Advertisement

ಗೆದ್ದ ಚಿರಾಗ್‌-ಬಿಜೆಪಿ “ಆಟ’!

02:08 AM Nov 11, 2020 | mahesh |

ಬಿಹಾರದಲ್ಲಿ ಎಲ್‌ಜೆಪಿ ನಾಯಕ ಚಿರಾಗ್‌ ಪಾಸ್ವಾನ್‌ “ಆಟ’ ಗೆದ್ದಿದೆ. ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಎಲ್‌ಜೆಪಿ ವಿಫ‌ಲವಾಗಿದ್ದರೂ, ಜೆಡಿಯುವನ್ನು ಮೂರನೇ ಸ್ಥಾನಕ್ಕೆ ತಳ್ಳುವ ತಮ್ಮ ಉದ್ದೇಶವನ್ನು ಚಿರಾಗ್‌ ಈಡೇರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, “ನಿತೀಶ್‌ರನ್ನು ದುರ್ಬಲಗೊಳಿಸುವ’ ಬಿಜೆಪಿಯ ಪ್ಲ್ರಾನ್‌ ಕೂಡ ವಕೌìಟ್‌ ಆಗಿದೆ.

Advertisement

ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, ತೇಜಸ್ವಿ ಯಾದವ್‌ ನೇತೃತ್ವದ ಆರ್‌ಜೆಡಿ ರನ್ನರ್‌ಅಪ್‌ ಆಗಿದೆ. 3ನೇ ಸ್ಥಾನಕ್ಕೆ ತಳ್ಳಲ್ಪಡುವ ಮೂಲಕ ಜೆಡಿಯು ಹೀನಾಯ ಸ್ಥಿತಿಗೆ ತಲುಪಿದೆ. ಬಿಹಾರದಲ್ಲಿ ಈವರೆಗೆ ಎನ್‌ಡಿಎಯ ಕಿರಿಯ ಪಾಲುದಾರನಾಗಿದ್ದ ಬಿಜೆಪಿಯ ಕೈ ಈಗ ಮೇಲಾಗಿದೆ.

ಜೆಡಿಯು ಎಲ್ಲೆಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತೋ, ಅಲ್ಲೆಲ್ಲ ಚಿರಾಗ್‌ ಎಲ್‌ಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಹಾಗಾಗಿ, ಆ ಎಲ್ಲ ಪ್ರದೇಶಗಳಲ್ಲೂ ಜೆಡಿಯುಗೆ ಬೀಳಬೇಕಿದ್ದ ಹಲವು ಮತಗಳು ಎಲ್‌ಜೆಪಿ ಕಡೆಗೆ ವಾಲಿದವು. ಚಿರಾಗ್‌ ಅವರೇನಾದರೂ ನಿತೀಶ್‌ರನ್ನು ಅಷ್ಟೊಂದು ದ್ವೇಷಿಸದೇ ಇರುತ್ತಿದ್ದರೆ, ಸತತ 4ನೇ ಬಾರಿಗೆ ಮುಖ್ಯಮಂತ್ರಿ ಗದ್ದುಗೆಯಲ್ಲಿ ಕುಳಿತುಕೊಳ್ಳಲು ನಿತೀಶ್‌ ಅವರು ಬಿಜೆಪಿಯನ್ನು ಅಷ್ಟೊಂದು ಅವಲಂಬಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿರಲಿಲ್ಲ.

ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ರಚಿಸುವುದು, ಬಿಡುವುದು ನಂತರದ ಮಾತು. ಆದರೆ, ನಿತೀಶ್‌ರನ್ನು ಮೂಲೆಗುಂಪು ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಜೆಡಿಯು ಮತಗಳನ್ನು ವಿಭಜಿಸಲೆಂದೇ ಚಿರಾಗ್‌ರನ್ನು ಬಿಜೆಪಿ ದಾಳವಾಗಿ ಬಳಸಿದೆ ಎಂಬ ಶಂಕೆ ಆರಂಭದಲ್ಲೇ ವ್ಯಕ್ತವಾಗಿತ್ತು. ಮಂಗಳವಾರದ ಫ‌ಲಿತಾಂಶದ ಮೂಲಕ ಅದು ನಿಜವೆಂಬುದು ಸಾಬೀತಾಗಿದೆ.

ಜೆಡಿಯುನಲ್ಲಿ ನಿತೀಶ್‌ ಬಳಿಕ ಪ್ರಮುಖರೆನಿಸಿದ ಯಾವುದೇ ನಾಯಕರಿಲ್ಲದ ಕಾರಣ, ನಿತೀಶ್‌ರ ಜನಪ್ರಿಯತೆ ಕುಗ್ಗಿದಂತೆ ಜೆಡಿಯು ಅಸ್ತಿತ್ವ ಕಳೆದುಕೊಳ್ಳಲಿದೆ. ಜೆಡಿಯುನಲ್ಲಿ ಸದ್ಯಕ್ಕಿರುವ ನಾಯಕರೆಲ್ಲ ಬಿಜೆಪಿಯತ್ತ ವಲಸೆ ಬರಲಿದ್ದಾರೆ. ಆಗ ಬಿಹಾರದಲ್ಲಿ ನಾವು ಭದ್ರವಾಗಿ ನೆಲೆಯೂರಬಹುದು ಎನ್ನುವುದು ಬಿಜೆಪಿಯ ಲೆಕ್ಕಾಚಾರವಾಗಿದೆ. ತನ್ನ ಈ ಕಾರ್ಯತಂತ್ರವನ್ನು ಸಾಧಿಸಲು ಬಿಜೆಪಿ ಚಿರಾಗ್‌ ಪಾಸ್ವಾನ್‌ರನ್ನು ಬಳಸಿಕೊಂಡು, ಅದರಲ್ಲಿ ಯಶಸ್ಸನ್ನೂ ಕಂಡಿದೆ.

