Advertisement

ಮೋದಿ ಪ್ರಮಾಣಕ್ಕೆ ಬಂದ ಬಿಮ್‌ಸ್ಟಿಕ್‌ ನಾಯಕರು

10:42 PM May 30, 2019 | Lakshmi GovindaRaj |

2014ರಲ್ಲಿ ಮೋದಿ ಮೊದಲ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವಾಗ ಸಾರ್ಕ್‌ ರಾಷ್ಟ್ರಗಳನ್ನು ಆಹ್ವಾನಿಸಲಾಗಿತ್ತು. 2019ರಲ್ಲಿ ಮತ್ತೆ ಪ್ರಧಾನಿಯಾಗಿರುವ ಮೋದಿ, ತಮ್ಮ ಪ್ರಮಾಣವಚನಕ್ಕೆ ಬಿಮ್‌ಸ್ಟೆಕ್‌ ರಾಷ್ಟ್ರಗಳ ನೇತಾರರನ್ನು ಆಹ್ವಾನಿಸಿದ್ದಾರೆ. ಇದು ನೆರೆಹೊರೆಯ ದೇಶಗಳೊಂದಿಗೆ ಸ್ನೇಹ ಸಾಧಿಸಿ, ಏಷ್ಯಾಮಟ್ಟದಲ್ಲಿ ಭಾರತವನ್ನು ಪ್ರಭಾವಿಯಾಗಿ ಬಿಂಬಿಸುವ ಯತ್ನ ಎಂದು ವಿಶ್ಲೇಷಿಸಲಾಗಿದೆ. ಮೋದಿ ಪ್ರಮಾಣವಚನಕ್ಕೆ ಆಗಮಿಸಿದ ವಿದೇಶ ರಾಷ್ಟ್ರಗಳ ಸರ್ಕಾರಿ ಮುಖ್ಯಸ್ಥರ ಪರಿಚಯ ಇಲ್ಲಿದೆ…

Advertisement

ಮೊಹಮ್ಮದ್‌ ಅಬ್ದುಲ್‌ ಹಮೀದ್‌: ಬಾಂಗ್ಲಾ ಅಧ್ಯಕ್ಷ
75 ವರ್ಷದ ಹಮೀದ್‌ 2013ರಲ್ಲಿ ಮೊದಲ ಬಾರಿಗೆ ಬಾಂಗ್ಲಾ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. 2009ರಿಂದ 2013ರವರೆಗೆ ಬಾಂಗ್ಲಾ ಸ್ಪೀಕರ್‌ ಆಗಿ ಕಾರ್ಯನಿರ್ವಹಿಸಿದ್ದರು. 2018ರಲ್ಲಿ ಮತ್ತೂಮ್ಮೆ ಅಧ್ಯಕ್ಷ ಸ್ಥಾನ್ಕಕ್ಕೇರಿದ್ದರು. ಈ ಬಾರಿ ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾರ ಪ್ರತಿನಿಧಿಯಾಗಿ, ಮೋದಿ ಪ್ರಮಾಣವಚನಕ್ಕೆ ಹಮೀದ್‌ ಆಗಮಿಸಿದ್ದಾರೆ.
2014ರ ಅತಿಥಿ: ಶಿರಿನ್‌ ಶರ್ಮಿನ್‌ ಚೌಧರಿ, ಬಾಂಗ್ಲಾ ಸ್ಪೀಕರ್‌

ಖಡ್ಗ ಪ್ರಸಾದ್‌ ಶರ್ಮ ಒಲಿ: ನೇಪಾಳ ಪ್ರಧಾನಮಂತ್ರಿ
ನೇಪಾಳಿ ಕಮ್ಯುನಿಷ್ಟ್ ಪಕ್ಷದ ಅಧ್ಯಕ್ಷ ಖಡ್ಗ ಪ್ರಸಾದ್‌ ಶರ್ಮ ಒಲಿ (67) ಈಗ ನೇಪಾಳದ ಪ್ರಧಾನಿ. ಈ ಹಿಂದೆ 2015 ಅಕ್ಟೋಬರ್‌ನಿಂದ 2016 ಆಗಸ್ಟ್‌ವರೆಗೆ ಅವರು ಪ್ರಧಾನಿಯಾಗಿದ್ದಾಗ, ಅವರ ಮತ್ತು ಭಾರತದ ನಡುವಿನ ಸಂಬಂಧ ಹದಗೆಟ್ಟಿತ್ತು. ನೇಪಾಳದಲ್ಲಿ ಅಂದು ನಡೆಯುತ್ತಿದ್ದ ಬಂದ್‌ ಈ ವೈಮನಸ್ಯಕ್ಕೆ ಕಾರಣವಾಗಿತ್ತು. 2018ರಲ್ಲಿ ಅವರು ಮತ್ತೆ ಪ್ರಧಾನಿಯಾದ ನಂತರ ಪರಿಸ್ಥಿತಿ ಸುಧಾರಿಸಿದೆ.
2014ರ ಅತಿಥಿ: ಪ್ರಧಾನಿ ಸುಶೀಲ್‌ ಕೊಯಿರಾಲ

