Advertisement

ಬಿಲ್ಲವರ ಅಸೋಸಿಯೇಶನ್‌ ಭಿವಂಡಿ : ಶಾಲಾ ಪರಿಕರಗಳ ವಿತರಣೆ

11:59 AM Jun 14, 2019 | Vishnu Das |

ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಭಿವಂಡಿ ಸ್ಥಳೀಯ ಕಚೇರಿಯ ವತಿಯಿಂದ ಶೈಕ್ಷಣಿಕ ಸಾಲಿನ ವಾರ್ಷಿಕ ಶಾಲಾ ಪರಿಕರಗಳ ವಿತರಣೆ ಕಾರ್ಯಕ್ರಮವು ಜೂ. 9 ರಂದು ಬಿಲ್ಲರ ಅಸೋಸಿಯೇಶನ್‌ ಭಿವಂಡಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ರತ್ನಾಕರ ಜಿ. ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಸಮಿತಿಯ ಕಚೇರಿಯಲ್ಲಿ ನಡೆಯಿತು.

Advertisement

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಉಪಾಧ್ಯಕ್ಷ ದಯಾನಂದ ಆರ್‌. ಪೂಜಾರಿ, ಅಶೋಕ್‌ ಕುಕ್ಯಾನ್‌ ಹಾಗೂ ಪೂಜಾರಿ ಟ್ರಾವೆಲ್ಸ್‌ನ ಮಾಲಕ ರಾಜೇಶ್‌ ಎಸ್‌. ಪೂಜಾರಿ, ಪಯನಿಯರ್‌ ಕ್ಲಾಸೆಸ್‌ನ ಮಾಲಕ ಅಜಯ್‌ ಬಿಲ್ಲವ, ಭಾರತ್‌ ಬ್ಯಾಂಕಿನ ನಿರ್ದೇಶಕ ಮೋಹನ್‌ದಾಸ್‌ ಪೂಜಾರಿ ಅವರು ಆಗಮಿಸಿ ಆರ್ಥಿಕವಾಗಿ ಸಹಕರಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಮಕ್ಕಳಿಗೆ ಶುಭಹಾರೈಸಿದರು.

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಉಪಾಧ್ಯಕ್ಷ ದಯಾನಂದ ಆರ್‌. ಪೂಜಾರಿ ಅವರು ಮಾತನಾಡಿ, ಬಿಲ್ಲವರ ಅಸೋಸಿಯೇಶನ್‌ ನಾರಾಯಣ ಗುರುಗಳ ತತ್ವ ಸಂದೇಶದಂತೆ ವಿದ್ಯಾರ್ಜನೆಗೆ ಮಹತ್ವವನ್ನು ನೀಡುತ್ತಿದ್ದು, ಸಮಾಜದ ಮಕ್ಕಳು ಇದರ ಪ್ರಯೋಜನವನ್ನು ಪಡೆದು ಉನ್ನತ ಶಿಕ್ಷಣ ಪಡೆದು ಸ್ವಾವಲಂಬಿಗಳಾಗಿ ಋಣವನ್ನು ತೀರಿಸಬೇಕು. ಭಿವಂಡಿ ಸ್ಥಳೀಯ ಸಮಿತಿಯು ಈ ನಿಟ್ಟಿನಲ್ಲಿ ಉತ್ತಮವಾದ ಕೆಲಸಗಳನ್ನು ಮಾಡುತ್ತಿದ್ದು, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ನೀಡುತ್ತಾ ಗುರುದೇವರ ಆಶಯದಂತೆ ಕಾರ್ಯ ನಿರ್ವಹಿಸುತ್ತಿದೆ. ಸುಮಾರು 70 ಮಕ್ಕಳಿಗೆ ಪಠ್ಯ ಪುಸ್ತಕ, ನೋಟ್‌ಬುಕ್‌, ಪೆನ್‌ ಇನ್ನಿತರ ಶಾಲಾ ಪರಿಕರಗಳನ್ನು ನೀಡಿ ಸಹಕರಿಸುತ್ತಿರುವುದು ಅಭಿನಂದನೀಯವಾಗಿದೆ. ಸಮಿತಿಯು ಸಮಾಜಪರ ಕಾರ್ಯಕ್ರಮಗಳಿಂದ ಸಮಾಜ ಬಾಂಧವರ ಮನೆ-ಮನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಲಿ ಎಂದರು.

ಕೊಡುಗೆಯನ್ನು ನೀಡಬೇಕು
ಬಿಲ್ಲವರ ಅಸೋಸಿಯೇಶನ್‌ ಭಿವಂಡಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ರತ್ನಾಕರ ಪೂಜಾರಿ ಇವರು ಮಾತನಾಡಿ, ಇಂದು ಸಮಾಜದಿಂದ ಪ್ರಯೋಜನವನ್ನು ಪಡೆದ ಮಕ್ಕಳು ಮುಂದೆ ಉನ್ನತ ಸ್ಥಾನವನ್ನು ಪಡೆದು ಸಮಾಜಕ್ಕೆ ತಮ್ಮಿಂದಾದ ಕೊಡುಗೆಯನ್ನು ನೀಡಬೇಕು. ಕಳೆದ ಹಲವಾರು ವರ್ಷಗಳಿಂದ ಸಮಿತಿಯ ಎಲ್ಲಾ ರೀತಿಯ ಕಾರ್ಯಕ್ರಮಗಳಿಗೆ ಸಮಾಜ ಬಾಂಧವರು, ದಾನಿಗಳು ಸ್ಪಂದಿಸುತ್ತಿದ್ದಾರೆ. ಅವರೆಲ್ಲೂರಿಗೂ ಅಭಾರಿಯಾಗಿದ್ದೇವೆ. ಭವಿಷ್ಯದಲ್ಲೂ ಸಮಿತಿಯ ಎಲ್ಲಾ ಸಮಾಜಪರ ಕಾರ್ಯಕ್ರಮಗಳಿಗೆ ದಾನಿಗಳ ಪ್ರೋತ್ಸಾಹ, ಸಹಕಾರ ಸದಾಯಿರಲಿ ಎಂದು ನುಡಿದರು.

ಸಮಿತಿಯ ಗೌರವ ಕಾರ್ಯದರ್ಶಿ ಉಮೇಶ್‌ ಆರ್‌. ಸುವರ್ಣ ವಂದಿಸಿದರು. ಸಚಿನ್‌ ಎಸ್‌. ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಸಮಾಜದ ನೂರಾರು ಮಕ್ಕಳಿಗೆ ಗಣ್ಯರು ಶಾಲಾ ಪರಿಕರಗಳನ್ನು ವಿತರಿಸಿ ಶುಭಹಾರೈಸಿದರು. ಭಿವಂಡಿ ಸ್ಥಳೀಯ ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ಸದಸ್ಯೆಯರು, ಯುವ ವಿಭಾಗದ ಸದಸ್ಯರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next