ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಕತ್ವದ ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿ ವಾರ್ಷಿಕವಾಗಿ ನೆರವೇರಿಸುತ್ತಿರುವ ಸಾರ್ವಜನಿಕ ಓಂ-ಶನಿ-ಓಂ ಶ್ರೀ ಶನೀಶ್ವರ ಗ್ರಂಥ ಪಾರಾಯಣವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶನಿವಾರ ಅಪರಾಹ್ನ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದಲ್ಲಿ ಚಾಲನೆಗೊಂಡಿತು.
ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ, ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಅವರ ಮಾರ್ಗದರ್ಶನ ಹಾಗೂ ಬಿಲ್ಲವರ ಅಸೋಸಿಯೇಶನ್‌ನ ಅಧ್ಯಕ್ಷ ಚಂದ್ರಶೇಖರ್ ಎಸ್. ಪೂಜಾರಿ ಇವರ ದಿವ್ಯೋಪಸ್ಥಿತಿಯಲ್ಲಿ ನಡೆಸಲ್ಪಟ್ಟ ಪಾರಾಯಣ ಕಾರ್ಯಕ್ರಮಕ್ಕೆ ಅಸೋಸಿಯೇಶನ್‌ನ ಮಾಜಿ ಗೌರವ ಪ್ರಧಾನ ಕೋಶಾಧಿಕಾರಿ, ಭಾರತ್ ಬ್ಯಾಂಕ್‌ನ ಮಾಜಿ ನಿರ್ದೇಶಕ ಎನ್. ಎಂ. ಸನಿಲ್ ಅವರು ದೀಪಪ್ರಜ್ವಲಿಸಿ ಸಾರ್ವಜನಿಕ ಗ್ರಂಥ ಪಾರಾಯಣಕ್ಕೆ ಚಾಲನೆ ನೀಡಿದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಗೌರವ ಕಾರ್ಯದರ್ಶಿ ಧನಂಜಯ ಶಾಂತಿ ಮತ್ತು ಸಾಮಾಜಿಕ ಮತ್ತು ಧಾರ್ಮಿಕ ಸಮಿತಿಯ ಕಾರ್ಯದರ್ಶಿ ರವೀಂದ್ರ ಎ. ಶಾಂತಿ ಅವರು ಕಲಶ ಪ್ರತಿಷ್ಠಾಪನೆಗೈದು ಶ್ರೀ ಶನೀಶ್ವರ ಮಹಾಪೂಜೆ ನೆರವೇರಿಸಿ ಅನುಗ್ರಹಿಸಿ ಶುಭಹಾರೈಸಿದರು. ಬಿಲ್ಲವರ ಅಸೋಸಿಯೇಶನ್‌ನ ಉಪಾಧ್ಯಕ್ಷ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ದಯಾನಂದ್ ಆರ್. ಪೂಜಾರಿ ಮತ್ತು ವೀಣಾ ದಯಾನಂದ್ ದಂಪತಿ ಪೂಜೆಯ ಯಜಮಾನತ್ವ ವಹಿಸಿದ್ದರು.
ಗಂಗಾಧರ್ ಕಲ್ಲಡಿ ಪ್ರಸಾದ ವಿತರಿಸಿದರು. ಬಿ. ಎಂ. ಸುವರ್ಣ ಮೂಲ್ಕಿ, ಬಾಲಕೃಷ್ಣ ಪೂಜಾರಿ, ಯಶೋಧರ ಡಿ. ಪೂಜಾರಿ, ನಾರಾಯಣ ಬಂಗೇರ ಸೇರಿದಂತೆ ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿಯ ಕಲಾವಿದರು ಶ್ರೀ ಶನೀಶ್ವರ ಗ್ರಂಥ ಪಾರಾಯಣಗೈದರು.
ಈ ಸಂದರ್ಭದಲ್ಲಿ ಅಸೋಸಿಯೇಶನ್‌ನ ಉಪಾಧ್ಯಕ್ಷ ಶ್ರೀನಿವಾಸ ಆರ್. ಕರ್ಕೇರ, ಯುವಾಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷ ನಾಗೇಶ್ ಎನ್. ಕೋಟ್ಯಾನ್, ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಮಹೇಶ್ ಕಾರ್ಕಳ, ಸಾಂಸ್ಕೃತಿಕ ಸಮಿತಿಯ ಕಾರ್ಯದರ್ಶಿ ಅಶೋಕ್ ಕುಕ್ಯಾನ್ ಸಸಿಹಿತ್ಲು, ಬಿಲ್ಲವರ ಭವನದ ವ್ಯವಸ್ಥಾಪಕ ಭಾಸ್ಕರ್ ಟಿ. ಪೂಜಾರಿ ಸೇರಿದಂತೆ, ಅಸೋಸಿಯೇಶನ್‌ನ ಇತರ ಪದಾಧಿಕಾರಿಗಳು ಮತ್ತು ವಿವಿಧ ಉಪಸಮಿತಿಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸ್ಥಳೀಯ ಸಮಿತಿ-ಕಚೇರಿಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಯುವ ವಿಭಾಗ, ಮಹಿಳಾ ವಿಭಾಗದ ಪದಾಧಿಕಾರಿಗಳು, ಸದಸ್ಯ-ಸದಸ್ಯೆಯರು, ಸಮಾಜದ ಪ್ರಮುಖರು ಹಾಗೂ ನೂರಾರು ಭಕ್ತರು ಸಾಮೂಹಿಕ ಪೂಜೆ ಯಲ್ಲಿ ಪಾಲ್ಗೊಂಡಿದ್ದರು.
ಚಿತ್ರ -ವರದಿ : ರೋನ್ಸ್ ಬಂಟ್ವಾಳ್