ಮೈತ್ರಿಪಾಲ ಸಿರಿಸೇನಾ: ಶ್ರೀಲಂಕಾ ಅಧ್ಯಕ್ಷ
67 ವರ್ಷದ ಸಿರಿಸೇನಾ 2015ರಿಂದ ಶ್ರೀಲಂಕಾದ ಅಧ್ಯಕ್ಷ ರಾಗಿದ್ದಾರೆ. ಉತ್ತರಕೇಂದ್ರ ಪ್ರಾಂತ್ಯದಿಂದ ಆ ಸ್ಥಾನಕ್ಕೇರಿದ ಮೊದಲ ಅಧ್ಯಕ್ಷ ಇವರು. ಕಳೆದ ವರ್ಷ ಇವರು ಲಂಕಾ ಪ್ರಧಾನಿ ರನಿಲ್‌ ವಿಕ್ರಮಸಿಂಘೆಯನ್ನು ಬದಲಿಸಿ, ಆ ಜಾಗದಲ್ಲಿ ಮಾಜಿ ರಾಷ್ಟ್ರಾಧ್ಯಕ್ಷ ಮಹಿಂದ ರಾಜಪಕ್ಸಾ ಅವರನ್ನು ಕೂರಿಸುವ ಯತ್ನ ಮಾಡಿದ್ದರು. ಅದಕ್ಕೆ ಲಂಕಾದ ಸರ್ವೋಚ್ಚ ನ್ಯಾಯಾಲಯ ತಡೆ ನೀಡಿತ್ತು.
2014ರ ಅತಿಥಿ: ರಾಷ್ಟ್ರಾಧ್ಯಕ್ಷ ಮಹಿಂದ ರಾಜಪಕ್ಸಾ

ಲೊಟೆಯ್‌ ಶೆರಿಂಗ್‌: ಭೂತಾನ್‌ ಪ್ರಧಾನಿ
51 ವರ್ಷದ ಭೂತಾನ್‌ ಹಾಲಿ ಪ್ರಧಾನಿ ಶೆರಿಂಗ್‌ 2018 ನವೆಂಬರ್‌ನಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಬಾಂಗ್ಲಾ ರಾಜಧಾನಿ ಢಾಕಾ ದಲ್ಲಿ ಇವರು ವೈದ್ಯಕೀಯ ಪದವಿ ಪಡೆದು, ವೈದ್ಯರಾಗಿ ಕಾರ್ಯನಿರ್ವಹಿಸಿದ್ದರು. ಇವರು ಸ್ವಭಾವತಃ ರಾಜಕಾರಣಿಯಲ್ಲ. ಕಳೆದ ಕೆಲ ವರ್ಷಗಳ ಹಿಂದಷ್ಟೇ ಬೆಳಕಿಗೆ ಬಂದು ಈಗ ಡ್ರಕ್‌ ನ್ಯಾಮ್ರಪ್‌ ತ್ಯೋಗ್ಪಾ ನಾಯಕರಾಗಿ ಹೊರಹೊಮ್ಮಿದ್ದಾರೆ.
2014ರ ಅತಿಥಿ: ಪ್ರಧಾನಿ ತ್ಷೆರಿಂಗ್‌ ಟಾಬ್ಗೆ

Advertisement

ಉ ವಿನ್‌ ಮ್ಯಿಂಟ್‌: ಮ್ಯಾನ್ಮಾರ್‌ ಅಧ್ಯಕ್ಷ
67 ವರ್ಷದ ಮ್ಯಾನ್ಯಾರ್‌ ಅಧ್ಯಕ್ಷ ವಿನ್‌ ಮ್ಯಿಂಟ್‌ ಹಿಂದೆ ರಾಜಕೀಯ ಖೈದಿಯಾಗಿದ್ದರು. 2018ರ ಮಾರ್ಚ್‌ ನಿಂದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ದ್ದಾರೆ. ಮ್ಯಾನ್ಮಾರ್‌ನ ಸ್ಟೇಟ್‌ ಕೌನ್ಸೆಲರ್‌ (ಪ್ರಧಾನಿ ಹುದ್ದೆಗೆ ಸಮಾನ ಸ್ಥಾನ, ಸರ್ಕಾರದ ನೇತಾರ) ಆಂಗ್‌ ಸಾನ್‌ ಸೂ ಕಿ ಅವರ ಪರಮಾ ಪ್ತರೆಂಬ ಹೆಸರೂ ಮ್ಯಿಂಟ್‌ಗಿದೆ. ಸದ್ಯ ಯೂರೋಪ್‌ ಪ್ರವಾಸದ ಲ್ಲಿರುವ ಸೂಕಿ ಪ್ರತಿನಿಧಿಯಾಗಿ ಅವರು ಭಾರತಕ್ಕೆ ಬಂದಿದ್ದಾರೆ.
2014ರ ಅತಿಥಿ: ಮ್ಯಾನ್ಮಾರ್‌ಗೆ ಆಹ್ವಾನವಿರಲಿಲ್ಲ

