ಮರವಂತೆ(ಉಪ್ಪುಂದ): ಬಿಜೂರು ಗ್ರಾಮದ ಬವಳಾಡಿ ಮಾರ್ಗವಾಗಿ ಸಾಗುವ ರಸ್ತೆ ಬದಿ ಗಿಡಬಳ್ಳಿಗಳಿಂದ ಕೂಡಿದ್ದು ಸತ್ಯಸಾಯಿ ಬಾಬಾ ಸಂಘದ ಸದಸ್ಯರು ಹಾಗೂ ಸ್ಥಳೀಯ ಸಾರ್ವಜನಿಕರು ಶ್ರಮದಾನದ ಮೂಲಕ ತೆರವುಗೊಳಿಸಿದರು.
ಸಾರ್ವಜನಿಕರು ಉಪ್ಪುಂದ ಪೇಟೆಯಿಂದ ಬಿಜೂರು ಕಂಚಿಕಾನ್ ಮಾರ್ಗ ವಾಗಿ ಬವಳಾಡಿಗೆ ಸಂಚರಿಸುವ ಪ್ರಮುಖ ರಸ್ತೆಯಲ್ಲಿ 100 ಮೀ. ದೂರದಷ್ಟು ಪೊದೆಗಳಿಂದ ರಸ್ತೆಯ ಅರ್ಧ ಭಾಗ ದಷ್ಟು ಸಂಪೂರ್ಣ ಮುಚ್ಚಿಹೋಗಿದ್ದು, ಇದರಿಂದ ಸಾರ್ವಜನಿಕರಿಗೆ ಸಂಚರಿಸಲು ತೊಂದರೆಯಾಗುತ್ತಿತ್ತು ಮತ್ತು ಭಯದ ವಾತಾವರಣ ನಿರ್ಮಾಣವಾಗಿತ್ತು.
ಸ್ಥಳೀಯ ಸಂಘ ಸಂಸ್ಥೆ ಶ್ರೀ ಸತ್ಯಸಾಯಿಬಾಬಾ ಸದಸ್ಯರು ಮತ್ತು ಊರಿನ ಗ್ರಾಮಸ್ಥರು ಒಂದು ದಿನ ಶ್ರಮದಾನ ನಡೆಸಿ ರಸ್ತೆ ಇಕ್ಕೆಲಗಳಲ್ಲಿ ಹಬ್ಬಿರುವ ಗಿಡಗಳನ್ನು ಕಡಿಯುವುದರ ಮೂಲಕ ವಾಹನ ಸಂಚಾರಕ್ಕೆ ಹಾಗೂ ಸಾರ್ವಜನಿಕರು ಭಯ ಮುಕ್ತವಾಗಿ ಪ್ರಯಾಣಿಸುವಂತೆ ಮಾಡಿದರು.
ಶ್ಲಾಘನೆ
ದಿನನಿತ್ಯ ಸಂಚಾರಕ್ಕೆ ತೊಡಕಾಗಿರುವ ಗಿಡಗಂಟಿಗಳನ್ನು ತೆರವುಗೊಳಿಸಿರುವ ಕಾರ್ಯಕ್ಕೆ ಊರಿನ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಶಿಕ್ಷಕ ಗಣೇಶ ಪೂಜಾರಿ ಶ್ರಮದಾನದ ನೇತೃತ್ವವನ್ನು ವಹಿಸಿದ್ದು, ಶೇಖರ, ಮಂಜು ಪೂಜಾರಿ, ಗೋಪಾಲ, ಗಣೇಶ, ಗೋವಿಂದ, ಉದಯ ಮೊದಲಾದವರು ಭಾಗವಹಿಸಿದ್ದರು.