Advertisement

ಬಾಗಲೂರು ಕ್ವಾರಿಯಲ್ಲಿ ಬಯೋಮೈನಿಂಗ್‌

01:06 AM Aug 27, 2019 | Lakshmi GovindaRaj |

ಬೆಂಗಳೂರು: ತ್ಯಾಜ್ಯ ವಿಲೇವಾರಿ ಮತ್ತು ತ್ಯಾಜ್ಯ ನಿರ್ವಹಣೆ ಸಂಬಂಧ (ಎನ್‌ಜಿಟಿ) ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ತರಾಟೆಗೆ ತೆಗೆದುಕೊಂಡ ಬಳಿಕ ಬಿಬಿಎಂಪಿ ಎಚ್ಚೆತ್ತುಕೊಂಡಿದ್ದು, ಬಾಗಲೂರಿನ ಕ್ವಾರಿಯಲ್ಲಿನ ತ್ಯಾಜ್ಯವನ್ನು ಬಯೋ-ಮೈನಿಂಗ್‌ ಮಾಡಲು ಬೇಕಾದ ಸಿದ್ಧತೆ ಮಾಡಿಕೊಂಡಿದೆ. ಯಲಹಂಕದ ಬಾಗಲೂರು ಬಳಿಯ 12 ಎಕರೆ ಪ್ರದೇಶದಲ್ಲಿ ಎರಡು ಕ್ವಾರಿಗಳನ್ನು ಆಯ್ಕೆ ಮಾಡಿಕೊಂಡು ಬಿಬಿಎಂಪಿ ಮಿಶ್ರ ತ್ಯಾಜ್ಯ ವಿಲೇವಾರಿ ಮಾಡಿತ್ತು.

Advertisement

ಇದನ್ನು ಅಭಿವೃದ್ಧಿ ಪಡಿಸಲು ಸರ್ಕಾರ 16 ಕೋಟಿ ರೂ. ಅನುದಾನ ನೀಡಿತ್ತು. ಒಂದು ಕ್ವಾರಿಯನ್ನು ಬಿಬಿಎಂಪಿ ಈಗಾಗಲೇ ವೈಜ್ಞಾನಿಕವಾಗಿ ಮುಚ್ಚಿದ್ದು, ಉದ್ಯಾನವನವಾಗಿ ಅಭಿವೃದ್ಧಿಪಡಿಸಿದೆ. ಈಗ ಇನ್ನೊಂದು ಕ್ವಾರಿಯಲ್ಲಿನ ತ್ಯಾಜ್ಯ ತೆಗೆದು ಬಯೋ-ಮೈನಿಂಗ್‌ (ಕಸವನ್ನು ಹೊರಕ್ಕೆ ತೆಗೆದು ಅದರಲ್ಲಿರುವ ಪ್ಲಾಸ್ಟಿಕ್‌ ನಂತಹ ಕರಗದ ತ್ಯಾಜ್ಯವನ್ನು ಬೇರ್ಪಡಿಸಿ ಉಳಿದ ತ್ಯಾಜ್ಯವನ್ನು ಕಾಂಪೋಸ್ಟ್‌) ಮಾಡುವಂತೆ ಎನ್‌ಜಿಟಿ ಬಿಬಿಎಂಪಿಗೆ ಆದೇಶ ಮಾಡಿದೆ.

ಬಾಗಲೂರು ಕ್ವಾರಿಯಲ್ಲಿ ಸುರಿದಿರುವ ಮಿಶ್ರ ತ್ಯಾಜ್ಯವನ್ನು ಮತ್ತೆ ತೆಗೆದು ಬಯೋ-ಮೈನಿಂಗ್‌ ಮಾಡುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಕಳೆದ ವರ್ಷ ಆದೇಶ ಮಾಡಿತ್ತು. ಇದು ಸವಾಲಿನ ಕೆಲಸ, ತ್ಯಾಜ್ಯ ತೇವಾಂಶದಿಂದ ಕೂಡಿದೆ ಎಂದು ಬಿಬಿಎಂಪಿ ವಾದಮಾಡಿತ್ತು. ಈ ನಡುವೆ ಬಿಬಿಎಂಪಿಯ ಉದಾಸೀನ ನಡೆಯನ್ನು ಗಂಭೀರವಾಗಿ ಪರಿಗಣಿಸಿದ ಎನ್‌ಜಿಟಿಯು 5 ಕೋಟಿ ರೂ. ದಂಡ ವಿಧಿಸಿತ್ತು. ಹೀಗಾಗಿ, ಒಲ್ಲದ ಮನಸ್ಸಿನಿಂದಲೇ ಬಯೋ-ಮೈನಿಂಗ್‌ ಮಾಡಲು ಪಾಲಿಕೆ ಮುಂದಾಗಿದೆ.