ಪ್ರವಿಂದ್‌ ಕುಮಾರ್‌ ಜಗನ್ನಾಥ್‌: ಮಾರಿಷಸ್‌ ಪ್ರಧಾನಿ
ಮಾರಿಷಸ್‌ ಪ್ರಧಾನಿ, 57 ವರ್ಷದ ಜಗನ್ನಾಥ್‌, 2017ರಿಂದ ಪ್ರಧಾನಿ ಹುದ್ದೆಯಲ್ಲಿದ್ದಾರೆ. ಅವರು ಮಾರಿ ಷಸ್‌ನ ವಿತ್ತ ಸಚಿವರೂ ಹೌದು. ವಿದೇಶಾಂಗ ಸಂಬಂಧಗಳ ವಿಚಾರದಲ್ಲಿ ಹೆಸರು ಮಾಡಿ ರುವ ಪ್ರವಿಂದ್‌ ಅವರು ಮಾಜಿ ಪ್ರಧಾನಿ ಅನಿರುದ್ಧ ಜಗನ್ನಾಥ್‌ ಪುತ್ರ. ಈ ವರ್ಷ ಜನವರಿಯಲ್ಲಿ ನಡೆದ ಭಾರತೀಯ ಪ್ರವಾಸಿ ದಿವಸ್‌ನ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
2014ರ ಅತಿಥಿ: ಮಾರಿಷಸ್‌ಗೆ ಆಹ್ವಾನವಿರಲಿಲ್ಲ

ಸೂರನ್‌ಬೆ ಜೀನ್‌ಬೆಕೊವ್‌: ಕಿರ್ಗಿಸ್ತಾನ ಅಧ್ಯಕ್ಷ
60 ವರ್ಷದ ಜೀನ್‌ಬೆಕೊವ್‌ ನವೆಂಬರ್‌ 2017ರಿಂದ ಕಿರ್ಗಿಸ್ತಾನ ಅಧ್ಯಕ್ಷರಾಗಿದ್ದಾರೆ. ಏಪ್ರಿಲ್‌ 2016ರಿಂದ ಆಗಸ್ಟ್‌ 2017ರವರೆಗೆ ಪ್ರಧಾನಿಯಾಗಿಯೂ ಜವಾ ಬ್ದಾರಿ ನಿರ್ವಹಿಸಿದ್ದರು. ಹಲವಾರು ಖಾತೆ ನಿಭಾಯಿಸಿರುವ ಬೆಕೊವ್‌, ಪಶು ಸಂಗೋಪನೆಯಲ್ಲಿ ತಜ್ಞರಾಗಿದ್ದಾರೆ. ಶಾಂಘಾಯ್‌ ಸಹಕಾರ ಸಂಘ (ಎಎಸ್‌ಒ)ದ ಅಧ್ಯಕ್ಷರೂ ಆಗಿರುವ ಬೆಕೊವ್‌ ಅವರ ಉಪಸ್ಥಿತಿ, ಏಷ್ಯಾ ಮಟ್ಟದ ರಾಜಕಾರಣದಲ್ಲಿ ಮಹತ್ವದ್ದು.
2014ರ ಅತಿಥಿ: ಕಿರ್ಗಿಸ್ತಾನಕ್ಕೆ ಆಹ್ವಾನವಿರಲಿಲ್ಲ

ಗ್ರಿಸಾಡಾ ಬೂನ್ರಾಚ್‌: ಥಾಯ್ಲೆಂಡ್‌ ವಿಶೇಷ ರಾಯಭಾರಿ
61 ವರ್ಷದ ಗ್ರಿಸಾಡಾ ಬೂನ್ರಾಚ್‌, 2017ರಿಂದ ಥಾಯ್ಲೆಂಡ್‌ನ‌ ಕೃಷಿ ಮತ್ತು ಸಹಕಾರ ಸಚಿವರಾಗಿದ್ದಾರೆ. ಥಾಯ್ಲೆಂಡ್‌ ಪ್ರಧಾನಿ ಪ್ರಯುತ್‌ ಚಾನ್‌ ಒ ಚಾ ಅವರ ನಂಬಿಗಸ್ತ ಬಂಟರೂ ಹೌದು. ಥಾಯ್ಲೆಂಡ್‌ನ‌ಲ್ಲಿ ಸರ್ಕಾರ ರಚನೆಯಲ್ಲಿ ನಿರತವಾಗಿರುವ ಪ್ರಯುತ್‌ ಚಾನ್‌ ಅವರ ಪ್ರತಿನಿಧಿಯಾಗಿ ಗ್ರಿಸಾಡ, ಮೋದಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.
2014ರ ಅತಿಥಿ: ಥಾಯ್ಲೆಂಡ್‌ಗೆ ಆಹ್ವಾನವಿರಲಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next