Advertisement

ಇನ್ನೆರಡು ಬ್ಯಾಂಕ್‌ ಖಾಸಗಿಗೆ? ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡನೆ

12:35 AM Nov 25, 2021 | Team Udayavani |

ಹೊಸದಿಲ್ಲಿ: ದೇಶದಲ್ಲಿ ಮತ್ತೆರಡು ಸರಕಾರಿ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ವೇದಿಕೆ ಸಿದ್ಧವಾಗಿದೆ. ಸಾರ್ವಜನಿಕ ವಲಯದ ಎರಡು ಬ್ಯಾಂಕ್‌­ಗಳನ್ನು ಖಾಸಗೀಕರಣಗೊಳಿಸುವ ಉದ್ದೇಶದಿಂದ ಕೇಂದ್ರ ಸರಕಾರವು ಮುಂದಿನ ಅಧಿವೇಶನದಲ್ಲಿ ಬ್ಯಾಂಕಿಂಗ್‌ ಕಾನೂನುಗಳು (ತಿದ್ದುಪಡಿ) ಮಸೂದೆ 2021 ಅನ್ನು ಮಂಡಿಸಲಿದೆ.

Advertisement

ಇದೇ 29ರಿಂದ ಸಂಸತ್‌ನ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಅಲ್ಲಿ ಮಂಡಿ­ಸಲು ನಿರ್ಧರಿಸಲಾಗಿರುವ 26 ಮಸೂದೆಗಳ ಪೈಕಿ ಇದೂ ಒಂದು ಎಂದು ಹೇಳಲಾಗಿದೆ. ಹಲವು ಪ್ರಮುಖ ಮಸೂದೆಗಳು ಚರ್ಚೆಗೆ ಬರುವ ಹಿನ್ನೆಲೆಯಲ್ಲಿ ಮೊದಲ ದಿನದಿಂದಲೇ ಕಲಾಪಗಳು ಕಾವೇರುವ ಲಕ್ಷಣ ಗೋಚರಿಸಿದೆ.

2021-22ರ ಬಜೆಟ್‌ ಮಂಡನೆ ವೇಳೆಯೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಸರಕಾರದ ಬಂಡವಾಳ ಹಿಂಪಡೆ­ಯುವಿಕೆ ಅಭಿಯಾನದ ಭಾಗವಾಗಿ 2 ಸರಕಾರಿ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡುವುದಾಗಿ ಘೋಷಿಸಿದ್ದರು. ಅದರಂತೆ, ಖಾಸಗೀಕರಣ ಪ್ರಕ್ರಿಯೆ ಆರಂಭಿಸಲು ಬ್ಯಾಂಕಿಂಗ್‌ ಕಂಪೆನೀಸ್‌ ಕಾಯ್ದೆಗಳು 1970 ಮತ್ತು 1980 ಹಾಗೂ ಬ್ಯಾಂಕಿಂಗ್‌ ನಿಯಂ­ತ್ರಣ ಕಾಯ್ದೆ, 1949ಕ್ಕೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ.

ಇದಲ್ಲದೆ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ಮಸೂದೆಯನ್ನೂ ಮುಂಬರುವ ಅಧಿವೇಶನ­ದಲ್ಲಿ ಮಂಡಿಸಲು ಸರಕಾರ ಸಜ್ಜಾಗಿದೆ. ಈ ಮಸೂದೆಯಂತೆ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಟ್ರಸ್ಟ್‌ ಅನ್ನು ಪ್ರತ್ಯೇಕವಾಗಿ­ಸುವುದು ಸರಕಾರದ ಉದ್ದೇಶವಾಗಿದೆ.

ರವಿವಾರ ಸಭೆ: ಅಧಿವೇಶನ ಹಿನ್ನೆಲೆಯಲ್ಲಿ ರವಿವಾರ (ನ. 28) ಹೊಸದಿಲ್ಲಿಯಲ್ಲಿ ಸರ್ವಪಕ್ಷಗಳ ಸಭೆ ನಡೆಯಲಿದೆ. ಅದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ.

Advertisement

ಇದನ್ನೂ ಓದಿ:ಸ್ವೀಡನ್‌ನ ಮೊದಲ ಮಹಿಳಾ ಪ್ರಧಾನಿ ಮ್ಯಾಗ್ಡಲೀನಾ

ಉ.ಪ್ರದೇಶದ ಪರಿಶಿಷ್ಟ ಪಂಗಡಗಳ ಪಟ್ಟಿಗೆ ತಿದ್ದುಪಡಿ?: ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಆ ರಾಜ್ಯದಲ್ಲಿ ಪರಿಶಿಷ್ಟ ಪಂಗಡಗಳ ಪಟ್ಟಿಗೆ ತಿದ್ದುಪಡಿ ತರುವ ಮಸೂದೆಯನ್ನು ಮಂಡಿ­ಸಲು ಸರಕಾರ ನಿರ್ಧರಿಸಿದೆ. ಉ.ಪ್ರದೇಶ ಮಾತ್ರವಲ್ಲದೇ ತ್ರಿಪುರಾಗೆ ಸಂಬಂಧಿಸಿಯೂ ಇದೇ ಮಾದರಿಯ ಬಿಲ್‌ ಮಂಡಿಸಲು ಸಿದ್ಧತೆ ನಡೆದಿದೆ. ಪ್ರಸಕ್ತ ವರ್ಷದ ಆರಂಭದಲ್ಲಿ ಸಂಸತ್‌ ತಮಿಳುನಾಡಿನ ಎಸ್‌ಸಿ ಪಟ್ಟಿಯಲ್ಲಿ ತಿದ್ದುಪಡಿ ತಂದಿತ್ತು. ಉತ್ತರಪ್ರದೇಶದಲ್ಲೂ ಕೆಲವು ಸಮುದಾಯಗಳು ಇಂಥ ಬೇಡಿಕೆ ಇಟ್ಟಿರುವ ಹಿನ್ನೆಲೆಯಲ್ಲಿ ಪಟ್ಟಿ ಪರಿಷ್ಕರಣೆ ಮಾಡಲು ಸರಕಾರ ಚಿಂತನೆ ನಡೆಸಿರಬಹುದು ಎಂದು ಉತ್ತರಪ್ರದೇಶದ ಹಿರಿಯ ಸಚಿವರೊ­ಬ್ಬರು ತಿಳಿಸಿದ್ದಾರೆ. ಇಲ್ಲಿನ ಮೀನುಗಾರರ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರ್ಪಡೆ ಮಾಡುವ ಸಾಧ್ಯತೆಯಿದೆ. ಅಲ್ಲದೇ ಚುನಾವಣೆಗೆ ಸಂಬಂಧಿಸಿ ನೋಡುವುದಾದರೆ ಈ ಸಮುದಾಯವು ರಾಜ್ಯದಲ್ಲಿ ಹೆಚ್ಚಿನ ಪ್ರಭಾವವನ್ನೂ ಹೊಂದಿದೆ.

ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ವಿಧಾನಸಭೆ ಚುನಾ ವಣೆ ಮುಂದಿನ ವರ್ಷ ಇಲ್ಲದೇ ಇರುತ್ತಿ ದ್ದರೆ ಕೇಂದ್ರ ಸರಕಾರ ರೈತ ಕಾಯ್ದೆಗಳನ್ನು ರದ್ದು ಮಾಡುತ್ತಿರಲಿಲ್ಲ. ಆಡಳಿತದಲ್ಲಿ ಇರುವವರಿಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದ ರಿಂದ ಈ ನಿರ್ಧಾರವಾಗಿದೆ.
-ಶರದ್‌ ಪವಾರ್‌,
ಎನ್‌ಸಿಪಿ ಸಂಸ್ಥಾಪಕ

