ಸಂತೆಮರಹಳ್ಳಿ: ಯಳಂದೂರು ತಾಲೂಕಿನ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿರುವ ಬಿಳಿಗಿರಿರಂಗನಬೆಟ್ಟದಲ್ಲಿರುವ ಬಿಳಿಗಿರಿರಂಗನಾಥಸ್ವಾಮಿ ದೇಗುಲದ ಜೀರ್ಣೋದ್ಧಾರ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು ಇತ್ತೀಚಿಗೆ ಸುರಿದ ಮಳೆಯಿಂದ ದೇಗುಲದ ಮಾಳಿಗೆ ಸೋರುತ್ತಿದೆ.
ಆಮೆಗತಿ ಕಾಮಗಾರಿ: ನೂರಾರು ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನ ಶಿಥಿಲಗೊಂಡಿರುವ ನೆಪವೊಡ್ಡಿ 2017 ಮಾರ್ಚ್‌ನಲ್ಲಿ ಪುರಾತತ್ವ ಇಲಾಖೆ ವತಿಯಿಂದ 2.40 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಕಾಮಗಾರಿ ಆರಂಭಿಸಲಾಗಿತ್ತು. ಶಿವಮೊಗ್ಗದ ಪರಂಪರಾ ಕನ್ಸ್‌ಸ್ಟ್ರಕ್ಷನ್ ವತಿಯಿಂದ ಕಾಮಗಾರಿ ಆರಂಭಿಸಲಾಗಿತ್ತು. 20 ತಿಂಗಳ ಒಳಗೆ ಕಾಮಗಾರಿ ಮುಗಿಸಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಆದರೆ, ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಈಗಾಗಲೇ ಶೇ.80 ಕಾಮಗಾರಿ ಮುಗಿಸಲಾಗಿದೆ ಎಂದು ಇಲಾಖೆ ಹೇಳುತ್ತಿದೆ. ಆದರೆ ಕಾಮಗಾರಿ ಇನ್ನೂ ಅಪೂರ್ಣವಾಗಿದ್ದು 2 ವರ್ಷ ಮುಗಿದಿದ್ದರೂ ಪೂರ್ಣಗೊಂಡಿಲ್ಲ.
ಚಾವಣಿ ಸೋರುತ್ತಿದೆ: ದೇಗುಲದ ಚಾವಣಿ ಇತ್ತೀಚೆಗೆ ಸುರಿದ ಮಳೆಯಿಂದ ನೀರು ಸೋರಿಕೆಯಾಗುತ್ತಿದೆ. ಇದರಿಂದ ದೇಗುಲದ ತುಂಬೆಲ್ಲಾ ನೀರು ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಇದರೊಂದಿಗೆ ಕಾಮಗಾರಿ ಕಳೆದ 5-6 ತಿಂಗಳಿನಿಂದಲೂ ನಿಂತು ಹೋಗಿದೆ. ಇದಕ್ಕೆ ಅನುದಾನದ ಕೊರತೆ ಇರುವುದೇ ಕಾರಣ ಎಂಬ ನೆಪವನ್ನು ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.
ಭಕ್ತರ ಪರದಾಟ: ದೇಗುಲ ಜೀರ್ಣೋದ್ಧಾರ ಕಾಮಗಾರಿ ಆರಂಭವಾದ ಹಿನ್ನೆಲೆಯಲ್ಲಿ ದೇವಸ್ಥಾನದ ಮುಂಭಾಗದಲ್ಲಿ ಬಾಲಾಲಯ ಮಾಡಿ ಮರದಿಂದ ದೇವರ ಮೂರ್ತಿಯನ್ನು ಕೆತ್ತಿ ಇದಕ್ಕೆ ಪೂಜೆ ಸಲ್ಲಿಸಲಾಗುತ್ತಿದೆ. ಈ ಸ್ಥಳ ಕಿರಿದಾಗಿದೆ. ಆದರೂ, ಶನಿವಾರ ಹಾಗೂ ರಜಾ ದಿನಗಳಂದು ಭಕ್ತರ ದಂಡು ಆಗಮಿಸುತ್ತದೆ. ಕಿಷ್ಕಿಂದೆಯಂತಿರುವ ಈ ಸ್ಥಳದಲ್ಲಿ ಕಾಲಿಡಲೂ ಪರದಾಡುವ ಪರಿಸ್ಥಿತಿಯಿದೆ. ದೇವಸ್ಥಾನ ಜೀರ್ಣೋದ್ಧಾರ ಮಾಡಬೇಕಾದ ಇಲಾಖೆ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಅವ್ಯವಸ್ಥೆಗೆ ಕಾರಣವೆಂದು ದೇಗುಲದ ಮಾಜಿ ಧರ್ಮದರ್ಶಿ ಎನ್.ದೊರೆಸ್ವಾಮಿ ಆರೋಪಿಸಿದ್ದಾರೆ.
