ಪಾಟ್ನಾ: ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ ಬಳಿಕ ದೇಹವನ್ನು ಊರಿಗೆ ತೆಗೆದುಕೊಂಡು ಹೋಗುವ ವೇಳೆ ಏಕಾಏಕಿ ಪ್ರಜ್ಞೆ ಬಂದು ಎದ್ದಿರುವ ಘಟನೆ ಬಿಹಾರದ ಬೇಗುಸರಾಯ್‌ನಲ್ಲಿ ನಡೆದಿದೆ.
ಮೂಲತಃ ಬೇಗುಸರಾಯ್ ನಲ್ಲಿ ವಾಸಿಸುವ ರಾಮವತಿ ದೇವಿ ಎನ್ನುವ ಮಹಿಳೆ ಫೆ.11 ರಂದು ಇಬ್ಬರು ಮಕ್ಕಳಾದ ಮುರಾರಿ ಶಾವೋ ಮತ್ತು ಘನಶ್ಯಾಮ್ ಶಾವೋ ಜೊತೆ ಛತ್ತೀಸ್‌ಗಢಕ್ಕೆ ಹೋಗಿದ್ದರು. ಈ ವೇಳೆ ಅವರಿಗೆ ಉಸಿರಾಟ ತೊಂದರೆ ಉಂಟಾಗಿದೆ. ಇದನ್ನು ಮಕ್ಕಳ ಬಳಿ ಹೇಳಿದಾಗ, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಛತ್ತೀಸ್‌ಗಢದ ಕೊರ್ವಾ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಾದ ಬಳಿಕ ವೈದ್ಯರು ಮಹಿಳೆಗೆ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ವೇಳೆ ಮಹಿಳೆ ಮೃತಪಟ್ಟಿರುವುದಾಗಿ ಅಲ್ಲಿನ ವೈದ್ಯರು ಹೇಳಿದ್ದಾರೆ.
ತಾಯಿ ನಿಧನರಾಗಿದ್ದಾರೆಂದು ಅವರ ಮೃತದೇಹವನ್ನು ಬೇಗುಸರಾಯ್ ಗೆ ತೆಗೆದುಕೊಂಡು ಹೋಗಲು ಖಾಸಗಿ ವಾಹನದ ವ್ಯವಸ್ಥೆಯನ್ನು ಮಕ್ಕಳು ಮಾಡಿದ್ದಾರೆ. 18 ಗಂಟೆಗಳ ಸುದೀರ್ಘ ಪಯಣದ ನಂತರ ವಾಹನ ಬಿಹಾರದ ಔರಂಗಾಬಾದ್ ತಲುಪಿದಾಗ, ಇದ್ದಕ್ಕಿದ್ದಂತೆ ರಾಮಾವತಿಗೆ ಪ್ರಜ್ಞೆ ಬಂದಿದೆ.
ಮೃತಪಟ್ಟಿರುವುದಾಗಿ ಘೋಷಿಸಿದ ಬಳಿಕ ಪ್ರಜ್ಞೆ ಬಂದು ಎದ್ದು ಕೂತದ್ದನ್ನು ನೋಡಿದ ಮಕ್ಕಳು ಭೀತಿಯಿಂದ ವಾಹನವನ್ನು ಅರ್ಧ ದಾರಿಯಲ್ಲಿ ನಿಲ್ಲಿಸಿದ್ದಾರೆ. ತಾಯಿಯನ್ನು ಮತ್ತೊಮ್ಮೆ ಜೀವಂತವಾಗಿ ನೋಡಿದ ಬಳಿಕ ಬೇಗುಸರೈ ಸದರ್ ಹಾಸ್ಪಿಟಲ್ ಗೆ ಅವರನ್ನು ದಾಖಲಿಸಲಾಗಿದೆ.
ಮಹಿಳೆಯನ್ನು ರಸ್ತೆಯ ಮೂಲಕ ಕರೆತರುತ್ತಿದ್ದಾಗ, ವಾಹನ ಅಲುಗಾಡಿದ್ದು ಅವರಿಗೆ ಅದು ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (ಸಿಪಿಆರ್) ಆಗಿ ಕೆಲಸ ಮಾಡಿರಬಹುದು. ಇದೇ ಕಾರಣದಿಂದ ಅವರಿಗೆ ಪ್ರಜ್ಞೆಗೆ ಮರಳಿರಬಹುದೆಂದು ಎಂದು ವೈದ್ಯರು ಹೇಳಿದ್ದಾರೆ.
ಸದ್ಯ ಮಹಿಳೆಯನ್ನು ಐಸಿಯುಗೆ ದಾಖಲಿಸಲಾಗಿದೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಹೇಳಿರುವುದಾಗಿ ವರದಿ ತಿಳಿಸಿದೆ.