ಕ್ರಿಪ್ಟೋಗೆ ತೆರಿಗೆ?
ದೇಶದಲ್ಲಿ ಕ್ರಿಪ್ಟೋ ಕರೆನ್ಸಿಯನ್ನು ಕೇಂದ್ರ ಸರಕಾರ ಸಂಪೂರ್ಣವಾಗಿ ನಿಷೇಧ ಮಾಡುವ ಸಾಧ್ಯತೆಯಿಲ್ಲ. ಆದರೆ, ಕ್ರಿಪ್ಟೋ ವ್ಯವಹಾರವನ್ನು ನಿಯಂತ್ರಿಸುವ ಸಲುವಾಗಿ ಕ್ರಿಪ್ಟೋ ತೆರಿಗೆಯನ್ನು ಪರಿಚಯಿಸಬಹುದು ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಸಂಬಂಧಿಸಿದ ಹೊಸ ಮಸೂದೆಯನ್ನು ಸಂಸತ್‌ನಲ್ಲಿ ಮಂಡಿಸಲು ಚಿಂತನೆ ನಡೆಸಲಾಗಿದೆ. ಲೋಕಸಭೆಯ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ, ಹೊಸ ಮಸೂದೆಯು ದೇಶದ ಎಲ್ಲ ಖಾಸಗಿ ಕ್ರಿಪ್ಟೋ ಕರೆನ್ಸಿ(ಸರಕಾರ ಹೊರಡಿಸುವ ವರ್ಚುವಲ್‌ ಕರೆನ್ಸಿ ಹೊರತುಪಡಿಸಿ)ಗಳಿಗೆ ನಿಷೇಧ ಹೇರಲಿದೆ. ಆದರೆ ಈ ಕ್ಷೇತ್ರದ ತಜ್ಞರು ಹೇಳುವಂತೆ, ಬಿಟ್‌ಕಾಯಿನ್‌ನ ಮಾರುಕಟ್ಟೆ ಬಂಡವಾಳವೇ 1 ಲಕ್ಷ ಕೋಟಿ ಡಾಲರ್‌ ಇದ್ದು, ಅದಕ್ಕೆ ಸಂಪೂರ್ಣ ನಿಷೇಧ ಹೇರುವ ಸಾಧ್ಯತೆ ಕಡಿಮೆ. ಇದೇ ವೇಳೆ ಭಾರತವು ಕ್ರಿಪ್ಟೋ ಕರೆನ್ಸಿಯನ್ನು “ಹಣಕಾಸು ಆಸ್ತಿ’ ಎಂದು ಪರಿಗಣಿಸಿ, ಕೆಲವು ಹೂಡಿಕೆದಾರರಿಗೆ ಕ್ರಿಪ್ಟೋ ವಹಿವಾಟು ನಡೆಸಲು ಅವಕಾಶ ಕಲ್ಪಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದೂ ಮೂಲಗಳು ತಿಳಿಸಿವೆ.

ಮಂಡನೆಯಾಗಲಿರುವ ಪ್ರಮುಖ ಮಸೂದೆಗಳು
-ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡುವ ಮಸೂದೆ 2021
-ಕ್ರಿಪ್ಟೋ ಕರೆನ್ಸಿ ಮತ್ತು ಡಿಜಿಟಲ್‌ ಕರೆನ್ಸಿ ನಿಯಂತ್ರಣ ಮಸೂದೆ 2021
-ಮಾದಕ ವಸ್ತುಗಳು ತಡೆ (ತಿದ್ದುಪಡಿ) ಮಸೂದೆ 2021
-ಕೇಂದ್ರೀಯ ಜಾಗೃತ ದಳ ಆಯೋಗ (ತಿದ್ದುಪಡಿ) ಮಸೂದೆ 2021
-ದೆಹಲಿ ವಿಶೇಷ ಪೊಲೀಸ್‌ ಕಾಯ್ದೆ (ತಿದ್ದುಪಡಿ) ಮಸೂದೆ 2021
-ಬ್ಯಾಂಕಿಂಗ್‌ ಕಾಯ್ದೆಗಳು (ತಿದ್ದುಪಡಿ) ಮಸೂದೆ 2021

Advertisement

Udayavani is now on Telegram. Click here to join our channel and stay updated with the latest news.

Next