ಕನ್ನಡದಲ್ಲಿ ಈಗ ಒಂದಷ್ಟು ಪರಿಸರದ ಕುರಿತಾದ ಸಿನಿಮಾಗಳು ಬರುತ್ತಿವೆ. ಕಮರ್ಷಿಯಲ್ ಸಿನಿಮಾಗಳ ಅಬ್ಬರದ ನಡುವೆಯೇ ಈ ತರಹದ ಸಿನಿಮಾಗಳು ತಮ್ಮದೇ ಆದ ರೀತಿಯಲ್ಲಿ ಆಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ “ಸೂರ್ಯ ಇವ ವೃಕ್ಷಮಿತ್ರ’. ಹೆಸರಿಗೆ ತಕ್ಕಂತೆ ಇದು ಪರಿಸರದ ಕಾಳಜಿ ಕುರಿತ ಸಿನಿಮಾ. ಈ ಚಿತ್ರವನ್ನು ಹಿರಿಯ ನಿರ್ದೇಶಕ ಅಣ್ಣಯ್ಯ ನಿರ್ದೇಶಿಸಿದ್ದಾರೆ.
“ಅಕ್ಟೋಪಸ್’ ಸಿನಿಮಾ ಮಾಡಿದ ನಂತರ ಯಾವ ತರಹದ ಸಿನಿಮಾ ಮಾಡೋದೆಂದು ಅಣ್ಣಯ್ಯ ಯೋಚಿಸುತ್ತಿದ್ದಾಗ ಹೊಳೆದಿದ್ದು ಈ ಸಿನಿಮಾ. ಈ ಚಿತ್ರವನ್ನು ಫಾತಿಮಾ ನಿರ್ಮಿಸಿದ್ದಾರೆ. “ಸೂರ್ಯ ಇವ ವೃಕ್ಷಮಿತ್ರ’ ಮೂಲಕ ಅವರ ಪುತ್ರ ಸಲ್ಮಾನ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಮೊದಲು ಅಣ್ಣಯ್ಯ ಅವರು ಫಾತಿಮಾ ಅವರಿಗೆ ಬೇರೊಂದು ಕಥೆ ಹೇಳಿದರಂತೆ.
ಆದರೆ, ಅವರಿಗೆ ಆ ಕಥೆ ಇಷ್ಟವಾಗದೇ, ಪರಿಸರ ಕುರಿತಾದ ಹೊಸ ಬಗೆಯ ಸಿನಿಮಾ ಮಾಡೋಣ ಎಂದರಂತೆ. ಆಗ ಅಣ್ಣಯ್ಯ ನೇರವಾಗಿ ಹೋಗಿದ್ದ ಪರಿಸರ ಹೋರಾಟಗಾರ ಡಾ. ಯಲ್ಲಪ್ಪ ರೆಡ್ಡಿ ಅವರ ಬಳಿ. ಅವರಲ್ಲಿ ಪರಿಸರದ ಕುರಿತಾಗಿ ಸಿನಿಮಾ ಮಾಡಬೇಕೆಂದು ಮಾತುಕತೆ ನಡೆಸಿದಾಗ, ಅವರು “ಲೈಫ್ ಬಿಯಾಂಡ್ ಸೈನ್ಸ್’ ಎಂಬ ಕಾದಂಬರಿಯನ್ನು ಅಣ್ಣಯ್ಯ ಕೈಗಿಡುತ್ತಾರೆ. ಇದು ಯಲ್ಲಪ್ಪ ರೆಡ್ಡಿಯವರು ಬರೆದ ಕಾದಂಬರಿ.
ಆ ಕಾದಂಬರಿ ಅಣ್ಣಯ್ಯ ಅವರಿಗೆ ಇಷ್ಟವಾಗಿ ಸಿನಿಮಾ ಮಾಡಲು ಮುಂದಾಗುತ್ತಾರೆ. ಈ ವೇಳೆ ಚಿತ್ರಕಥೆಯಲ್ಲಿ ಹಿರಿಯ ಪತ್ರಕರ್ತರಾದ ನಾಗೇಶ್ ಹೆಗಡೆ, ಜೆ.ಎಂ. ಪ್ರಹ್ಲಾದ್ ಅವರ ನೆರವು ಪಡೆದು ಕಥೆಗೆ ಅಂತಿಮ ರೂಪ ಕೊಟ್ಟಿದ್ದಾರೆ. ನಾಯಕ ತನ್ನ ಸಂಶೋಧನೆಯಿಂದ ಮರವೊಂದರ ಬೀಜದಿಂದ ಪೆಟ್ರೋಲ್, ಡಿಸೇಲ್ ಅನ್ನು ಉತ್ಪಾದಿಸಬಹುದು ಹಾಗೂ ಈ ಮೂಲಕ ಪರಿಸರ ಹಾನಿಯನ್ನು ಕಡಿಮೆ ಮಾಡಬಹುದೆಂಬುದನ್ನು ಕಂಡು ಹಿಡಿಯುತ್ತಾನೆ.
ಈ ವೇಳೆ ನಾಯಕನಿಗೆ ಅಡ್ಡಬರುವ ಪೆಟ್ರೋಲಿಯಂ ಕಂಪೆನಿಗಳು ಮತ್ತು ಅದು ಕೊಡುವ ತೊಂದರೆಗಳ ಸುತ್ತ ಈ ಸಿನಿಮಾ ಸಾಗುತ್ತದೆಯಂತೆ. ಅಂತಿಮವಾಗಿ ಈ ಚಿತ್ರದಲ್ಲಿ ಮುಂದಿನ ದಿನಗಳಲ್ಲಿ ಪರಿಸರ ಉಳಿಸಬೇಕಾದರೆ ಜೈವಿಕ ಇಂಧನಗಳನ್ನು ಬಳಸಬೇಕು ಈ ಮೂಲಕ ಗ್ಲೋಬಲ್ ವಾರ್ಮಿಂಗ್ ಅನ್ನು ತಪ್ಪಿಸಬೇಕು ಎಂಬುದನ್ನು ಹೇಳಲು ಹೊರಟಿದ್ದಾರಂತೆ.
“ಚಿತ್ರ ಪ್ರಸ್ತುತ ಪರಿಸ್ಥಿತಿಗೆ ಹೆಚ್ಚು ಸೂಕ್ತವಾಗಿದೆ. ಪರಿಸರ ನಾಶದಿಂದ, ಮನುಷ್ಯ ಉಸಿರಾಡೋದು ಕಷ್ಟವಾಗಿದೆ. ಮುಂದಿನ ದಿನಗಳಲ್ಲಿ ನಾವು ಪರಿಸರ ಉಳಿಸಿ ಬೆಳೆಸದಿದ್ದರೆ ಅದರ ತೊಂದರೆಯನ್ನು ನಾವು ಅನುಭವಿಸಬೇಕಾಗುತ್ತದೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ. ನಿರ್ಮಾಪಕರು ಕೂಡಾ ಪರಿಸರ ಪ್ರಿಯರಾದ್ದರಿಂದ ಈ ಕಥೆಯನ್ನು ತುಂಬಾ ಇಷ್ಟಪಟ್ಟು ಮಾಡಿದ್ದಾರೆ’ ಎನ್ನುವುದು ನಿರ್ದೇಶಕ ಅಣ್ಣಯ್ಯ ಮಾತು.