Advertisement
ಯಾರಾದರೂ ಯಾಕೆ ಮನ್ರೇಗಾದಡಿಯಲ್ಲಿ ದೈಹಿಕವಾಗಿ ಕೆಲಸ ಮಾಡಿ 170, 200 ರೂಪಾಯಿ ತೆಗೆದುಕೊಳ್ಳಬೇಕು? ಇದೇ ಕೆಲಸವನ್ನು ಖಾಸಗಿ ಗುತ್ತಿಗೆದಾರನ ಬಳಿ ಮಾಡಿದಲ್ಲಿ 300, 400 ರೂಪಾಯಿ ಸಂಬಳ ಸಿಗುತ್ತದೆ. ಹೀಗಾಗಿ ಮನ್ರೇಗಾ ಉಪಯೋಗವಿಲ್ಲದ ಯೋಜನೆಯಾಗಿದೆ…ಇದು ಬಿಹಾರದ ಭೋಜ್ ಪುರ್ ಜಿಲ್ಲೆಯ ಕಾಕಿಲಾ ಪಂಚಾಯತ್ ನ ಜಗದೀಶ್ ಪುರ್ ಬ್ಲಾಕ್ ನ ಮುಖ್ಯಸ್ಥ ಜಮೀಲ್ ಅಖ್ತರ್ ಆಕ್ರೋಶದ ನುಡಿಗಳು.
Related Articles
Advertisement
ಪೀಪಲ್ಸ್ ಆ್ಯಕ್ಷನ್ ಫಾರ್ ಎಂಪ್ಲಾಯ್ ಮೆಂಟ್ ಗ್ಯಾರಂಟಿ (ಪಿಎಇಜಿ) 2004ರಿಂದ ನರೇಗಾದಡಿ ಕಾರ್ಯನಿರ್ವಹಿಸುತ್ತಿರುವ ಸ್ವತಂತ್ರ ಸಂಸ್ಥೆಯಾಗಿದೆ. 2020ರ ಏಪ್ರಿಲ್ 1ರಿಂದ ಈವರೆಗೆ ಬಿಹಾರ 11.01 ಲಕ್ಷ ಜಾಬ್ ಕಾರ್ಡ್ಸ್ ಅನ್ನು ವಿತರಿಸಿದೆ. ಇಡೀ ದೇಶಾದ್ಯಂತ 83 ಲಕ್ಷ ಜಾಬ್ ಕಾರ್ಡ್ಸ್ ವಿತರಿಸಲಾಗಿದೆ ಎಂದು ವರದಿ ಹೇಳಿದೆ.
ಸರ್ಕಾರದ ವಿರುದ್ಧ ನಿರುದ್ಯೋಗಿ ಮತದಾರರ ಆಕ್ರೋಶ:
ಜಮೀಲ್ ಅವರ ಪ್ರಕಾರ, ನರೇಗಾದಡಿ ಕಾನೂನು ದೋಷಪೂರಿತವಾಗಿದೆ. ಇದರಿಂದ ಕಾರ್ಮಿಕರಾಗಲಿ ಅಥವಾ ಉದ್ಯೋಗದಾತರಿಗೆ ಲಾಭವಾಗುವುದಿಲ್ಲ. ನರೇಗಾದಡಿ ಹೆಸರು ನೋಂದಾಯಿಸಲು ಎಷ್ಟು ಕಷ್ಟ ಇದೆ ಎಂಬುದು ಜನಪ್ರತಿನಿಧಿಗಳಿಗೆ ಮಾತ್ರ ಚೆನ್ನಾಗಿ ತಿಳಿದಿದೆ. ನಾನು 2016ರಲ್ಲಿ ನನ್ನ ಹಳ್ಳಿಯ ಕೆಲವು ಯುವಕರನ್ನು ನರೇಗಾದಡಿ ಸೇರಿಸಿದ್ದೆ. ನಾನೊಂದು ಸಣ್ಣ ಯೋಜನೆಯನ್ನು ಆರಂಭಿಸಿದ್ದೆ. ಆದರೆ ಸಮರ್ಪಕವಾಗಿ ನಡೆಯಲೇ ಇಲ್ಲ. ಅಷ್ಟೇ ಅಲ್ಲ ಸೂಕ್ತ ಸಮಯಕ್ಕೆ ಕೂಲಿ (ಸಂಬಳ) ಬರುವುದೇ ಇಲ್ಲ. ಹೀಗಾಗಿ ಕಾರ್ಮಿಕರು ತಮಗೆ ಬರುವ ಪುಡಿಗಾಸಿಗಾಗಿ ಐದಾರು ತಿಂಗಳು ಯಾಕೆ ಕಾಯಬೇಕು ಎಂಬುದಾಗಿ ಜಮೀಲ್ ಪ್ರಶ್ನಿಸುತ್ತಾರೆ.
ಇದನ್ನೂ ಓದಿ:ಜಪಾನ್ ಕಡಲ ಗಡಿ ಪ್ರವೇಶಿಸಿದ ಚೀನದ ಹಡಗುಗಳು; ಎಚ್ಚರಿಕೆ ಬಳಿಕ ವಾಪಾಸಾದವು
ಬಿಹಾರ ಸರ್ಕಾರದಿಂದ ನಮಗೆ ಜಾಬ್ ಕಾರ್ಡ್ ಸಿಕ್ಕಿದೆ. ಆದರೆ ನಮಗೆ ಈವರೆಗೂ ಯಾವುದೇ ಕೆಲಸ ಸಿಕ್ಕಿಲ್ಲ. ನಮಗೂ ಉದ್ಯೋಗ ಕೊಡಿ ಎಂದು ಅಲವತ್ತುಕೊಂಡು ಸಾಕಾಗಿ ಹೋಗಿದೆ. ನಮ್ಮ ಸ್ಥಿತಿ ಭಿಕ್ಷುಕರಿಗಿಂತಲೂ ಕಡೆಯಾಗಿ ಹೋಗಿದೆ ಎಂದು 50 ವರ್ಷದ ಕೃಷ್ಣಾ ದೇವಿ ಆಕ್ರೋಶ ಹೊರಹಾಕಿದ್ದು ಈ ರೀತಿ!
