ಪಾಟ್ನಾ: ಪತ್ನಿ ಹಾಗೂ ಮಾಜಿ ಪತ್ನಿ ಇಬ್ಬರು ತನ್ನ ಗಂಡನಿಗೆ ಚಾಕು ಇರಿದು ಹತ್ಯೆಗೈದಿರುವ ಘಟನೆ ಬಿಹಾರದ ಛಾಪ್ರಾದಲ್ಲಿ ನಡೆದಿದೆ.
ಅಲಂಗೀರ್ ಅನ್ಸಾರಿ(45) ಮೃತ ವ್ಯಕ್ತಿ.
ಘಟನೆ ವಿವರ: ಅಲಂಗೀರ್ ಅನ್ಸಾರಿ 10 ವರ್ಷದ ಹಿಂದೆ ಸಲ್ಮಾ ಎನ್ನುವವರನ್ನು ಮದುವೆಯಾಗಿದ್ದರು. ಇಬ್ಬರ ಸಂಬಂಧದಲ್ಲಿ ಬಿರುಕು ಉಂಟಾಗಿ, ಸಲ್ಮಾ ಗಂಡನಿಂದ ದೂರ ಉಳಿದು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. 6 ತಿಂಗಳ ಹಿಂದಷ್ಟೇ ಅನ್ಸಾರಿ ಅಮೀನಾ ಅವರನ್ನು ವಿವಾಹವಾಗಿದ್ದರು. ಇತ್ತೀಚೆಗೆ ಮಾಜಿ ಪತ್ನಿ ಹಾಗೂ ಈಗಿನ ಪತ್ನಿ ಅಮೀನಾ ದಿಲ್ಲಿಯಲ್ಲಿ ಮಾತನಾಡಿಕೊಂಡು ಒಟ್ಟಿಗೆಯೇ ನಗರದಲ್ಲಿ ವಾಸಿಸಲು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಜು.9 ರಂದು ಇಬ್ಬರು ಬಿಹಾರಕ್ಕೆ ಬಂದಿದ್ದರು.ಇತ್ತ ಅಲಂಗೀರ್ ಅನ್ಸಾರಿ ಬಕ್ರೀದ್ ಹಬ್ಬವನ್ನು ಆಚರಿಸಲೆಂದು ದಿಲ್ಲಿಯಿಂದ ಊರಿಗೆ ಬಂದಿದ್ದರು ಎಂದು ವರದಿ ತಿಳಿಸಿದೆ.
ಆದರೆ ಮೂವರು ನಡುವೆ ಯಾವುದೋ ಒಂದು ವಿಚಾರಕ್ಕೆ ವಾಗ್ವಾದ ನಡೆದಿದೆ. ಇಬ್ಬರು ಮಾಜಿ ಪತ್ನಿ ಸಲ್ಮಾ ಹಾಗೂ ಅಮೀನಾ ನಡುವಿನ ವಾಗ್ವಾದ ತಾರಕ್ಕೇರಿದ್ದು, ಈ ನಡುವೆ ಗಂಡ ಅನ್ಸಾರಿಯನ್ನು ಚಾಕುವಿನಿಂದ ಚುಚ್ಚಿ ಇಬ್ಬರು ಕೊಲೆಗೈದಿದ್ದಾರೆ.
ಮೊದಲು ತೀವ್ರವಾಗಿ ಗಾಯಗೊಂಡಿದ್ದ ಅನ್ಸಾರಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆ ಬಳಿಕ ಪಾಟ್ನಾ ವೈದ್ಯಕೀಯ ಕಾಲೇಜಿಗೆ ರವಾನಿಸುವ ಮಾರ್ಗ ಮಧ್ಯದಲ್ಲೇ ಅವರು ಮೃತಪಟ್ಟಿದ್ದಾರೆ.
ಈ ಸಂಬಂಧ ಪೊಲೀಸರು ಇಬ್ಬರು ಮಹಿಳೆಯರನ್ನು ಬಂಧಿಸಿ, ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.