ಬೆಂಗಳೂರು: ನಗರದ ಕೆರೆ, ಉದ್ಯಾನ ಹಾಗೂ ಖಾಲಿ ಜಾಗಗಗಳಲ್ಲಿನ ಜೀವ ವೈವಿಧ್ಯತೆಯನ್ನು (ವಿವಿಧ ಪ್ರಭೇದದ ಪಕ್ಷಿಗಳು, ಸಸಿಗಳು ಹಾಗೂ ಜೀವ ಸಂಕುಲ) ಗುರುತಿಸಲು ಪಾಲಿಕೆ ಮುಂದಾಗಿದೆ. ಇತ್ತೀಚೆಗೆ ಬಿಬಿಎಂಪಿಯ ಅಧಿಕಾರಿಗಳು ಹಾಗೂ ಜೀವವೈವಿಧ್ಯ ನಿರ್ವಹಣಾ ಸಮಿತಿ ಸದಸ್ಯರು ಆನ್‌ಲೈನ್ ಸಭೆ ನಡೆಸಿದ್ದು, ಈ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಇವುಗಳಲ್ಲಿ ಮುಖ್ಯವಾಗಿ ನಗರದಲ್ಲಿರುವ ದೇಶ ಹಾಗೂ ವಿದೇಶದ ಪಕ್ಷಿ ಸಂಕುಲ ಹಾಗೂ ವಿವಿಧ ಜಾತಿಯ ಸಸಿಗಳನ್ನು ಗುರುತಿಸಿ ದಾಖಲು ಮಾಡುವುದು ಮತ್ತು ನಿರ್ದಿಷ್ಟ ಪ್ರದೇಶವನ್ನು ಜೀವವೈವಿಧ್ಯ ಪಾರಂಪರಿಕ ತಾಣ ಎಂದು ಘೋಷಿಸಲು ತೀರ್ಮಾನಿಸಲಾಗಿದೆ.
ಜೆಪಿ ಪಾರ್ಕ್ ಜೀವವೈವಿಧ್ಯ ಪಾರಂಪರಿಕ ತಾಣ: ನಗರದಲ್ಲಿ ಲಾಲ್‌ಬಾಗ್ ಹಾಗೂ ಕಬ್ಬನ್‌ಪಾರ್ಕ್‌ನ ನಂತರದಲ್ಲಿ ಜೆಪಿ ಪಾರ್ಕ್ ಸಹ ತನ್ನದೇ ಆದ ವಿಶೇಷತೆ ಹೊಂದಿದೆ. ಉತ್ತರ ಬೆಂಗಳೂರಿನಲ್ಲೇ ಅತೀ ದೊಡ್ಡ ಪಾರ್ಕ್ ಎಂಬ ಖ್ಯಾತಿಯೂ ಇದಕ್ಕಿದೆ. 250ಕ್ಕೂ ಹೆಚ್ಚು ಪ್ರಭೇದದ ಮರಗಳು ಹಾಗೂ ವಲಸೆ ಪಕ್ಷಿಗಳು ಸಹ ಇಲ್ಲಿನ ಪಾರ್ಕ್ ವ್ಯಾಪ್ತಿಯ ಕೆರೆಗೆ ಬರುತ್ತವೆ. ಹೀಗಾಗಿ, ಜೆಪಿ ಪಾರ್ಕ್‌ಅನ್ನು ಜೀವ ವೈವಿಧ್ಯತಾಣ ಎಂದು ಘೋಷಿಸಲು ನಿರ್ಧರಿಸಲಾಗಿದೆ. ಈ ಮೂಲಕ ನಗರದ ಅತೀ ದೊಡ್ಡ ಪಾರ್ಕ್ ಒಂದರಲ್ಲಿನ ವಿಶೇಷ ವೈವಿಧ್ಯ ಪ್ರಭೇದಗಳನ್ನು ಮೊದಲ ಹಂತದಲ್ಲಿ ಗುರುತಿಸಿ ಸಂರಕ್ಷಣೆ ಮಾಡುವ ಕೆಲಸ ಇಷ್ಟರಲ್ಲೇ ಪ್ರಾರಂಭವಾಗಲಿದೆ.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಹಸಿರೀಕರಣ: ಬೆಂಗಳೂರು ಸ್ಮಾರ್ಟ್ ಸಿಟಿಗೆ ಸೇರ್ಪಡೆ ಯಾದಾಗಿನಿಂದಲೂ ಒಂದಿಲ್ಲೊಂದು ವಿಶೇಷ ಯೋಜನೆಗಳನ್ನು ರೂಪಿಸಿಕೊಳ್ಳಲಾಗು ತ್ತಿದೆ. ಸ್ಮಾರ್ಟ್ ಸಿಟಿ ವಿವಿಧ ಕಾಮಾಗಾರಿಗಳಿಂದ ನಗರದ ಜೀವವೈವಿಧ್ಯತೆಯ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ತಜ್ಞರೊಂದಿಗೆ ಚರ್ಚೆ ಮಾಡಿ ಹಸಿರು ಪಟ್ಟಿಯನ್ನು ಸಿದಪಡಿಸಿಕೊಳ್ಳಲು ನಿರ್ಧರಿಸಲಾಗಿದೆ.