ಉದ್ಯೋಗವಿಲ್ಲದೆ ಹಸಿವಿನಿಂದ ವಲಸೆ ಕಾರ್ಮಿಕರ ಸಾವು!
ಚುನಾವಣೆ ನಡೆಯಲಿರುವ ಬಿಹಾರದ 32 ಜಿಲ್ಲೆಗಳಲ್ಲಿ ವೈಶಾಲಿ ಕೂಡಾ ಒಂದಾಗಿದೆ. 2020ರ ಜೂನ್ 20ರಂದು ಪ್ರಧಾನಿ ನರೇಂದ್ರ ಮೋದಿ ಅವರು ಗರೀಬ್ ಕಲ್ಯಾಣ್ ರೋಜ್ಗಾರ್ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಇದರ ಮುಖ್ಯ ಉದ್ದೇಶ ವಲಸೆ ಕಾರ್ಮಿಕರಿಗೆ ಉದ್ಯೋಗ ಒದಗಿಸಿಕೊಡುವುದು. ಕೋವಿಡ್ 19 ಸೋಂಕು ಮತ್ತು ಲಾಕ್ ಡೌನ್ ನಿಂದಾಗಿ ಕೆಲಸ ಕಳೆದುಕೊಂಡು ಬಿಹಾರಕ್ಕೆ ವಾಪಸ್ ಆಗಿದ್ದ ವಲಸೆ ಕಾರ್ಮಿಕರಿಗೆ ತುಸು ನಿರಾಳತೆ ಸಿಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಲಾಕ್ ಡೌನ್ ನಿಂದಾಗಿ ದೆಹಲಿ, ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಗುಜರಾತ್, ರಾಜಸ್ಥಾನ್, ಮಧ್ಯಪ್ರದೇಶ, ಕೇರಳ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ಸುಮಾರು 24,19,052 ವಲಸೆ ಕಾರ್ಮಿಕರು ಬಿಹಾರಕ್ಕೆ ವಾಪಸ್ ಆಗಿದ್ದರು. ವಲಸೆ ಕಾರ್ಮಿಕರಿಗೆ ಉದ್ಯೋಗದ ಅವಕಾಶ ನೀಡಲು 12 ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳು ಜತೆಗೂಡಿ ಕಾರ್ಯನಿರ್ವಹಿಸಿದ್ದವು. ಆದರೆ ಯಾರಿಗೂ ಉದ್ಯೋಗ ಸಿಕ್ಕಿರಲಿಲ್ಲ!
ಇದನ್ನೂ ಓದಿ:ಅದೃಷ್ಟದ ಕೆಕೆಆರ್‌ಗೆ ಆರ್‌ಸಿಬಿ ಸವಾಲು: ಕಾರ್ತಿಕ್- ಕೊಹ್ಲಿ ಕಾಳಗದಲ್ಲಿ ಗೆಲುವು ಯಾರಿಗೆ?
ಲಾಕ್ ಡೌನ್ ನಂತರ ನಿತೀಶ್ ಕುಮಾರ್ ಮತ್ತು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಿಹಾರಕ್ಕೆ ವಾಪಸ್ ಆದ ಎಲ್ಲಾ ಕಾರ್ಮಿಕರಿಗೆ ಉದ್ಯೋಗ ಕೊಡುವುದಾಗಿ ಭರವಸೆ ನೀಡಿರುವುದಾಗಿ ಆರ್ ಟಿಐ ಕಾರ್ಯಕರ್ತ ನಿಖಿಲೇಶ್ ತಿಳಿಸಿದ್ದಾರೆ. ಆದರೆ ಆರು ತಿಂಗಳ ನಂತರ ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬ ವರ್ಗ ಹಸಿವಿನಿಂದ ಸಾವನ್ನಪ್ಪತೊಡಗಿದ್ದರು. ಇದರಲ್ಲಿ ಬಹುಪಾಲು ಹಿಂದುಳಿದ ಜಾತಿ ಮತ್ತು ಮಹಾದಲಿತ್ ಸಮುದಾಯಕ್ಕೆ ಸೇರಿದವರು ಎಂದು ವಿವರಿಸಿದ್ದಾರೆ.
ಇದರಿಂದಾಗಿ ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಯುವ ನಿರುದ್ಯೋಗಿ ಮತದಾರರು ತಂಡವನ್ನು ಕಟ್ಟಿಕೊಂಡು ವಿರೋಧ ವ್ಯಕ್ತಪಡಿಸಲು ಸಜ್ಜಾಗುತ್ತಿದ್ದಾರೆ. ಕೆಲಸ ಇಲ್ಲದೆ ಒತ್ತಡಕ್ಕೆ ಒಳಗಾಗಿರುವ ವಲಸೆ ಕಾರ್ಮಿಕರು, ಯುವ ಸಮುದಾಯ ನಿತೀಶ್ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದು, ಚುನಾವಣೆ ಹತ್ತಿರವಾಗುವವರೆಗೂ ಈ ಸರ್ಕಾರ ವಲಸೆ ಕಾರ್ಮಿಕರನ್ನು, ಯುವ ಮತದಾರರನ್ನು ಗಮನಿಸಿಯೂ ಇಲ್ಲ ಎಂಬುದಾಗಿ ವರದಿ ವಿವರಿಸಿದೆ.