ಮಹಾನಗರ: ಬಿಜೈನಲ್ಲಿ ಬಹು ಮಹಡಿ ವಸತಿ ಕಟ್ಟಡದ 7ನೇ ಮಾಳಿಗೆಯ ಒಂದು ಮನೆಯಲ್ಲಿ ಗುರುವಾರ ಅಪರಾಹ್ನ ಅಗ್ನಿ ದುರಂತ ಸಂಭವಿಸಿದ್ದು, ಯಾರಿಗೂ ಅಪಾಯ ಉಂಟಾಗಿಲ್ಲ. ಆದರೆ, ಬೆಂಕಿಗೆ ಮನೆಯೊಳಗಿನ ಕೋಣೆಯೊಂದರಲ್ಲಿದ್ದ ವಸ್ತುಗಳೆಲ್ಲವೂ ಸುಟ್ಟು ಕರಕಲಾಗಿವೆ. ಅಷ್ಟೇಅಲ್ಲ, ಈ ಬೆಂಕಿ ಆಕಸ್ಮಿಕದಿಂದಾಗಿ ಇಡೀ ಅಪಾರ್ಟ್‌ಮೆಂಟ್‌ನ ನಿವಾಸಿಗಳೆಲ್ಲ ತಮ್ಮ ಮನೆಗಳಿಂದ ಹೊರಬಂದು ಆತಂಕಕ್ಕೆ ಒಳಗಾಗಿದ್ದರು.
ಈ ಮನೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರು, ಓರ್ವ ಮಹಿಳೆ ಬಾಡಿಗೆಗೆ ವಾಸ್ತವ್ಯ ಮಾಡುತ್ತಿದ್ದು, ಅವರು ಮನೆಗೆ ಬೀಗ ಹಾಕಿ ಕಾಲೇಜಿಗೆ ಹೋಗಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದ್ದರಿಂದ ಪ್ರಾಣಾಪಾಯ ತಪ್ಪಿತು. ಅಗ್ನಿ ಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದರು. ಸ್ಥಳೀಯ ಸಾರ್ವಜನಿಕರು ಮತ್ತು ಪೊಲೀಸರು ಸಹಕರಿಸಿದರು.
ಲಾಲ್‌ಬಾಗ್-ಬಿಜೈ ರಸ್ತೆಯ ಬಿಜೈ ಮಾರ್ಕೆಟ್ ಸಮೀಪದ ‘ದೀಪಾಂಜಲಿ’ ಅಪಾರ್ಟ್‌ಮೆಂಟ್‌ನ 701ನೇ ಫ್ಲ್ಯಾಟ್‌ನಲ್ಲಿ ಅಪರಾಹ್ನ ಸುಮಾರು 3.30ರ ವೇಳೆಗೆ ಬೆಂಕಿ ಅವಘಡ ಸಂಭವಿಸಿದೆ. ರಾಹುಲ್ ಅತ್ತಾವರ ಅವರು ಈ ಮನೆಯ ಮಾಲಕರಾಗಿದ್ದು. ಅವರು ಇದನ್ನು ನಗರದ ಕಾಲೇಜೊಂದರ ಫಿಸಿಯೋಥರಪಿ ವಿದ್ಯಾರ್ಥಿನಿಯರಿಗೆ ಬಾಡಿಗೆಗೆ ನೀಡಿದ್ದಾರೆ. ಹಾಗೆಯೇ ಇಬ್ಬರು ವಿದ್ಯಾರ್ಥಿಯರು ಈ ಅಪಾರ್ಟ್‌ಮೆಂಟ್ ನಲ್ಲಿ ಸುಮಾರು ಒಂದು ವರ್ಷದಿಂದ ವಾಸ್ತವ್ಯವಿದ್ದರು. ಒಂದು ವಾರದ ಹಿಂದೆಯಷ್ಟೇ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು ಬಂದು ಆ ವಿದ್ಯಾರ್ಥಿಗಳ ಜತೆಗೆ ವಾಸ್ತವ್ಯ ಮಾಡುತ್ತಿದ್ದರು.
ಈ ಮನೆಯಲ್ಲಿದ್ದ ಮೂವರ ಪೈಕಿ ವಿದ್ಯಾರ್ಥಿನಿಯರು ಬೆಳಗ್ಗೆ ಕಾಲೇಜಿಗೆ ತೆರಳಿದ್ದರು. ಇನ್ನು ಮಹಿಳೆಯು ಮಧ್ಯಾಹ್ನ ಸುಮಾರು 11 ಗಂಟೆಗೆ ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗಿದ್ದರು. ಅನಂತ ರದಲ್ಲಿ ಆಕಸ್ಮಿಕವಾಗಿ ಬೆಂಕಿ ಅನಾಹುತ ಸಂಭವಿಸಿದೆ.