Advertisement

ಮೋದಿ ಹೋದಲ್ಲೆಲ್ಲ ಎನ್‌ಡಿಎ ಜಯಭೇರಿ
ಆರ್‌ಜೆಡಿ ಮಾತ್ರವಲ್ಲ ಸ್ವತಃ ಎನ್‌ಡಿಎ ಕೂಟದ ಜೆಡಿಯುಗೂ ಬೆರಗು ಹುಟ್ಟಿಸುವಂತೆ ಬಿಹಾರದಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ಪ್ರಧಾನಿ ನರೇಂದ್ರ ಮೋದಿ ಎಲ್ಲೆಲ್ಲಿ ರ್ಯಾಲಿ ಕೈಗೊಂಡಿದ್ದರೋ ಅಲ್ಲೆಲ್ಲ ಎನ್‌ಡಿಎ ಅಭ್ಯರ್ಥಿಗಳು ಜಯದ ಡಿಂಡಿಮ ಬಾರಿಸಿದ್ದಾರೆ.

ಮೋದಿ ಬಿಹಾರದಲ್ಲಿ ಒಟ್ಟು 12 ಚುನಾವಣಾ ಪ್ರಚಾರ ರ್ಯಾಲಿ ನಡೆಸಿದ್ದರು. ಸಾಸರಾಂ, ಗಯಾ, ಭಾಗಲ್ಪುರ, ದರ್ಭಾಂಗ, ಮುಝಾಫ‌ರ್‌ಪುರ, ಪಾಟ್ನಾ, ಛಪ್ರಾ, ಪೂರ್ವ ಚಂಪಾರಣ್‌, ಪಶ್ಚಿಮ ಚಂಪಾರಣ್‌, ಪಶ್ಚಿಮ ಸಮಷ್ಠಿಪುರ, ಸಹಸ್ರಾ ಮತ್ತು ಫೋರ್ಬ್ಸ್ಗಂಜ್‌ಗಳಲ್ಲಿ ಮೋದಿ ಎನ್‌ಡಿಎ ಅಭ್ಯರ್ಥಿಗಳ ಪರವಾಗಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಇಲ್ಲೆಲ್ಲ ವಿಪಕ್ಷಗಳು ಮುಗ್ಗರಿಸಿಬಿದ್ದಿದ್ದು, ಬಹುತೇಕ ಕಡೆ ಎನ್‌ಡಿಎ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ.

ಮೋದಿ ತಂತ್ರಗಳು: ಪ್ರಧಾನಿ ತಮ್ಮ ಭಾಷಣದ ಉದ್ದಕ್ಕೂ ಎನ್‌ಡಿಎ ಸರ್ಕಾರ ನಡೆಸಿದ ಅಭಿವೃದ್ಧಿ, “ಲಾಲೂ ಯುಗ’ದ ಆರ್‌ಜೆಡಿ ವೈಫ‌ಲ್ಯ- ಇವೆರಡು ಪ್ರಧಾನ ಅಸ್ತ್ರ ಪ್ರಯೋಗಿಸಿದ್ದರು. ಸಿಎಂ ಅಭ್ಯರ್ಥಿ ತೇಜಸ್ವಿಯನ್ನು “ಜಂಗಲ್‌ ರಾಜ್‌ ಕಾ ಯುವರಾಜ್‌’ ಎಂದಿದ್ದು ಮಹಾಘಟ್‌ಬಂಧನ್‌ ಮೈತ್ರಿಗೆ ಬಹುದೊಡ್ಡ ಹಿನ್ನಡೆ. ಗಾಲ್ವಾನ್‌ನಲ್ಲಿನ ಬಿಹಾರ ರೆಜಿಮೆಂಟ್ಸ್‌ ಯೋಧರ ತ್ಯಾಗ ಸ್ಮರಿಸಿದ್ದು, ವಲಸೆ ಕಾರ್ಮಿಕರ ಕಲ್ಯಾಣಕ್ಕೆ ಸರ್ಕಾರ ನೀಡಿದ ಪ್ಯಾಕೇಜ್‌ಗಳು ಕೂಡ ಎಲ್ಲೋ ಒಂದು ಕಡೆ ಎನ್‌ಡಿಎಗೆ ಪ್ಲಸ್‌ ಆದವು.

ರಾಹುಲ್‌ಗೆ ಮಿಶ್ರಫ‌ಲ
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ 7 ಕಡೆಗಳಲ್ಲಿ ಚುನಾವಣಾ ರ್ಯಾಲಿ ನಡೆಸಿದ್ದರು. ಇವುಗಳಲ್ಲಿ 3 ಕಡೆ ಅಂದರೆ, ಕಿಶನ್‌ಗಂಜ್‌, ಹಿಸುವಾ, ಅರಾರಿಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಬಂದಿದೆ. ಉಳಿದಂತೆ 4 ಕಡೆ ಅಂದರೆ ಕಟಿಹಾರ್‌ನಲ್ಲಿ ಬಿಜೆಪಿ, ವಾಲ್ಮೀಕಿ ನಗರ್‌ನಲ್ಲಿ ಜೆಡಿಯು, ಕಹಲ್ಗಾಂವ್‌ನಲ್ಲಿ ಬಿಜೆಪಿ, ಬಿಹಾರಿ ಗಂಜ್‌ ಜೆಡಿಯು ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next