Advertisement

ಬಿಕರ್ನಕಟ್ಟೆ ಸರ್ವಿಸ್‌ ರಸ್ತೆ ದುರಸ್ತಿಗೆ ಕಾಣಿಕೆ ಡಬ್ಬಿ!

05:21 PM Feb 08, 2022 | Team Udayavani |

ಬಿಕರ್ನಕಟ್ಟೆ: ನಗರದ ಹಲವು ಕಡೆಗಳಲ್ಲಿ ರಸ್ತೆಗಳು ಅವ್ಯವಸ್ಥೆಯಿಂದ ಕೂಡಿದೆ. ಬಿಕರ್ನಕಟ್ಟೆ ಮೇಲ್ಸೇತುವೆ ಕೆಳಗಿನ ಸರ್ವಿಸ್‌ ರಸ್ತೆ ಹಲವು ತಿಂಗಳುಗಳಿಂದ ಗುಂಡಿ ಬಿದ್ದಿದ್ದು, ಸಂಬಂಧಪಟ್ಟವರು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಇದೀಗ ಸಾರ್ವಜನಿಕರು ಈ ರಸ್ತೆ ಸರಿಪಡಿಸಲು ಹಣ ಒಂದುಗೂಡಿಸುವ ನಿಟ್ಟಿನಲ್ಲಿ ರಸ್ತೆಯ ಬದಿಯಲ್ಲಿ ಕಾಣಿಕೆ ಡಬ್ಬಿ ಇಟ್ಟಿದ್ದಾರೆ !

Advertisement

“ಈ ರಸ್ತೆ ಸರಿಪಡಿಸಲು ಕಾಣಿಕೆ ಡಬ್ಬಿ …. ಇಲ್ಲಿ ಒಟ್ಟಾದ ಹಣವನ್ನು ಈ ರಸ್ತೆ ಸರಿಪಡಿಸುವ ಸಲುವಾಗಿ ನಮ್ಮ ಜನಪ್ರತಿನಿಧಿಗಳಿಗೆ ನೀಡಲಾಗುವುದು’ ಎಂಬ ಬೋರ್ಡ್‌ ಹಾಕಲಾಗಿದೆ. ಅದರ ಬಳಿಯೇ ಕಾಣಿಕೆ ಡಬ್ಬಿ ಇಡಲಾಗಿದೆ. ಈ ಭಾಗದ ರಸ್ತೆ ಸಮಸ್ಯೆಯಿಂದಾಗಿ ಸಾರ್ವಜನಿಕರು, ವಾಹನ ಸವಾರರು ರೋಸಿ ಹೋಗಿದ್ದಾರೆ. ರಸ್ತೆ ಗುಂಡಿ ಬಿದ್ದ ಪರಿಣಾಮ ಸುತ್ತಮುತ್ತ ಹಲವಾರು ಗಂಟೆ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ. ಈ ಕುರಿತಂತೆ ಸಾರ್ವಜನಿಕರು ಈಗಾಗಲೇ ಸ್ಥಳೀಯಾಡಳಿತ, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳುವಂತೆ ಬಿಕರ್ನಕಟ್ಟೆ ಬಳಿ ಚರಂಡಿ ವ್ಯವಸ್ಥೆ ಇಲ್ಲ. ಮಳೆ ನೀರು ರಸ್ತೆಯಲ್ಲೇ ಹರಿಯುತ್ತದೆ. ಇದರಿಂದ ರಸ್ತೆ ಕೆಟ್ಟು ಹೋಗುತ್ತದೆ ಎನ್ನುತ್ತಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಬ್ಬರು “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, “ಬಿಕರ್ನಕಟ್ಟೆ ಮೇಲ್ಸೇತುವೆ ಸರ್ವಿಸ್‌ ರಸ್ತೆ ಗುಂಡಿ ಬಿದ್ದಿದೆ. ಡಾಮರು ಅಳವಡಿಸುವ ಕುರಿತು ಈಗಾಗಲೇ ಟೆಂಡರ್‌ ಕರೆಯಲಾಗಿದೆ. ಟೆಂಡರ್‌ ಅಂತಿಮಗೊಳ್ಳಲು ಕಾಲಾವಕಾಶ ಬೇಕು. ಈ ನಿಟ್ಟಿನಲ್ಲಿ ತತ್‌ಕ್ಷಣಕ್ಕೆ ಕೆಲವೇ ದಿನಗಳಲ್ಲಿ ತಾತ್ಕಾಲಿಕ ಡಾಮರು ಹಾಕುತ್ತೇವೆ’ ಎನ್ನುತ್ತಾರೆ.

ಪಾಲಿಕೆ-ಹೆದ್ದಾರಿ ಸಮನ್ವಯ ಕೊರತೆ
ಪಾಲಿಕೆ ವ್ಯಾಪ್ತಿಯ ಒಳ ರಸ್ತೆ ಸಹಿತ ಮುಖ್ಯ ರಸ್ತೆಯಲ್ಲಿ ಪಾಲಿಕೆ ವತಿಯಿಂದಲೇ ಡಾಮರು ಮಾಡಲಾಗುತ್ತದೆ. ಆದರೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವಿಸ್‌ ರಸ್ತೆಗೆ ಡಾಮರು ಅಳವಡಿಸುವ ಸಂದರ್ಭ ಹಲವು ಸಮಸ್ಯೆ ಎದುರಾಗುತ್ತದೆ. ಸರ್ವಿಸ್‌ ರಸ್ತೆಯಲ್ಲಿ ಒಳಚರಂಡಿ ವ್ಯವಸ್ಥೆ ಪಾಲಿಕೆಯ ಜವಾಬ್ದಾರಿಯಾಗಿದ್ದರೆ, ಡಾಮರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಳವಡಿಸಬೇಕು. ಆದರೆ ಈ ಇರಡೂ ಇಲಾಖೆ ಸಮನ್ವಯತೆ ಕೊರತೆಯಿಂದಾಗಿ ಸಮಸ್ಯೆ ಇತ್ಯರ್ಥಕ್ಕೆ ಸಮಯ ತಗಲುತ್ತಿದೆ. ಈಗ ಬಿಕರ್ನಕಟ್ಟೆಯಲ್ಲಿಯೂ ಇದೇ ರೀತಿ ಸಮಸ್ಯೆ ಎದುರಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next