Advertisement

ಬಿಸಿಲು ಬೇಗೆ ಎದುರಿಸಲು ಸನ್ನದ್ಧ ..!

10:08 AM Feb 28, 2019 | |

ಬೀಳಗಿ: ಬೇಸಿಗೆ ಸಮೀಪಿಸುತ್ತಿದೆ. ಬಿಸಿಲಿನ ತಾಪಮಾನವೂ ಹೆಚ್ಚುತ್ತಿದೆ. ಕುಡಿಯುವ ನೀರು, ದನ-ಕರುಗಳಿಗೆ ಮೇವು ಒದಗಿಸುವುದು ಈ ಸಂದರ್ಭದಲ್ಲಿ ಸವಾಲಿನ ಕೆಲಸವಾಗಿದೆ. ಈ ಎಲ್ಲ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ತಾಲೂಕು ಆಡಳಿತ ಸಜ್ಜಾಗಿದೆ.

Advertisement

ಮೇ, ಜೂನ್‌ ತಿಂಗಳವರೆಗೆ ಜನರ ಬೆವರಿಳಿಸಲಿರುವ ಬಿಸಿಲಿನ ಬೇಗೆಯನ್ನು ಅತ್ಯಂತ ವ್ಯವಸ್ಥಿತವಾಗಿ ಎದುರಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು ಕೆಲ ಸಭೆಗಳನ್ನು ನಡೆಸಿವೆ. ಬೇಸಿಗೆಯನ್ನು ಸಮರ್ಥವಾಗಿ ಎದುರಿಸುವಲ್ಲಿ ಕಂದಾಯ, ಆರ್‌ಡಬ್ಲ್ಯೂ ಎಸ್‌ ಹಾಗೂ ತಾಲೂಕು ಪಂಚಾಯತಗಳ ಪಾತ್ರ ಅತ್ಯಂತ ಪ್ರಮುಖವಾಗಿರುವುದನ್ನು ಅಲ್ಲಗಳೆಯುವಂತಿಲ್ಲ. ಈಗಾಗಲೇ ಈ ಮೂರೂ ಇಲಾಖೆಗಳು ಬೇಸಿಗೆಯ ಸವಾಲು ಎದುರಿಸಲು ಜಂಟಿ ಸಮರಕ್ಕೆ ಸಿದ್ಧವಾಗಿವೆ.

1.37 ಕೋಟಿ ಅನುದಾನ: 2018 ನವೆಂಬರ್‌ 30 ರಂದು ಕೇಂದ್ರದ ಕಾಯ್ದಿರಿಸಿದ ನಿ ಧಿಯಿಂದ 30 ಲಕ್ಷ ರೂ. ಈಗಾಗಲೇ ಬಂದಿದೆ. ಹಿಂದಿನ ಸಿಆರ್‌ಎಫ್‌ ನಿ ಧಿಯ 7.95 ಲಕ್ಷ ರೂ.ಗಳ ಶಿಲ್ಕು ಕಂದಾಯ ಇಲಾಖೆ ಬಳಿಯಿದೆ. ಬರ ಪೀಡಿತ ತಾಲೂಕೆಂದು ಘೋಷಣೆಯಾಗಿರುವ ಬೀಳಗಿ ತಾಲೂಕಿಗೆ ಬೇಸಿಗೆ ನಿರ್ವಹಣೆಗೆಂದು 1 ಕೋಟಿ ಅನುದಾನ ಮಂಜೂರಾಗಿದೆ. ಒಟ್ಟು 1.37 ಕೋಟಿ ರೂ. ಬೇಸಿಗೆ ನಿರ್ವಹಣೆಗಿದೆ.

ಕುಡಿವ ನೀರಿನ ಮೂಲ: ಬೀಳಗಿ ನಗರ ಸೇರಿದಂತೆ ತಾಲೂಕಿನಲ್ಲಿ ಒಟ್ಟು 82 ಶುದ್ಧ ಕುಡಿವ ನೀರಿನ ಘಟಕಗಳಿವೆ. 75 ಚಾಲ್ತಿಯಿದ್ದು, 7 ಸ್ಥಗಿತಗೊಂಡಿವೆ. ಇನ್ನು ತಾಲೂಕಿನಾದ್ಯಂತ ಒಟ್ಟು 268 ಕೈ ಪಂಪ್‌ ಗಳಿವೆ. 169 ಚಾಲ್ತಿಯಿದ್ದು, 71 ಸ್ಥಗಿತಗೊಂಡಿವೆ. 28 ಕೈ ಪಂಪ್‌ ರಿಪೇರಿ ಕಾಣಬೇಕಿದೆ. ಇನ್ನು ಒಟ್ಟು 229 ಕಿರು ನೀರು ಪೂರೈಕೆ ವ್ಯವಸ್ಥೆಯಿದೆ. 189 ಚಾಲ್ತಿಯಲ್ಲಿವೆ. 15 ರಿಪೇರಿಯಲ್ಲಿವೆ. 25 ಸ್ಥಗಿತಗೊಂಡಿವೆ. ಒಟ್ಟು 101 ಕೊಳವೆ ನೀರು ಪೂರೈಕೆಯಿದೆ. ಇದರಲ್ಲಿ 93 ಚಾಲ್ತಿಯಿದ್ದು, 1 ರಿಪೇರಿಯಿದೆ. 7 ಸ್ಥಗಿತಗೊಂಡಿರುವ ಕುರಿತು ಇಲಾಖೆ ಮಾಹಿತಿ ನೀಡಿದೆ.

ಎಲ್ಲಿ ಸಮಸ್ಯೆಯಾಗಬಹುದು ?: ಸದ್ಯ ಕುಡಿವ ನೀರಿನ ಸಮಸ್ಯೆಯಿರದ ತಾಲೂಕಿನ ಹೊನ್ನಿಹಾಳ, ಕೊಪ್ಪ ಎಸ್‌.ಕೆ, ಶಿರಗುಪ್ಪಿ, ಗಿರಿಸಾಗರ, ಜಾನಮಟ್ಟಿ, ಸೊನ್ನ, ಬಿಸನಾಳ, ತೆಗ್ಗಿ, ಕುಂದರಗಿ, ಬಳ್ಳೂರ ಶೆಡ್‌, ಸುನಗ, ಸಿದ್ದಾಪೂರ ಎಲ್‌ಟಿ, ನಾಗರಾಳ ಎಲ್‌ಟಿ, ನಾಗರಾಳ, ಕೊಂತಿಕಲ್ಲ, ಬಾಡಗಿ, ಬೂದಿಹಾಳ ಎಸ್‌ಜಿ, ಗುಳಬಾಳ, ಅನಗವಾಡಿ, ತುಂಬರಮಟ್ಟಿ, ಕಡಪಟ್ಟಿ, ಯಳ್ಳಿಗುತ್ತಿ, ಕೊರ್ತಿ ಶೆಡ್‌, ಬಂಡೆಮ್ಮ ನಗರ, ಗಡದಿನ್ನಿ ತೋಟ ಹಾಗೂ ಢವಳೇಶ್ವರ ತೋಟದ ವಸ್ತಿ, ಗಲಗಲಿ, ಕಂದಗಲ್ಲ, ಕೋಲೂರ ಸೇರಿದಂತೆ 87 ಜನವಸತಿ ಪ್ರದೇಶಗಳ ಪೈಕಿ, 29 ಜನವಸತಿ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಅಪಾಯವಿದೆ. 

Advertisement

ಪರಿಹಾರವೇನು: ಕುಡಿವ ನೀರಿನ ಸಮಸ್ಯೆ ಉದ್ಭವಿಸಲಿರುವ ಪ್ರದೇಶಗಳಲ್ಲಿ ಹೊಸ ಕೊಳವೆ ಬಾವಿ ಕೊರೆಸುವುದು, ಖಾಸಗಿ ಕೊಳವೆ ಬಾವಿಗಳಿಂದ ಒಪ್ಪಂದದ ಮೇರೆಗೆ ನೀರು ಪಡೆಯುವುದು ಹಾಗೂ ಟ್ಯಾಂಕರ್‌ ಮೂಲಕ ತುರ್ತು ಕುಡಿವ ನೀರು ಪೂರೈಸುವ ಮೂಲಕ ಸಮಸ್ಯೆ ನೀಗಿಸಲು ಇಲಾಖೆ ಸಜ್ಜಾಗಿದೆ. 

