ಬೆಂಗಳೂರು: ವಿಮಾನದಲ್ಲಿ ಬಂದು ಬೆಂಗಳೂರಿನಲ್ಲಿ ದುಬಾರಿ ಮೌಲ್ಯದ ದ್ವಿಚಕ್ರ ವಾಹನಗಳನ್ನು ಕದ್ದು ಮಾರಾಟ ಮಾಡಿ, ಅದರಿಂದ ಬಂದ ಹಣದಲ್ಲಿ ಯುಟ್ಯೂಬ್ ಚಾನೆಲ್ ಹಾಗೂ ಆಲ್ಪಂ ಸಾಂಗ್ಸ್ ತಯಾರಿಸುತ್ತಿದ್ದ ರಾಜಸ್ಥಾನದ ಯುಟ್ಯೂಬ್ ಹೀರೋ ಸೇರಿ ಮೂವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನ ಮೂಲದ ವಿಕಾಸ್ ಕುಮಾರ್ ಅಲಿಯಾಸ್ ವಿಕ್ಕಿ ಬಿಶೋನಾಯ್ (26), ಧವಳ್ ದಾಸ್(28) ಮತ್ತು ದಶರಥ (30) ಬಂಧಿತರು. ಅವರಿಂದ 32,70 ಲ. ರೂ. ಮೌಲ್ಯದ ದುಬಾರಿ ಮೌಲ್ಯದ ಕೆಟಿಎಂ, ಬುಲೆಟ್, ಪಲ್ಸರ್ ಸೇರಿ ವಿವಿಧ ಮಾದರಿಯ 26 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳ ಪೈಕಿ ವಿಕಾಸ್ ಕುಮಾರ್ 3 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಮೆಕ್ಯಾನಿಕ್ ಆಗಿದ್ದ. ಬಳಿಕ ಕೊರೊನಾ ಕಾರಣದಿಂದ ರಾಜಸ್ಥಾನಕ್ಕೆ ಹೋಗಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಧವಳದಾಸ್ ಮತ್ತು ದಶರಥ ಹಾರ್ಡ್‌ವೇರ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದರು. ವಿಕಾಸ್ ಕುಮಾರ್ ಮೆಕ್ಯಾನಿಕ್ ಆಗಿದ್ದರಿಂದ ಬೈಕ್ ಕಳವು ಮಾಡುವಂತೆ ಸ್ನೇಹಿತರನ್ನು ಪ್ರಚೋದಿಸುತ್ತಿದ್ದ. ವಿಕಾಸ್ ಕುಮಾರ್ ರಾಜಸ್ಥಾನದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾನೆ. ಬೈಕ್ ಕಳವಿಗಾಗಿ ರಾಜಸ್ಥಾನದಿಂದ ಬೆಂಗಳೂರಿಗೆ ವಿಮಾನದಲ್ಲಿ ಬರುತ್ತಿದ್ದ ಎಂದು ವಿಜಯನಗರ ಉಪವಿಭಾಗದ ಎಸಿಪಿ ನಂಜುಂಡೇ ಗೌಡ ತಿಳಿಸಿದ್ದಾರೆ.
ರಾಜಸ್ಥಾನಕ್ಕೆ ಕೊಂಡೊಯ್ಯುತ್ತಿದ್ದ!: ನಕಲಿ ದಾಖಲೆ ಹಾಗೂ ನಂಬರ್ ಪ್ಲೇಟ್ ಹಾಕಿಕೊಂಡು ಕೆಟಿಎಂ, ಬುಲೆಟ್‌ಗಳನ್ನು ವಿಕಾಸ್ ಕುಮಾರ್ ರಾಜಸ್ಥಾನಕ್ಕೆ ಕೊಂಡೊಯ್ದು ಅಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.
ಯುಟ್ಯೂಬ್ ಚಾನಲ್ ನಿರ್ಮಾಣ!:
ವಿಕಾಸ್ ಕುಮಾರ್ ವಿಕ್ಕಿ ಬಿಶೋನಾಯ್ ಎಂಬ ಯುಟ್ಯೂಬ್ ಚಾನೆಲ್ ನಿರ್ಮಾಣ ಮಾಡಿದ್ದಾನೆ. ಪ್ರೇಯಸಿ ಜತೆ ಸೇರಿಕೊಂಡು 2-3 ಆಲ್ಬಂ ಸಾಂಗ್‌ಗಳನ್ನು ನಿರ್ಮಾಣ ಮಾಡಿ, ಹಣ ಸಂಪಾದಿಸುತ್ತಿದ್ದ. ಜತೆಗೆ ಇನ್‌ಸ್ಟ್ರಾಗಾಮ್‌ನಲ್ಲಿ ಸಾವಿರಾರು ಮಂದಿ ಅಭಿಮಾನಿಗಳನ್ನು ಹೊಂದಿರುವುದು ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು.