ಹೊಸದಿಲ್ಲಿ : ಸಿವಾನ್ ಪತ್ರಕರ್ತ ರಾಜದೇವ್ ರಂಜನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ, ಆರ್‌ಜೆಡಿ ನಾಯಕ ಮೊಹಮ್ಮದ್ ಶಹಾಬುದ್ದೀನ್ ವಿರುದ್ದ ಚಾರ್ಜ್ ಶೀಟ್ ದಾಖಲಿಸಿದೆ.
ಭಾರತೀಯ ದಂಡ ಸಂಹಿತೆಯಡಿ ಕ್ರಿಮಿನಲ್ ಸಂಚು ಮತ್ತು ಕೊಲೆಗೆ ಸಂಬಂಧಿಸಿದ ಸೆಕ್ಷನ್‌ಗಳ ಪ್ರಕಾರ ಸಿಬಿಐ, ಶಹಾಬುದ್ದೀನ್ ವಿರುದ್ಧ ದೋಷಾರೋಪ ಹೊರಿಸಿದೆ.
ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಇನ್ನೂ ಕೆಲವರ ವಿರುದ್ಧ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದೆ.
2016ರ ಮೇ 13ರಂದು ಸಿವಾನ್‌ನಲ್ಲಿ ಪತ್ರಕರ್ತ ರಾಜದೇವ್ ರಂಜನ್ ತಮ್ಮ ಕಚೇರಿಗೆ ಹೋಗುತ್ತಿದ್ದ ವೇಳೆ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.
ಕೊಲೆ ನಡೆದ ವೇಳೆ ತಾನು ಜೈಲಿನಲ್ಲಿದ್ದೆ ಎಂದು ಶಹಾಬುದ್ದೀನ್ ಹೇಳಿಕೊಂಡಿದ್ದಾನೆ; ಆದರೆ ಸುಳ್ಳು (ಮಂಪರು) ಪರೀಕ್ಷೆಗೆ ಒಳಪಡಲು ನಿರಾಕರಿಸಿದ್ದಾನೆ. ತನಿಖೆಯ ವೇಳೆ ಆತ ತದ್ವಿರುದ್ಧ ಹೇಳಿಕೆಗಳನ್ನು ನೀಡಿದ್ದಾನೆ.
ಶಹಾಬುದ್ದೀನ್ ವಿರುದ್ಧ 39ಕ್ಕೂ ಹೆಚ್ಚು ಕ್ರಿಮಿನಲ್ ಕೇಸುಗಳಿವೆ. ಇವುಗಳಲ್ಲಿ ಕೊಲೆ, ಅಪಹರಣದ ಕೇಸುಗಳೂ ಸೇರಿವೆ. ಈ ವರ್ಷ ಫೆ.18ರಂದು ಆತನನ್ನು ತಿಹಾರ್ ಜೈಲಿಗೆ ವರ್ಗಾಯಿಸಲಾಗಿತ್ತು.