ಬೆಂಗಳೂರು: ರಾಷ್ಟ್ರ ರಾಜಕಾರಣದಲ್ಲಿ ಮುತ್ಸದ್ದಿ ಎಂದೇ ಬಿಂಬಿತವಾಗಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಜೀವನಚರಿತ್ರೆ ಸಿದ್ಧವಾಗಿದ್ದರೂ ಬಿಡು ಗಡೆ “ಭಾಗ್ಯ’ ದೊರೆಯುತ್ತಿಲ್ಲ. ಬದಲಾಣೆ ರಾಜಕೀಯ ಪರಿಸ್ಥಿತಿ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆ ಮುಗಿದ
ನಂತರವಷ್ಟೇ ಬಿಡುಗಡೆ ಕಾಣಬಹುದು.
ಈಗಿನ ಸನ್ನಿವೇಶದಲ್ಲಿ ಜೀವನಚರಿತ್ರೆ ಬಿಡುಗಡೆಯಾದರೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಬಿಡುಗಡೆಗೆ ಗೌಡರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಹಲವಾರು ನಾಯಕರ ವಿಚಾರಗಳೂ ಜೀವನ ಚರಿತ್ರೆಯಲ್ಲಿ ದಾಖಲಾಗಿರುವುದರಿಂದ ಈಗಿನ ಸನ್ನಿವೇಶದಲ್ಲಿ ಬಿಡುಗಡೆ ಬೇಡ ಎಂಬ ತೀರ್ಮಾನಕ್ಕೆ ಬರಲಾಗಿದೆ.
ಏನೇನಿದೆ?: ಗೌಡರ ಜೀವ ನ ಚರಿತ್ರೆಯಲ್ಲಿ ಇರುವ ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ, ಜೆ.ಎಚ್.ಪಟೇಲ್, ಸಿದ್ದರಾಮಯ್ಯ ಅವರೊಂದಿಗಿನ ಸ್ನೇಹ ಹಾಗೂ ಮುನಿಸು ಸಂಬಂಧಿತ ನೈಜ ಘಟನೆಗಳ ಮಾಹಿತಿ. ಅದೇ ರೀತಿ ದೇವರಾಜ ಅರಸು, ವೀರೇಂದ್ರ ಪಾಟೀಲ್, ಗುಂಡೂರಾವ್ ಅವರೊಂದಿಗಿದ್ದ ಸ್ನೇಹ ಅದಕ್ಕೆ ರಾಜಕೀಯವಾಗಿ ಕೇಳಿ ಬಂದ ಟೀಕೆಗಳು, ಆರೋಪಗಳು ಒಳಗೊಂಡಿದೆ.
ಮೂಲತಃ ಕಾಂಗ್ರೆಸ್ಸಿಗರಾಗಿ ರಾಜಕೀಯ ಪ್ರಾರಂಭಿಸಿ ನಂತರ ಕಾಂಗ್ರೆಸ್ ವಿರುದ್ಧವೇ ರಾಜಕಾರಣ ಮಾಡಿದ್ದು, ಜನತಾಪಕ್ಷ, ಜನತಾದಳ, ಆ ನಂತರ ಜೆಡಿಎಸ್ ಸಂಘಟಿಸಿದ್ದು ಮತ್ತು ಅದಕ್ಕಾಗಿ ಪಟ್ಟ ಶ್ರಮ ಎಳೆ ಎಳೆಯಾಗಿ ವಿವರಿಸಲಾಗಿದೆ. 1977ರಲ್ಲಿ ದೇವೇಗೌಡರಿಗೆ ಆದ ನೋವು, ವಿಧಾನಸಭೆ ಚುನಾವಣೆಗೆ ಸಂಸದೀಯ ಮಂಡಳಿ ಸಿದ್ಧಪಡಿಸಿದ್ದ ಪಟ್ಟಿಯನ್ನು ರಾತ್ರೋರಾತ್ರಿ ಬದಲಾಯಿಸಿದ್ದು, ಅದರಿಂದ ಟಿಕೆಟ್ ಆಕಾಂಕ್ಷಿಗಳು ಗೌಡರ ಮೇಲೆ
ಮುಗಿಬಿದ್ದು ಹೀನಾಯವಾಗಿ ತೆಗಳಿ ಟಿಕೆಟ್ ಮಾರಿಕೊಂಡ ಎಂದು ಹೇಳಿದ್ದು, ಗೌಡರು ಕಣ್ಣೀರು ಹಾಕಿದ್ದು ಜೀವನ ಚರಿತ್ರೆಯಲ್ಲಿ ಉಲ್ಲೇಖವಿದೆ.
ನನ್ನ ಸ್ವಂತ ಮಕ್ಕಳು ಸೇರಿದಂತೆ ರಾಜಕಾರಣ ದಲ್ಲಿ ಕಲ್ಲು-ಮುಳ್ಳಿನ ಹಾದಿ ದಾಟಿ ಎಲ್ಲವನ್ನೂ ಮೀರಿ ಬೆಳೆಯುವುದು ಕಷ್ಟ. ಇದೆಲ್ಲವೂ ನನ್ನ ಆತ್ಮಕಥೆಯಲ್ಲಿ ಇರಲಿದೆ. ಓದಿದವರು ಅನುಸರಿಸಿದರೆ ಸಂತೋಷ. ಯಾವ ರಾಜಕಾರಣಿಗೂ ನಾನು ನಡೆದುಕೊಂಡು ಬಂದಂತೆ ಕಲ್ಲು-ಮುಳ್ಳು ತುಳಿದುಕೊಂಡು ಮುನ್ನುಗ್ಗಲು ಸಾಧ್ಯವಿಲ್ಲ.
● ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