗಣ ಉದ್ಘಾಟನೆಯಾದ ಎರಡೇ ತಿಂಗಳಲ್ಲಿ ಗಿನ್ನಿಸ್ ರೆಕಾರ್ಡ್ ಪುಸ್ತಕಕ್ಕೆ ಸೇರಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಆಸನಗಳನ್ನು ಹೊಂದಿರುವ ಅತಿ ದೊಡ್ಡ ಹಾಕಿ ಕ್ರೀಡಾಂಗಣ ಎಂಬ ಖ್ಯಾತಿಗೆ ಪಾತ್ರವಾಗುವ ಮೂಲಕ ಗಿನ್ನಿಸ್ ಬುಕ್ ಆಫ್ ರೆಕಾರ್ಡ್‌ಗೆ ದಾಖಲಾಗಿದೆ.
ಈ ದಾಖಲೆಗೆ ನೀಡಲಾದ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಪ್ರಮಾಣ ಪತ್ರವನ್ನು ಶುಕ್ರವಾರ ಒಡಿಶಾದ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಅವರು ಸ್ವೀಕರಿಸಿದ್ದಾರೆ.
2023ರ ಹಾಕಿ ವಿಶ್ವ ಕಪ್‌ನ್ನು ಭಾರತ ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟಿತ್ತು. ಇದು ಭಾರತದ ಹಾಕಿ ಇತಿಹಾಸದಲ್ಲೇ ಒಂದು ಪಡಿಯಚ್ಚು ಮೂಡಿಸಿದೆ. ಈ ಸಂದರ್ಭದಲ್ಲಿ ರೌರ್ಕೆಲಾದ ಬಿರ್ಸಾ ಮುಂಡಾ ಹಾಕಿ ಕ್ರೀಡಾಂಗಣ ಇಡೀ ವಿಶ್ವದ ಗಮನ ಸೆಳೆದಿತ್ತು.
ಕೇವಲ 15 ತಿಂಗಳಲ್ಲೇ ನಿರ್ಮಾಣಗೊಂಡ ಈ ಅದ್ಭುತ ಹಾಕಿ ಕ್ರೀಡಾಂಗಣ ಸುಮಾರು 20,011 ಆಸನಗಳನ್ನು ಹೊಂದಿದೆ. ಪ್ರೇಕ್ಷಕರು ಯಾವುದೇ ಮೂಲೆಯಲ್ಲಿ ಕುಳಿತರೂ ಯಾವುದೇ ಅಡೆತಡೆಗಳಿಲ್ಲದೆ ಪಂದ್ಯಗಳನ್ನು ವೀಕ್ಷಿಸುವ ವ್ಯವಸ್ಥೆಯನ್ನು ಈ ಕ್ರೀಡಾಂಗಣದಲ್ಲಿ ಮಾಡಲಾಗಿದೆ. ಇದೀಗ ಕ್ರೀಡಾಂಗಣದ ಆಸನ ವ್ಯವಸ್ಥೆಗೆ ಗಿನ್ನಿಸ್ ರೆಕಾರ್ಡ್ ಒಲಿದುಬಂದಿದೆ.
ʻಒಡಿಶಾ ರಾಜ್ಯ ಕ್ರೀಡೆಗೆ ನೀಡಿರುವ ಆದ್ಯತೆಗಳಿಗೆ ಇಂದು ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿದೆ. ಅಂತಾರಾಷ್ಟ್ರೀಯ ಕ್ರೀಡಾ ನಕ್ಷೆಯಲ್ಲೇ ಇದೊಂದು ಹೊಸ ಮೈಲಿಗಲ್ಲು. ಇದು ನಮಗೆಲ್ಲರಿಗೂ ಅತ್ಯಂತ ಹೆಮ್ಮೆ ಮತ್ತು ಹೊಸ ಉತ್ಸಾಹವನ್ನು ನೀಡುವ ಸಂಗತಿ. ಇದಕ್ಕೆ ಕಾರಣರಾದ ಎಲ್ಲರಿಗೂ ನಾನು ಧನ್ಯವಾದ ಸಲ್ಲಿಸುತ್ತೇನೆ. ನಾನು ಈ ಗೌರವವನ್ನು ಒಡಿಶಾ ಜನರಿಗೆ ಅರ್ಪಿಸುತ್ತೇನೆʼ ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಹೇಳಿದ್ದಾರೆ.
ಇದನ್ನೂ ಓದಿ:
ಮತ್ತೆ ಮೈದಾನದಲ್ಲಿ ಮುಖಾಮುಖಿಯಾದ ಗಂಭೀರ್ – ಅಫ್ರಿದಿ: ಈ ಬಾರಿ ಆದದ್ದು ಮಾತ್ರ..