ಯಳಂದೂರು: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಸ್ಥಳವಾಗಿರುವ ಯಳಂದೂರು ತಾಲೂಕಿನ ಬಿಳಿಗಿರಿರಂಗಬೆಟ್ಟದ ಬಿಳಿಗಿರಿ ರಂಗನಾಥಸ್ವಾಮಿದೇಗುಲದಲ್ಲಿ ಫೆ.1ರಿಂದ ಪೂಜಾ ಕೈಂಕರ್ಯಗಳು ಮತ್ತೆ ಆರಂಭಗೊಂಡಿದೆ. ಇದಕ್ಕಾಗಿ ಚಾತಕಪಕ್ಷಿಗಳಂತೆ ಕಾದಿದ್ದ ಭಕ್ತರ ಸಂತಸ ಇಮ್ಮಡಿಗೊಂಡಿದೆ. ಶನಿವಾರ ವಾರದ ದಿನವಾಗಿದ್ದು ಭಕ್ತ ಸಾಗರವೇ ಹರಿದು ಬಂದಿದೆ.
ನೂರಾರು ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನ ಶಿಥಿಲಗೊಂಡಿರುವ ಕಾರಣ 2017ರ ಮಾರ್ಚ್‌ನಲ್ಲಿ ಪುರಾತತ್ವ ಇಲಾಖೆಯಿಂದ 2.40 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಕಾಮಗಾರಿ ಆರಂಭಿಸಲಾಗಿತ್ತು. ದೇಗುಲದ ಸಮೀಪದಲ್ಲಿ ಬಾಲಾಲಯ ಸ್ಥಾಪಿಸಿ ದರ್ಶನಕ್ಕೆ ಮಾತ್ರ ಸಿಮೀತಗೊಂಡಿತ್ತು. 20 ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂಬಷರತ್ತು ವಿಧಿಸಲಾಗಿತ್ತು. ಆದರೆ, ಕಾಮಗಾರಿ ಆಮೆಗತಿಯಲ್ಲಿ ಸಾಗಿ ಸುಮಾರು 4 ವರ್ಷ ಬಳಿಕ ಪೂರ್ಣಗೊಂಡಿತ್ತು. 2021ರ ಮಾ.29 ರಿಂದ ಏ.1ರ ವರೆಗಿನ, ಸತತ 5 ದಿನಗಳ ಕಾಲ ನಡೆದ ಈಧಾರ್ಮಿಕ ಕಾರ್ಯದಲ್ಲಿ ಹೋಮ, ಹವನ ಯಜ್ಞ ಯಾಗಾದಿಗಳು ನಡೆಯಿತು. ನಂತರ ಕೋವಿಡ್ 2ನೇ ಅಲೆ ಪ್ರಾರಂಭವಾಗಿ ಮುಗಿದ ನಂತರ ದೇಗುಲದಲ್ಲಿ ಮತ್ತೆ ದರ್ಶನಕ್ಕೆ ಮಾತ್ರ ಅವಕಾಶವನ್ನು ಕಲ್ಪಿಸಲಾಗಿತ್ತು. ದೇವಾಲಯ ಬಾಗಿಲು ತೆರೆದು ಹಲವು ತಿಂಗಳು ಕಳೆದಿದ್ದರೂ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ಮುಡಿಸೇವೆ, ಪ್ರಸಾದ, ನಾಮಕರಣ,
ಕುಂಕುಮಾರ್ಚನೆ, ತುಲಾಭಾರ, ಗರುಡೋತ್ಸವ, ಕಲ್ಯಾಣೋತ್ಸವ ಸೇರಿದಂತೆ ಇತರೆ ಸೇವೆಗಳು ಹರಕೆ ದೊರೆಯುತ್ತಿಲ್ಲ, ಇದರಿಂದ ದೂರದ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಸೇರಿದಂತೆ ಹೊರ ರಾಜ್ಯಗಳಲ್ಲೂ ಇರುವ ರಂಗಪ್ಪನ ಭಕ್ತರಿಗೆ ನಿರಾಸೆಗೊಂಡಿದ್ದರು. ನಂತರ ಜಿಲ್ಲಾಧಿಕಾರಿಆದೇಶದ ಹಿನ್ನೆಲೆಯಲ್ಲಿ ನವೆಂಬರ್‌ನಿಂದ ಭಕ್ತಾರಿಗೆ ಪೂಜಾ ಕೈಂಕರ್ಯಗಳ ಸೇವೆಗಳಿಗೆ ಅನುಮತಿ ನೀಡಲಾಗಿತ್ತು. ಈ ನಡುವೆ ಮತ್ತೆ ಕೋವಿಡ್ 3ನೇ ಅಲೆ ಬಂದ ಹಿನ್ನೆಲೆಯಲ್ಲಿ ಕೇವಲ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಈಗ ಮತ್ತೆ ಫೆ.1 ರಿಂದ ಎಲ್ಲಾ ಸೇವೆಗಳು ಆರಂಭಗೊಂಡಿದ್ದು, ದಾಸೋಹವೂ ತೆರೆದಿದ್ದು ನಿತ್ಯ ಪ್ರಸಾದ ವಿನಿಯೋಗಕ್ಕೆ ವ್ಯವಸ್ಥೆ ಮಾಡಲಾಗಿದೆ.
ಯಾವ ಸೇವೆಗಳು ಆರಂಭ: ದೊಡ್ಡ ಗರುಡೋತ್ಸವ, ಬೆಳ್ಳಿ ಗರುಡೋತ್ಸವ, ಕೈ ಗರುಡೋತ್ಸವ, ತುಳಸಿ ಕುಂಕುಮ ಸಹಸ್ರನಾಮ, ಅಷ್ಟೋತ್ತರ, ಗಜಲಕ್ಷ್ಮೀ ಅಮ್ಮನವರ ಉತ್ಸವ, ಆನೆವಾಹನ, ರಂಗ ಮಂಟಪೋತ್ಸವ, ರಾಸ ಕ್ರಿಡೋತ್ಸವ, ಬೃಂದಾವನೋತ್ಸವ, ಸಿಂಹವಾಹನ, ಹಂಸ ವಾಹನ, ಕುದುರೆ ವಾಹನ, ಶೇಷಾ ವಾಹನ,ಸೂರ್ಯ ಮಂಟಪೋತ್ಸವ, ಕನಕ ಪಲ್ಲಿಕ್ಕಿ ಉತ್ಸವ, ಹನುಮಂತ ವಾಹನ, ಕಲ್ಯಾಣೋತ್ಸವ,ಪಂಚಾಮೃತ ಅಭಿಷೇಕ, ಸೇರಿದಂತೆ ಇತರೇ ಸೇವೆ ಕಾರ್ಯಗಳ ಪ್ರಾರಂಭವಾಗಿದೆ.
ಕೋವಿಡ್ 3ನೇ ಅಲೆ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಪೂಜಾ ಕೈಂಕರ್ಯ ಗಳು ಫೆ.1ರಿಂದ ಮತ್ತೆ ಆರಂಭಗೊಂಡಿದೆ. ಕೋವಿಡ್ ನಿಯಮಗಳ ಪ್ರಕಾರ ವಿವಿಧಸೇವೆಗಳನ್ನು ಮತ್ತೆ ಆರಂಭಿಸಲಾಗಿದ್ದು, ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
– ಮೋಹನ್ ಕುಮಾರ್, ದೇಗುಲ ಕಾರ್ಯನಿರ್ವಾಹಕ ಅಧಿಕಾರಿ
–ಫೈರೋಜ್ ಖಾನ್