ಸುನಗ ಮತ್ತು ಕುಂದರಗಿ ಜಿಪಂ ವ್ಯಾಪ್ತಿಯ ಸುಮಾರು ಹನ್ನೊಂದು ಹಳ್ಳಿಗಳಿಗೆ ಕುಡಿಯಲು ಶುದ್ಧ ನೀರಿಲ್ಲ. ಬಹುಗ್ರಾಮ ಕುಡಿವ ನೀರು ಯೋಜನೆಯ ಹಳ್ಳಿಗೂ ಕಳೆದ ಒಂದು ತಿಂಗಳಿಂದ ನೀರು ಬರುತ್ತಿಲ್ಲ. ಇಲ್ಲಿನ ನದಿ ಬತ್ತಿ ಹೋಗಿದೆ. ಪರಿಣಾಮ, ಕೊಳವೆ ಬಾವಿಯ ಫ್ಲೋರೈಡ್‌ಯುಕ್ತ ನೀರನ್ನು  ಶ್ರಯಿಸುವಂತಾಗಿದೆ. ಇದರಿಂದ ಜನ-ಜಾನುವಾರುಗಳ ಆರೋಗ್ಯ ಮೇಲೆ ಪರಿಣಾಮ ಬೀರಿದೆ. ಕೂಡಲೇ ನದಿಗೆ ನೀರು ಬಿಡಬೇಕು. ಇಲ್ಲವಾದರೆ ಶುದ್ಧ ಕುಡಿವ ನೀರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು.
.ಮಲ್ಲು ಹೋಳಿ, ಚಿಕ್ಕಾಲಗುಂಡಿ

ತಾಲೂಕಿನಲ್ಲಿ ಒಟ್ಟು 87 ಜನ ವಸತಿ ಪ್ರದೇಶಗಳಿದ್ದು, 1,60,264 ಜನಸಂಖ್ಯೆಯಿದೆ. ಅಲ್ಲದೆ, 1,29,335 ಜಾನುವಾರುಗಳಿವೆ. ಇದುರೆಗೂ ತಾಲೂಕಿನ ಯಾವುದೇ ಜನವಸತಿ
ಪ್ರದೇಶದಲ್ಲಿ ಕುಡಿವ ನೀರು, ಮೇವಿನ ಸಮಸ್ಯೆ ಕುರಿತು ವರದಿಯಾಗಿಲ್ಲ. ಇದೀಗ ಬೇಸಿಗೆಯ ಆರಂಭ. ಸುಮಾರು ನಾಲ್ಕು ತಿಂಗಳು ಆವರಿಸಲಿರುವ ಬೇಸಿಗೆಯಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರು, ಮೇವು ಇತ್ಯಾದಿ
ಸಮಸ್ಯೆಗಳು ಎದುರಾಗಬಹುದು. ಸಮಸ್ಯೆ ನಿರ್ವಹಣೆಗೆ ತಾಲೂಕು ಆಡಳಿತ ಸಿದ್ಧತೆ ಮಾಡಿಕೊಂಡಿದೆ. 18 ವಾರಕ್ಕಾಗುವಷ್ಟು 30647.82 ಎಂ.ಟಿ. ಮೇವು ಸದ್ಯ ಲಭ್ಯವಿದೆ. ಅಲ್ಲದೆ ತಾಲೂಕಿನ ಅನಗವಾಡಿ ಬಳಿ ಬಿಳಿಜೋಳ ದಂಟಿನ ಮೇವು ಸಂಗ್ರಹಕ್ಕೂ ಕ್ರಮ ಕೈಗೊಳ್ಳಲಾಗಿದೆ. 
. ಉದಯ ಕುಂಬಾರ
ತಹಶೀಲ್ದಾರ್‌, ಬೀಳಗಿ

„ರವೀಂದ್ರ ಕಣವಿ

Advertisement

Udayavani is now on Telegram. Click here to join our channel and stay updated with the latest news.

Next