15 ಸಾವಿರ ಟನ್‌ ಬಯೋಮೈನಿಂಗ್‌: “ಹಂತ ಹಂತವಾಗಿ ಬಾಗಲೂರು ಕ್ವಾರಿಯಲ್ಲಿರುವ ತ್ಯಾಜ್ಯವನ್ನು ತೆಗೆದು ಬಯೋಮೈನಿಂಗ್‌ ಮಾಡಲಾಗುತ್ತಿದೆ. ಕ್ವಾರಿಯಲ್ಲಿರು ತ್ಯಾಜ್ಯವನ್ನು ತೆಗೆದು ಒಣಗಿಸಿ ಬಯೋಮೈನಿಂಗ್‌ ಮಾಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಬಾಗಲೂರಿನ ಕ್ವಾರಿಯಲ್ಲಿ ಅಂದಾಜು 90 ಸಾವಿರ ಮಿಶ್ರತ್ಯಾಜ್ಯವಿದ್ದು, ಇಲ್ಲಿಯವರೆಗೆ 15 ಸಾವಿರ ಮೆಟ್ರಿಕ್‌ ಟನ್‌ ತ್ಯಾಜ್ಯವನ್ನು ಬಯೋ-ಮೈನಿಂಗ್‌ ಮಾಡಲಾಗಿದೆ’ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಒಂದು ಟನ್‌ ಬಯೋ-ಮೈನಿಂಗ್‌ ಸಹ ಮಾಡಿಲ್ಲ!: ಬಾಗಲೂರಿನಲ್ಲಿ 15 ಸಾವಿರ ಮೆಟ್ರಿಕ್‌ ಟನ್‌ ಬಯೋಮೈನಿಂಗ್‌ ಮಾಡಲಾಗಿದೆ ಎಂದು ಎನ್‌ಜಿಟಿಗೆ ಬಿಬಿಎಂಪಿ ಸುಳ್ಳು ಮಾಹಿತಿ ನೀಡಿದೆ. ವಾಸ್ತವದಲ್ಲಿ ಒಂದೇ ಒಂದು ಟನ್‌ ತ್ಯಾಜ್ಯವನ್ನೂ ಬಯೋಮೈನಿಂಗ್‌ ಮಾಡಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಘನತ್ಯಾಜ್ಯ ನಿರ್ವಹಣೆ ತಜ್ಞರು ಆರೋಪಿಸುತ್ತಾರೆ. ಬಯೋಮೈನಿಂಗ್‌ ಮಾಡಿದ್ದರೆ ಬಾಗಲೂರು ಕ್ವಾರಿ ಪ್ರದೇಶ ಸ್ವಲ್ಪವಾದರೂ ಖಾಲಿಯಾಗಿರಬೇಕಿತ್ತು. ಮೈನಿಂಗ್‌ ನಂತರ ಪ್ಲಾಸ್ಟಿಕ್‌ ತ್ಯಾಜ್ಯ ಮತ್ತು ಕಾಂಪೋಸ್ಟ್‌ ಮಾಡಿದ ಗೊಬ್ಬರವನ್ನು ಯಾರಿಗೆ ನೀಡಿದ್ದಾರೆ ಎನ್ನುವುದನ್ನು ಬಹಿಂಗಪಡಿಸಲಿ. ಹಾಗೇ ಎಲ್ಲಿ ಬಯೋಮೈನಿಂಗ್‌ ಮಾಡಿದ್ದಾರೆ ಎನ್ನುವುದನ್ನೂ ತಿಳಿಸಿದರೆ ವಾಸ್ತವ ತಿಳಿಯಲಿದೆ ಎಂದು ಅವರು ಹೇಳುತ್ತಾರೆ.

Advertisement

ತಪ್ಪು ತಿದ್ದಿಕೊಳ್ಳಲು ಅವಕಾಶ: ಮಿಶ್ರತ್ಯಾಜ್ಯವನ್ನು ಕ್ವಾರಿಗಳಲ್ಲಿ ಸುರಿದಿರುವುದರಿಂದ ತ್ಯಾಜ್ಯದಲ್ಲಿನ ಲಿಚೇಡ್‌ (ಕಲುಷಿತ) ನೀರು ಆ ಪ್ರದೇಶದ ಅಂತರ್ಜಲಕ್ಕೆ 25ರಿಂದ 30 ವರ್ಷದವರೆಗೆ ನಿರಂತರವಾಗಿ ಸೇರುತ್ತಿರುತ್ತದೆ. ಈಗ ಅಲ್ಲಿನ ತ್ಯಾಜ್ಯವನ್ನು ತೆಗೆದು ಬಯೋ-ಮೈನಿಂಗ್‌ ಮಾಡಲು ಮುಂದಾಗಿರುವುದು ಉತ್ತಮ ನಡೆ. ಇದರಿಂದ ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ಸಿಕ್ಕಿದೆ ಎನ್ನುತ್ತಾರೆ ಪ್ರೊ.ಟಿ.ವಿ ರಾಮಚಂದ್ರ, ವಿಜ್ಞಾನಿ, ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ).