ಇನ್ನು ಉಳಿದಂತೆ ಜೀವವೈವಿಧ್ಯ ದಾಖಲಾತಿ ಯನ್ನು ಶೀಘ್ರ ಪೂರ್ಣ ಗೊಳಿಸುವುದು, ಬಿಬಿಎಂಪಿ ವ್ಯಾಪ್ತಿಯಲ್ಲಿ 1,400 ಸಾವಿರ ಉದ್ಯಾನಗಳಿಲ್ಲಿ ಮತ್ತಷ್ಟು ಸಸ್ಯ ಪ್ರಭೇದ ಅಭಿವೃದಿಪಡಿಸುವುದು, ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಜೀವ ವೈವಿಧ್ಯತೆ ಗುರುತಿಸುವ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳುವುದು ಹಾಗೂ ಅವರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿಕೊಳ್ಳಲಾಗಿದೆ. ನಗರದಲ್ಲಿನ ಕೆರೆ ಭಾಗದಲ್ಲಿ ಜೀವ ಸಂಕುಲದ ಸಂರಕ್ಷಣೆ, ವರ್ಷಕ್ಕೆ ಅಂದಾಜು ಒಂದು ಕೋಟಿ ಸಸಿ ಬೆಳೆಸುವುದು ಹಾಗೂ ಸಾರ್ವಜನಿಕರಲ್ಲಿ ಜೀವವೈವಿಧ್ಯತೆಯ ಬಗ್ಗೆ ಅರಿವು ಮೂಡಿಸಲು ಸಮಿತಿ ಮುಂದಾಗಿದೆ.
ಏನಿದು ಜೀವವೈವಿಧ್ಯ ನಿರ್ವಹಣಾ ಸಮಿತಿ: ಕರ್ನಾಟಕದಲ್ಲಿ ಮೊದಲ ಬಾರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಜೀವ ವೈವಿಧ್ಯತೆ ಪ್ರಭೇಧ ಸ್ಥಳಗಳ ಸಂರಕ್ಷಣೆ ದೃಷ್ಟಿಯಿಂದ ಐವರು ಸದಸ್ಯರ ಸಮಿತಿಯನ್ನು ಈ ವರ್ಷ ಜನವರಿಯಲ್ಲಿ ರಚನೆ ಮಾಡಿತ್ತು. ಬಿಬಿಎಂಪಿ ಮೇಯರ್ ಸಮಿತಿಯ ಅಧ್ಯಕ್ಷರಾಗಿದ್ದು, ಬಿಬಿಎಂಪಿ ಆಯುಕ್ತರು ಸದಸ್ಯ ಕಾರ್ಯದರ್ಶಿಗಳಾಗಿದ್ದಾರೆ. ನಗರದಲ್ಲಿ ಯಾವ ಪ್ರಭೇದದ ಸಸಿಗಳನ್ನು ಬೆಳೆಸಬಹುದು. ಸಸ್ಯ ಮತ್ತು ಪ್ರಾಣಿ ಸಂಕುಲಕ್ಕೆ ಹಾನಿ ಉಂಟಾಗದಂತೆ ಯಾವ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಬಗ್ಗೆ ಸಮಿತಿ ಸಲಹೆ ನೀಡುತ್ತಿದೆ.
ನಗರದ ವಿವಿಧ ಭಾಗದಲ್ಲಿ ವಿವಿಧ ಪ್ರಭೇದದ ಪಕ್ಷಿಗಳು ಹಾಗೂ ಸಸಿಗಳು ಇವೆ. ಇವುಗಳನ್ನು ಮೊದಲ ಹಂತದಲ್ಲಿ ಗುರುತಿಸಿ, ಎರಡನೇ ಹಂತದಲ್ಲಿ ಸಂರಕ್ಷಣೆ ಮಾಡಲು ಮುಂದಾಗಿದ್ದೇವೆ.
-ಎಚ್.ಎಸ್. ರಂಗನಾಥ ಸ್ವಾಮಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಬಿಬಿಎಂಪಿ