ಮೈಸೂರು: 40% ಕಮಿಷನ್ ಬಗ್ಗೆ ತನಿಖೆಯಾಗದೆ ಬಿಲ್ ಹೇಗೆ ಬಿಡುಗಡೆ ಮಾಡಲು ಸಾಧ್ಯ. ತನಿಖೆ ಪ್ರಗತಿಯಲ್ಲಿದೆ. ತಪ್ಪು ಮಾಡದೆ ಇರುವವರಿಗೆ ಬಿಲ್ ನಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ. ತಪ್ಪು ಮಾಡಿರುವವರಿಗೆ ಆ ಭಯ ಇರುತ್ತದೆ. ನಡೆದಿರುವ ಕಾಮಾಗಾರಿಗಳೆಲ್ಲಾ ಮೂರು ವರ್ಷದ ಹಿಂದೆ ಮುಕ್ತಾಯವಾಗಿದೆ. ಈಗ ಬಿಲ್ ಗಾಗಿ ಆತುರ ಪಟ್ಟರೆ ಹೇಗೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಬಿಜೆಪಿಗೆ ಏನು ವಿಚಾರ ಇಲ್ಲದೆ ಈ ಬಗ್ಗೆ ಹೋರಾಟ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. 40% ಕಮಿಷನ್ ಗಾಗಿಯೇ ಜನ ಅವರನ್ನು ತಿರಸ್ಕರಿಸಿದ್ದಾರೆ. ನಾವು ಅವತ್ತು ಮಾಡಿರುವ ಆರೋಪವನ್ನು ಸಾಬೀತು ಮಾಡಬೇಕಿದೆ. ಈ ಕಾರಣ ನಾಲ್ಕು ಟೀಂ ತನಿಖೆ ಮಾಡುತ್ತಿದೆ ಎಂದರು.
ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕ ವಿಚಾರಕ್ಕೆ ಮಾತನಾಡಿದ ಅವರು, ಶಾಸಕರಿಗೂ ಇದರಲ್ಲಿ ಸ್ಥಾನ ಕೊಡಬೇಕಿದೆ. ಯಾವ ಅನುಪಾತದಲ್ಲಿ ಇದನ್ನು ಹಂಚಿಕೆ ಮಾಡಬೇಕು ಎಂಬ ಬಗ್ಗೆ ಸಮಿತಿ ತೀರ್ಮಾನ ಮಾಡುತ್ತದೆ ಎಂದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರವಾಗಿ ಮಾತನಾಡಿ, ವಾರ್ಡ್‌ಗಳ ಪುನರ್ವಿಂಗಡಣೆ ವಿಚಾರದಲ್ಲಿ ನ್ಯಾಯಾಲಯ ಕೆಲವೊಂದು ಗಡುವು ನೀಡಿದೆ. ಆ ಗಡುವಿನ ಆಧಾರದಲ್ಲಿ ವರದಿಗಳು ಸಿದ್ಧವಾಗುತ್ತಿವೆ. ಅದನ್ನು ಕೋರ್ಟಿಗೆ ನಾವು ನೀಡುತ್ತೇವೆ. ಚುನಾವಣೆ ವಿಚಾರದಲ್ಲಿ ನಾವು ಯಾವತ್ತೂ ಹಿಂದೆ ಬಿದ್ದಿಲ್ಲ. ಬಿಜೆಪಿಯವರು ಚುನಾವಣೆಗಳನ್ನು ಮುಂದುಡೂತ್ತಿದ್ದರು. ನಾವೂ ಆ ರೀತಿ ಮಾಡುವುದಿಲ್ಲ. ನ್ಯಾಯಾಲಯದ ನಿರ್ದೇಶನದಂತೆ ನಡೆಯುತ್ತೇವೆ ಎಂದರು.
ನನಗೆ ಜನ್ಮ ದಿನಾಂಕ ಸರಿಯಾಗಿ ಗೊತ್ತಿಲ್ಲ, ಆಗಸ್ಟ್ 3, ಆಗಸ್ಟ್ 12 ಎರಡೂ ಕೂಡ ತಪ್ಪು ದಿನಾಂಕಗಳು. ಒಂದು ನನ್ನ ಮೇಷ್ಟ್ರು ಬರೆಸಿರುವುದು. ಇನ್ನೊಂದು ನಮ್ಮ ಅಪ್ಪ ಯಾವುದೋ ಒಂದು ಡೇಟ್ ಬರ್ಸಿರೋದು. ಹೀಗಾಗಿ ಎರಡೂ ದಿನಾಂಕವೂ ತಪ್ಪು. ಹೀಗಾಗಿ ನನಗೆ ಯಾವ ಆಸಕ್ತಿಯೂ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಕೇಂದ್ರ ಸರ್ಕಾರದ ಏಕರೂಪ ನಾಗರಿಕ ಕಾಯ್ದೆಗೆ ನಮ್ಮ ವಿರೋಧವಿದೆ. ಕೇರಳದಲ್ಲೂ ಈಗಾಗಲೇ ಇದಕ್ಕೆ ವಿರೋಧ ವ್ಯಕ್ತಪಡಿಸಲಾಗಿದೆ. ನಾವೂ ಇದಕ್ಕೆ ವಿರೋಧ ಇದ್ದೇವೆ ಎಂದರು.