ಪಾಟ್ನಾ: ವೇಗವಾಗಿ ಬಂದ ಎಸ್‌ಯುವಿ(ಬೊಲೆರೋ)ಯೊಂದು ರಸ್ತೆಬದಿ ನಿಂತಿದ್ದ ಶಾಲಾ ಮಕ್ಕಳಿಗೆ ಢಿಕ್ಕಿ ಹೊಡೆದು, 9 ಮಕ್ಕಳು ಸ್ಥಳದಲ್ಲೇ ಅಸುನೀಗಿದಂಥ ಘಟನೆ ಬಿಹಾರದಲ್ಲಿ ಶನಿವಾರ ನಡೆದಿದೆ. ಈ ದುರ್ಘಟನೆಯಲ್ಲಿ 10 ಮಕ್ಕಳು ಗಾಯಗೊಂಡಿದ್ದು, ಈ ಪೈಕಿ 6 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಮಧ್ಯಾಹ್ನ 1.30ರ ವೇಳೆಗೆ ಮುಜಾಫರ್‌ಪುರ ಜಿಲ್ಲೆಯ ಮೀನಾಪುರ್ ಬ್ಲಾಕ್‌ನ ರಾಷ್ಟ್ರೀಯ ಹೆದ್ದಾರಿ -77ರಲ್ಲಿ ಈ ದುರಂತ ಸಂಭವಿಸಿದೆ. ಶನಿವಾರವಾದ್ದರಿಂದ ಆಗಷ್ಟೇ ತರಗತಿ ಮುಗಿಸಿ ಮನೆಗೆ ಹೊರಟಿದ್ದ ಮಕ್ಕಳು ಹೆದ್ದಾರಿ ದಾಟಲೆಂದು ಬದಿಯಲ್ಲಿ ಸಾಲುಗಟ್ಟಿ ನಿಂತಿದ್ದರು. ಅಷ್ಟರಲ್ಲಿ ವೇಗವಾಗಿ ಬಂದ ಎಸ್‌ಯುವಿ ರಸ್ತೆಬದಿ ನಿಂತಿದ್ದ ಮಕ್ಕಳ ಮೇಲೆ ಹರಿದಿದೆ. ಅನಂತರ ಅದು ಮರವೊಂದಕ್ಕೆ ಢಿಕ್ಕಿ ಹೊಡೆದು ನಿಂತಿದೆ. ಸ್ಥಳೀಯರ ಆಕ್ರೋಶಕ್ಕೆ ತುತ್ತಾಗು ತ್ತೇನೆಂಬ ಭಯದಿಂದ ಚಾಲಕ ಅಲ್ಲಿಂದ ಕಾಲ್ಕಿತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಮಕ್ಕಳು 7-12ರ ವಯಸ್ಸಿನವರಾಗಿದ್ದು, 5 ವರ್ಷದ ಒಂದು ಮಗು ಕೂಡ ಅಸುನೀಗಿದೆ. ಇದೇ ವೇಳೆ ಬಿಹಾರ ಸರಕಾರ ಮೃತ ಮಕ್ಕಳ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದೆ. ಗಾಯಾಳುಗಳಿಗೆ ಉಚಿತ ಚಿಕಿತ್ಸೆಯ ಭರವಸೆಯನ್ನೂ ನೀಡಿದೆ.
ಆಗಿದ್ದೇನು?: ಮೊದಲಿಗೆ ಹೆದ್ದಾರಿಯಲ್ಲಿ ಮುಜಾಫರ್‌ಪುರದಿಂದ ಸೀತಾಮಹಿì ಕಡೆಗೆ ತೆರಳುತ್ತಿದ್ದ ಟ್ರಕ್‌ವೊಂದು ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ಢಿಕ್ಕಿ ಹೊಡೆಯಿತು.
ಟ್ರಕ್ ನಿಲ್ಲಿಸದ ಚಾಲಕ, ಘಟನಾ ಸ್ಥಳದಿಂದ ತಪ್ಪಿಸಿ ಕೊಂಡ. ಅಷ್ಟರಲ್ಲಿ ರೊಚ್ಚಿಗೆದ್ದ ಸ್ಥಳೀಯರು ಟ್ರಕ್‌ನತ್ತ ಕಲ್ಲುತೂರಾಟ ನಡೆಸತೊಡಗಿದರು. ಅದೇ ಸಮಯದಲ್ಲಿ ಹೆದ್ದಾರಿಯಲ್ಲಿ ಎಸ್‌ಯುವಿ ಆಗಮಿಸಿದ್ದು, ಸ್ಥಳೀಯರ ಆಕ್ರೋಶಕ್ಕೆ ತನ್ನ ಕಾರು ತುತ್ತಾಗುವುದು ಬೇಡ ಎಂಬಂತೆ ಚಾಲಕನು ಕಾರಿನ ವೇಗ ಹೆಚ್ಚಿಸಿದ್ದು, ಅದು ನಿಯಂತ್ರಣ ತಪ್ಪಿ ದಾರಿ ಬದಿ ಸಾಲಾಗಿ ನಿಂತಿದ್ದ ಮಕ್ಕಳಿಗೆ ಢಿಕ್ಕಿ ಹೊಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.