ಶಾಸಕರ ನಿರ್ಲಕ್ಷ್ಯ: ಸ್ಥಳೀಯ ಶಾಸಕ ಎನ್.ಮಹೇಶ್ ಆರಂಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ಶೀಘ್ರ ಆರಂಭಿಸಿ ಪೂರ್ಣಗೊಳಿಸುವ ಭರವಸೆಯನ್ನು ಇಲ್ಲಿ ನಡೆದ ಅನೇಕ ಸಭೆ ಸಮಾರಂಭಗಳಲ್ಲಿ ನೀಡಿದ್ದರು. ಅಲ್ಲದೆ, ರಥ ಪುನರ್ ನಿರ್ಮಿಸುವ ಕೆಲಸಕ್ಕೂ ಚುರುಕು ನೀಡಲಾಗುವುದು ಎಂದಿದ್ದರು. ಆದರೆ ಇನ್ನೂ, ಭರವಸೆ ಈಡೇರಿಲ್ಲ. ಇವರ ನಿರ್ಲಕ್ಷ್ಯವೂ ಕಾಮಗಾರಿ ವಿಳಂಬವಾಗಲು ಕಾರಣ ಎಂಬುದು ಕಾಂತರಾಜು ಸೇರಿದಂತೆ ಹಲವು ಭಕ್ತರ ಆರೋಪವಾಗಿದೆ.
ಶೀಘ್ರ ಕ್ರಮ ವಹಿಸುತ್ತೇನೆ: ದೇವಸ್ಥಾನದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಮೇಲ್ಛಾವಣಿ ಸೋರುತ್ತಿರುವ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಪತ್ರ ರವಾನಿಸಲಾಗಿದೆ. ಆದಷ್ಟು ಬೇಗ ಇದನ್ನು ದುರಸ್ತಿಗೊಳಿಸಿ ದೇಗುಲದ ಉದ್ಘಾಟನೆಗೆ ಕ್ರಮ ವಹಿಸಲಾಗುವುದು ಎಂಬ ಭರವಸೆ ಇದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ಪ್ರಸಾದ್ “ಉದಯವಾಣಿ’ಗೆ ಮಾಹಿತಿ ನೀಡಿದರು.
ತೇರಿನ ಕೆಲಸವೂ ಆರಂಭಗೊಂಡಿಲ್ಲ: ಬಿಳಿಗಿರಿ ರಂಗನಾಥನ ರಥ ಬೀದಿಯಲ್ಲಿನ ದೊಡ್ಡ ತೇರು ಶಿಥಿಲಗೊಂಡಿದೆ. ಇದನ್ನು ದುರಸ್ತಿ ಮಾಡಲು ಈಗಾಗಲೇ 1 ಕೋಟಿ. ರೂ. ಬಿಡುಗಡೆಯಾಗಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಈ ಕಾಮಗಾರಿಗೂ ಚಾಲನೆ ನೀಡಿದ್ದರು. ಆದರೆ, ಇದು ಇನ್ನೂ ಆರಂಭಗೊಂಡಿಲ್ಲ. ಕಳೆದ 3 ವರ್ಷಗಳಿಂದಲೂ ರಥೋತ್ಸವವೇ ನಡೆದಿಲ್ಲ. ಇದಕ್ಕೂ ಗ್ರಹಣ ಹಿಡಿದಿದೆ ಎಂಬುದು ಭಕ್ತರ ದೂರು.
* ಫೈರೋಜ್‌ಖಾನ್