ಈ ಕ್ವಾರಿಯಲ್ಲಿ ಇ-ತ್ಯಾಜ್ಯವೂ ಸೇರಿರುವ ಸಾಧ್ಯತೆ ಇರುವುದರಿಂದ ಇಲ್ಲಿನ ಮಣ್ಣನ್ನು ಮತ್ತು ಬಯೋ-ಮೈನಿಂಗ್‌ ಮಾಡಿದ ನಂತರ ಉತ್ಪತ್ತಿಯಾಗುವ ಗೊಬ್ಬರವನ್ನು ಪರೀಕ್ಷಿಸಿದ ನಂತರ ರೈತರಿಗೆ ಹಸ್ತಾಂತರಿಸಬೇಕು. ಇಲ್ಲಿದಿದ್ದರೆ ರಾಸಾಯಿನಿಕ ಅಂಶಗಳು ಆಹಾರ ಸರಪಳಿಯನ್ನು ಸೇರಿಕೊಳ್ಳುವ ಸಾಧ್ಯತೆ ಇದೆ ಎಂದೂ ಅವರು ಎಚ್ಚರಿಸುತ್ತಾರೆ.

ಬಾಗಲೂರಿನ‌ಲ್ಲಿ ವಾಸ್ತವವಾಗಿ ಆಗಿರುವುದೇನು?: ಬಾಗಲೂರಿನ ಕ್ವಾರಿಯಲ್ಲಿನ ತ್ಯಾಜ್ಯವನ್ನು ಹೊರಕ್ಕೆ ತೆಗೆದು ಹೊಲ ಹೂಳುವ ರೀತಿಯಲ್ಲಿ ತ್ಯಾಜ್ಯವನ್ನು ಮೇಲಕ್ಕೆ ಎತ್ತಲಾಗಿದೆ. ಮೂರರಿಂದ ಐದು ಅಡಿಯವರೆಗೆ ತ್ಯಾಜ್ಯವನ್ನು ಎತ್ತಲಾಗಿದೆ. ಆದರೆ, ಇಲ್ಲಿನ ತ್ಯಾಜ್ವವನ್ನು ಬೇರೆಡೆ ಸಾಗಿಸಿರುವ ಕುರುಹು ಕಾಣಿಸುವುದಿಲ್ಲ. ಅಲ್ಲದೆ ಕ್ವಾರಿಯ ಪಕ್ಕದಲ್ಲಿನ ತ್ಯಾಜ್ಯಕ್ಕೆ ಬೆಂಕಿ ಹಾಕಲಾಗಿದೆ. “ಇಲ್ಲಿಂದ ತ್ಯಾಜ್ಯವನ್ನು ಬೇರೆಡೆಗೆ ಸಾಗಿಸಿದ್ದು ಒಮ್ಮೆಯೂ ನೋಡಿಲ್ಲ. ಒಂದೆರಡು ಬಾರಿ ಅಲ್ಲಿನ ತ್ಯಾಜ್ಯವನ್ನು ಮೇಲಕ್ಕೆ ಎತ್ತಿದ್ದಾರಷ್ಟೇ’ ಎಂದು ಸ್ಥಳೀಯ ನಿವಾಸಿ ರಾಮಚಂದ್ರಪ್ಪ ಅವರು ವಿವರಿಸುತ್ತಾರೆ.

ಮಿಶ್ರತ್ಯಾಜ್ಯವನ್ನು ಕ್ವಾರಿಯಲ್ಲಿ ಸುರಿಯುತ್ತಿರುವುದು ಹಲವು ಸಮಸ್ಯೆಗಳಿಗೆ ಎಡೆಮಾಡಿಕೊಟ್ಟಿದೆ. ಇದಕ್ಕೆ ಬಿಬಿಎಂಪಿ ಹಗೂ ಬೆಂಗಳೂರಿನ ಎಲ್ಲಾ ನಾಗರಿಕರೂ ಹೊಣೆ. ಮುಂದಿನ ದಿನಗಳಲ್ಲಾದರೂ ಕ್ವಾರಿಗಳಲ್ಲಿ ತ್ಯಾಜ್ಯ ಸುರಿಯುವುದು ನಿಲ್ಲಿಸಬೇಕು.
-ನಳಿನಿ ಶೇಖರ್‌, ಹಸಿರುದಳ ಸಹ ಸಂಸ್ಥಾಪಕಿ

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next