ಸುಮಾರು 3.30ರ ವೇಳೆಗೆ ಅಪಾರ್ಟ್ ಮೆಂಟ್‌ನ ಮೇಲ್ಭಾಗದ ಫ್ಲ್ಯಾಟ್‌ನ ಕಿಟಿಕಿಗಳ ಮೂಲಕ ಹೊಗೆ ಹೊರಗೆ ಬರುತ್ತಿರುವುದನ್ನು ಸುತ್ತ ಮುತ್ತಲ ಜನರು ಗಮನಿಸಿ, ಪರಿಶೀಲಿಸಿದಾಗ ಬೆಂಕಿ ಅವಘಡ ಸಂಭವಿಸಿರುವುದು ಖಚಿತವಾಗಿತ್ತು. ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಕೂಡಲೇ ಮಾಹಿತಿ ನೀಡಿ ಹೊರಗೆ ಬರುವಂತೆ ತಿಳಿಸಿ, ಕಟ್ಟಡದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ, ಪೊಲೀಸ್ ಮತ್ತು ಅಗ್ನಿ ಶಾಮಕ ದಳ ದವರಿಗೆ ಸುದ್ದಿ ಮುಟ್ಟಿಸಿದರು. ಬಳಿಕ ಜನರು 7ನೇ ಮಾಳಿಗೆ ತನಕ ಮೆಟ್ಟಲು ಹತ್ತಿ ಪರಿಶೀಲಿಸಿದಾಗ 701ನೇ ಮನೆಯ ಕಿಟಿಕಿಯಿಂದ ಹೊಗೆ ಬರುತ್ತಿರುವುದು ಗೊತ್ತಾಯಿತು. ಬೀಗ ಹಾಕಿದ್ದರಿಂದ ಬಾಗಿಲು ಮುರಿದು ಒಳಗೆ ಹೋಗಲು ಪ್ರಯತ್ನಿಸಿದರು. ಅಗ್ನಿ ಶಾಮಕದಳ ದವರು ಕಾರ್ಯಾಚರಣೆ ಆರಂಭಿಸಿದರು.
ಮನೆಯ ಒಳಗಿನಿಂದ ಹೊಗೆ ಮತ್ತು ಬೆಂಕಿಯ ಕೆನ್ನಾಲಿಗೆ ಕಿಟಿಕಿಗಳ ಮೂಲಕ ಹೊರ ಚಾಚುತ್ತಿರುವ ದೃಶ್ಯ ಆಸುಪಾಸಿನ ಮನೆಗಳ ಮತ್ತು ಪ್ಲ್ಯಾಟ್ ಗಳ ಜನರು ನೋಡಿ ಆತಂಕಗೊಂಡಿದ್ದರು.
ಅಗ್ನಿ ಶಾಮಕ ದಳದವರು ಬಂದು ಒಂದು ಬದಿಯಲ್ಲಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದಾಗ ಇನ್ನೊಂದು ಬದಿಯಲ್ಲಿ ಉರಿಯುತ್ತಲೇ ಇತ್ತು. ಎರಡು ಅಗ್ನಿ ಶಾಮಕ ದಳದ ವಾಹನಗಳೊಂದಿಗೆ ಆಗಮಿಸಿದ್ದ ಸಿಬಂದಿ ಸುಮಾರು ಅರ್ಧ ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ಶಮನಗೊಳಿಸಿದರು. ಈ ನಡುವೆ ಸ್ಥಳೀಯ ಮಾಜಿ ಕಾರ್ಪೊರೇಟರ್ ಲಾನ್ಸಿ ಲಾಟ್ ಪಿಂಟೊ ಕೂಡ ಘಟನ ಸ್ಥಳದಲ್ಲಿ ಇದ್ದು, ಬೆಂಕಿ ನಂದಿಸುವವರೆಗೂ ಪರಿಸ್ಥಿತಿಯನ್ನು ಅವಲೋಕಿಸಿದರು.
ವಿದ್ಯುತ್ ಶಾರ್ಟ್
ಬೆಂಕಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ. ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಆಗಿರಬಹುದೆಂದು ಶಂಕಿಸಲಾಗಿದೆ.
ವಿದ್ಯುತ್ ಸ್ಥಗಿತಗೊಳಿಸಿದೆವು
ಅಪಾರ್ಟ್‌ಮೆಂಟ್‌ನ ತುತ್ತ ತುದಿಯ ಫ್ಲ್ಯಾಟ್ ನಲ್ಲಿ ಬೆಂಕಿ ಕಾಣಿಸಿಕೊಂಡಾಗ ಆತಂಕಗೊಂಡು ಕೆಲವು ಮಂದಿ ಸೇರಿ ಕಟ್ಟಡದ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿ ಮೇಲ್ಗಡೆ ಹೋದೆವು. ಅಲ್ಲಿ ಮನೆಯ ಬಾಗಿಲನ್ನು ಬಲಾತ್ಕಾರವಾಗಿ ತೆರೆದು ಪರಿಶೀಲಿಸಿದಾಗ ಬೆಂಕಿ ಮನೆಯೊಳಗೆ ಪೂರ್ತಿ ವ್ಯಾಪಿಸಿತ್ತು. ಕೆಲವೇ ಸಮಯದಲ್ಲಿ ಅಗ್ನಿ ಶಾಮಕ ದಳದವರು ಆಗಮಿಸಿದರು. ಬಳಿಕ ಅವರ ಬೆಂಕಿ ನಂದಿಸಲು ಅವರ ಜತೆ ನಾವೂ ಕೈಜೋಡಿಸಿದೆವು.
– ಸಚಿನ್ ಡಿ’ಮೆಲ್ಲೊ, ಆಟೋ ಚಾಲಕ