Advertisement

Biparjoy ಅಲರ್ಟ್‌: ಚಂಡಮಾರುತ ತೀವ್ರ

11:38 PM Jun 08, 2023 | Team Udayavani |

ಹೊಸದಿಲ್ಲಿ: ಅರಬಿ ಸಮುದ್ರದಲ್ಲಿ ಎದ್ದಿರುವ ಪ್ರಸಕ್ತ ವರ್ಷದ ಮೊದಲ ಚಂಡಮಾರುತ “ಬಿಪರ್‌ಜಾಯ್‌’ ಈ ಮೊದಲು ಊಹಿಸಿದ್ದಕ್ಕಿಂತಲೂ ತೀವ್ರವಾಗಿರಲಿದ್ದು, ಉತ್ತರದತ್ತ ಸಂಚರಿಸುತ್ತಿದ್ದಂತೆ ಹೆಚ್ಚು ಪ್ರಬಲವಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

Advertisement

ಮುಂದಿನ 3-4 ದಿನಗಳಲ್ಲಿ ಚಂಡಮಾರುತವು ಗಂಟೆಗೆ 160 ಕಿ.ಮೀ. ವೇಗ ಪಡೆಯಲಿದೆ. ಗುರುವಾರವು ಚಂಡಮಾರುತದ ಪ್ರಭಾವವೆಂಬಂತೆ ಸಮುದ್ರದಲ್ಲಿ ಅಬ್ಬರ ಹೆಚ್ಚಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಸಲಾಗಿದೆ.

ಆರಂಭದಲ್ಲಿ ಸಾಮಾನ್ಯ ಚಂಡಮಾರುತದ ಚಲನೆಯಲ್ಲಿದ್ದ ಬಿಪರ್‌ಜಾಯ್‌ ಗುರುವಾರ ಸಂಜೆಯ ವೇಳೆ ಕ್ಷಿಪ್ರವಾಗಿ ತೀವ್ರತೆ ಪಡೆದುಕೊಂಡಿದೆ. ಕೇವಲ 48 ಗಂಟೆಗಳಲ್ಲಿ ಅದು ಪ್ರಬಲ ಚಂಡ ಮಾರುತವಾಗಿ ಪರಿವರ್ತನೆಗೊಳ್ಳಲಿದೆ. ಜೂ.12 ರ ವರೆಗೂ ಇದರ ತೀವ್ರತೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಆದರೆ ಅರಬಿ ಸಮುದ್ರಕ್ಕೆ ಹೊಂದಿಕೊಂಡಂತೆ ಬರುವ ಒಮಾನ್‌, ಇರಾನ್‌ ಮತ್ತು ಪಾಕಿಸ್ಥಾನಗಳ ಮೇಲೆ ಚಂಡಮಾರುತದ ಪ್ರಭಾವ ಹೇಗಿರಲಿದೆ ಎಂಬ ಮಾಹಿತಿಯನ್ನು ಇಲಾಖೆ ನೀಡಿಲ್ಲ.
ಅರಬಿ ಸಮುದ್ರದಲ್ಲಿ ಚಂಡಮಾರುತಗಳ ಸಂಖ್ಯೆ ಇತ್ತೀಚೆಗೆ ಶೇ.52ರಷ್ಟು ಹೆಚ್ಚಳವಾಗಿದ್ದು, ಹೆಚ್ಚು ಪ್ರಬಲ ಚಂಡಮಾರುತಗಳ ಸಂಖ್ಯೆ ಶೇ.150ರಷ್ಟು ಏರಿಕೆಯಾಗಿದೆ.

ಕೆಲವು ರಾಜ್ಯಗಳಿಗೆ ಅಲರ್ಟ್‌ ಘೋಷಣೆ
ಬಿಪರ್‌ಜಾಯ್‌ ಚಂಡಮಾರುತದ ಪರಿಣಾಮ ಎಂಬಂತೆ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ, ಕೇರಳ, ಕರ್ನಾಟಕದ ದಕ್ಷಿಣ ಒಳನಾಡು, ಗೋವಾ, ಮಹಾರಾಷ್ಟ್ರ, ಮಣಿಪುರ, ಮಿಜೋರಾಂ, ಅಸ್ಸಾಂ, ಮೇಘಾಲಯ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಮುಂದಿನ 5 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಗುಜರಾತ್‌ ಸನ್ನದ್ಧ
ಅಗತ್ಯಬಿದ್ದರೆ ಗುಜರಾತ್‌ನ ಕರಾವಳಿ ಪ್ರದೇಶದ 22 ಗ್ರಾಮ ಗಳಲ್ಲಿ ವಾಸವಿರುವ 76 ಸಾವಿರ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆಸಲಿದ್ದೇವೆ ಎಂದು ಜಾಮ್‌ನಗರ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಅಲ್ಲದೇ ಜಿಲ್ಲಾಮಟ್ಟದ ವಿಪತ್ತು ನಿಯಂತ್ರಣ ಕೊಠಡಿಯನ್ನು ರಚಿಸಲಾಗಿದೆ. ಜೂ.11, 12ರ ವೇಳೆಗೆ ಗಾಳಿಯ ವೇಗವು ಗಂಟೆಗೆ 160 ಕಿ.ಮೀ. ಆಗಲಿದ್ದು, ಕೂಡಲೇ ವಾಪಸಾಗುವಂತೆ ಮೀನುಗಾರಿಕೆಗೆ ತೆರಳಿರುವ ಎಲ್ಲ ಮೀನುಗಾರರಿಗೂ ಸಂದೇಶ ರವಾನಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆಯ 15 ತಂಡ, ರಾಜ್ಯ ವಿಪತ್ತು ನಿರ್ವಹಣ ಪಡೆಯ 11 ತಂಡಗಳು ರಕ್ಷಣ ಕಾರ್ಯಾಚರಣೆಗೆ ಸನ್ನದ್ಧವಾಗಿ ನಿಂತಿವೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next